ಮೇ.16ರಂದು ಮತ ಎಣಿಕೆಗೆ ಸಿದ್ಧತೆ

ಉಡುಪಿ: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಮತ ಎಣಿಕೆ ಕುಂಜಿಬೆಟ್ಟಿನ ಟಿ.ಎ. ಪೈ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮೇ 16 ರಂದು ಬೆಳಗ್ಗೆ 8 ಕ್ಕೆ ಆರಂಭವಾಗಲಿರುವ ಮತ ಎಣಿಕೆಗೆ 14 ಟೇಬಲ್ ಬಳಸಲಿದ್ದು, ಮೂರು ಟೇಬಲ್‌ಗಳಲ್ಲಿ ಅಂಚೆ ಮತಗಳ ಎಣಿಕೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ. ಮುದ್ದು ಮೋಹನ್ ಹೇಳಿದ್ದಾರೆ.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 249 ಮತಗಟ್ಟೆಗಳನ್ನೊಳಗೊಂಡ ಶೃಂಗೇರಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಮತಗಳ ಎಣಿಕೆ ಗರಿಷ್ಠ 18 ಸುತ್ತುಗಳಲ್ಲಿ ನಡೆದರೆ ಉಳಿದ ಏಳು ಕ್ಷೇತ್ರಗಳ ಮತ ಎಣಿಕೆ 14ರಿಂದ 17 ಸುತ್ತುಗಳಲ್ಲಿ ನಡೆಯಲಿದೆ. ಬೆಳಗ್ಗೆ 10 ರಿಂದ 10.30 ರೊಳಗೆ ಪೂರ್ಣ ಫಲಿತಾಂಶ ದೊರೆಯಲಿದೆ. 

408 ಮತ ಎಣಿಕೆ ಸಿಬ್ಬಂದಿಯನ್ನು ನಿಯೋಜಿಸಿದ್ದು ಮೇ 14 ರಂದು ಅಭ್ಯರ್ಥಿ ಹಾಗೂ ಏಜೆಂಟರ ಸಭೆ ನಡೆಯಲಿದೆ. ಪ್ರತಿ ಟೇಬಲ್‌ಗೆ ಪ್ರತಿ ಅಭ್ಯರ್ಥಿಗೆ ಒಬ್ಬ ಮತ ಎಣಿಕೆ ಏಜೆಂಟರ ನೇಮಕಕ್ಕೆ ಅವಕಾಶ ಕಲ್ಪಿಸಲಾಗಿದೆ. 

ಪ್ರತಿ ಟೇಬಲ್‌ಗೆ ಮೇಲ್ವಿಚಾರಕರು(1), ಸಹಾಯಕರು(1) ಹಾಗೂ ಮೈಕ್ರೋ ಅಬ್ಸರ್ವರ್(1) ಹಾಗೂ ಅಂಚೆ ಮತಗಳ ಎಣಿಕೆಗೆ ಮೇಲ್ವಿಚಾರಕರು(3), ಸಹಾಯಕರು(6), ಮೈಕ್ರೋ ಅಬ್ಸರ್ವರ್(3) ನಿಯೋಜಿಸಲಾಗುವುದು. 

ಮತ ಎಣಿಕೆ ಅಧಿಕಾರಿ/ಸಿಬ್ಬಂದಿಗಳನ್ನು 2 ಹಂತದ ರ‌್ಯಾಂಡಮೈಸೇಷನ್ ಮೂಲಕ ನಿಯೋಜಿಸಿದ್ದು ಮೂರನೇ ಹಂತದ ರ್‍ಯಾಂಡಮೈಸೇಷನ್ ಮೇ 16 ರ ಬೆಳಗ್ಗೆ 5 ಗಂಟೆಗೆ ಆಯೋಗದ ವೀಕ್ಷಕರ ಸಮಕ್ಷಮ ಗಣಕ ಯಂತ್ರದ ಮೂಲಕ ನಿರ್ವಹಿಸಲಾಗುವುದು. 

ಪ್ರತಿಯೊಬ್ಬ ಸಿಬ್ಬಂದಿಗೆ ಎಸ್‌ಎಂಎಸ್ ಮೂಲಕ ಮೊಬೈಲಿಗೆ ಟೇಬಲ್ ಹಂಚಿಕೆ ವಿವರ ತಿಳಿಸಲಾಗುವುದು. ಅಂಚೆ ಮತ ಪತ್ರಗಳ ಎಣಿಕೆ ಕಾರ್ಯ ಆರಂಭಿಸಿದ 30 ನಿಮಿಷಗಳ ಬಳಿಕ ಮತ ಯಂತ್ರಗಳಲ್ಲಿರುವ ಮತ ಎಣಿಕೆ ಆರಂಭಿಸಲಾಗುವುದು. 

2,978 ಅಂಚೆ ಮತ ಪತ್ರಗಳಲ್ಲಿ 1,135 ಮತ ಪತ್ರಗಳು ತಲುಪಪಿದ್ದು, ಜಿಲ್ಲಾ ಖಜಾನೆಯಲ್ಲಿ ಸುರಕ್ಷಿತವಾಗಿಡಲಾಗಿದೆ. ಅವನ್ನು ಮೇ 16 ರ ಬೆಳಗ್ಗೆ ಮತ ಎಣಿಕೆ ಕೇಂದ್ರಕ್ಕೆ ತರಲಾಗುವುದು. 

ಮತ ಎಣಿಕೆ ಕೇಂದ್ರದ ಒಳಗಡೆ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳನ್ನು ಹೊರತುಪಡಿಸಿ ಉಳಿದವರಿಗೆ ಮೊಬೈಲ್ ಕೊಂಡೊಯ್ಯಲು ಅವಕಾಶವಿಲ್ಲ. ಮತ ಎಣಿಕೆ ಕಾರ್ಯಕ್ಕಾಗಿ ಎನ್‌ಐಸಿ ಸಾಫ್ಟ್‌ವೇರ್ ಬಳಸುತ್ತಿದ್ದು ಸುತ್ತುವಾರು ಮಾಹಿತಿಯನ್ನು ಜಿನೆಸಿಸ್ ಸಾಫ್ಟ್‌ವೇರ್‌ನಲ್ಲಿ ಅಪ್ ಲೋಡ್ ಮಾಡಲಾಗುವುದು. 

ಚುನಾವಣಾ ಏಜೆಂಟರಿಗೆ ನೀಡಿದ ಗುರುತಿನ ಚೀಟಿ ಇಲ್ಲದೆ ಯಾವುದೇ ಚುನಾವಣೆ ಏಜೆಂಟರಿಗೆ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶವಿಲ್ಲ. ಮತ ಎಣಿಕೆ ನಿಟ್ಟಿನಲ್ಲಿ ಬಿಇಎಲ್‌ನಿಂದ ಪೂರೈಸಿದ ಪಡು(ಪ್ರಿಂಟರ್ ಕಮ್ ಆಕ್ಸಿಲರಿ ಡಿಸ್‌ಪ್ಲೇ ಯುನಿಟ್) ಉಪಕರಣ ಹಾಗೂ ಬಿಇಎಲ್ ಸಿಬ್ಬಂದಿ ನೆರವು ಪಡೆಯಲಾಗುತ್ತಿದೆ. ಮದ್ಯ ನಿಷೇಧ: ಮೇ 15 ರ ರಾತ್ರಿ 12 ರಿಂದ ಮೇ 16 ರ ರಾತ್ರಿ 12 ರ ತನಕ ಮದ್ಯಪಾನ ನಿಷೇಧಿತ ದಿನವೆಂದು ಆದೇಶ ಹೊರಡಿಸಲಾಗಿದೆ ಎಂದರು.

ಚುನಾವಣಾ ಮತ ಎಣಿಕೆ ಬಳಿಕ ವಿಜಯೋತ್ಸವವನ್ನು ಯಾವುದೇ ಶಾಂತಿ ಭಂಗವಾಗದಂತೆ ಆಚರಿಸಬೇಕು ಎಂದು ಸೂಚಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com