ಗೂಡ್ಸ್ ರಿಕ್ಷಾ-ಕಾರು ಡಿಕ್ಕಿ: ಒಬ್ಬ ಸಾವು


ಬೈಂದೂರು: ಮಂಗಳವಾರ ತಡರಾತ್ರಿ ಇಲ್ಲಿನ ನಾಯ್ಕನಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಟಾಟಾ ಏಸ್ ಗೂಡ್ಸ್ ರಿಕ್ಷಾ ಮತ್ತು ಟಾಟಾ ಇಂಡಿಗೋ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಒಬ್ಬರು ಮೃತಪಟ್ಟಿದ್ದು, 14 ಮಂದಿ ಗಾಯಗೊಂಡಿದ್ದಾರೆ. 

ಟಾಟಾ ಏಸ್ ರಿಕ್ಷಾದಲ್ಲಿ ಸಹಪ್ರಯಾಣಿಕರಾಗಿ ಎದುರುಗಡೆ ಕುಳಿತಿದ್ದ ನಾವುಂದ ಮಸ್ಕಿ ನಿವಾಸಿ ವಿಘ್ನೇಶ ಖಾರ್ವಿ (27) ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿ. ಘಟನೆಯಲ್ಲಿ ಮಂಜುನಾಥ ಖಾರ್ವಿ (20), ಲಕ್ಷ್ಣಣ ಖಾರ್ವಿ (35), ಗೋಪಾಲ ಖಾರ್ವಿ (32), ಪ್ರಶಾಂತ (21), ಓಂಕಾರ(23), ಉಮೇಶ ಮೊಗವೀರ, ನಾಗರಾಜ ಪುತ್ರನ್, ನಾಗರಾಜ ಖಾರ್ವಿ (28), ರಾಜು ಖಾರ್ವಿ (32)ಬಸವರಾಜ್ ಖಾರ್ವಿ (32), ನಾಗರಾಜ(27), ರಮೇಶ ಖಾರ್ವಿ(28) ಸೇರಿದಂತೆ 14 ಮಂದಿ ಗಾಯಗೊಂಡಿದ್ದಾರೆ. 

ಬೈಂದೂರಿನಿಂದ ನಾವುಂದ ಕಡೆ ಸಾಗುತ್ತಿದ್ದ ಗೂಡ್ಸ್ ರಿಕ್ಷಾಕ್ಕೆ ಕುಂದಾಪುರದ ಕಡೆಯಿಂದ ಬೈಂದೂರಿನತ್ತ ಬರುತ್ತಿದ್ದ ಟಾಟಾ ಇಂಡಿಗೊ ಕಾರು ಡಿಕ್ಕಿ ಹೊಡೆದಿದೆ. ಟಾಟಾ ಏಸ್‌ನಲ್ಲಿ ಪ್ರಯಾಣಿಸುತ್ತಿದ್ದವರು ನಾವುಂದ ಮೂಲದವರಾಗಿದ್ದು, ಉಪ್ಪುಂದ ಮಡಿಕಲ್‌ನಲ್ಲಿ ನಡೆದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದಾಗ ಘಟನೆ ನಡೆದಿದೆ ಎನ್ನಲಾಗಿದೆ. ಅಪಘಾತದಿಂದಾಗಿ ಗೂಡ್ಸ್ ರಿಕ್ಷಾದ ಹಾಗೂ ಕಾರಿನ ಮುಂಭಾಗ ಸಂಪೂರ್ಣ ನಜ್ಜು ಗುಜ್ಜಾಗಿದ್ದು, ಗಾಯಾಳುಗಳಲ್ಲಿ ಇಬ್ಬರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ಹಾಗೂ ಉಳಿದವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com