ಸುಪ್ರೀಂ ಆದೇಶದಂತೆ ಕೇರಳದ ಅನಂತ ದೇಗುಲಕ್ಕೆ ಆಧುನಿಕ ಶೈಲಿ ಭದ್ರತೆ

ತಿರುವನಂತಪುರ: ಒಂದು ಸ್ವಿಚ್‌ ಒತ್ತುತ್ತಿದ್ದಂತೆ ನೆಲದಿಂದ ದಿಢೀರನೆ ಬೇಲಿಗಳು ಎದ್ದು ನಿಲ್ಲುತವೆ. 80 ಕಿ.ಮೀ. ವೇಗದಲ್ಲಿ ಬರುತ್ತಿರುವ 8 ಟನ್‌ ತೂಕದ ವಾಹನವನ್ನೂ ಅವು ನಿಲ್ಲಿಸಿಬಿಡುತ್ತವೆ... ನೆಲದೊಳಗೆ ಯಾರೋ ಸುರಂಗ ಕೊರೆಯಲು ಕೈಹಾಕುತ್ತಿದ್ದಂತೆ ಗಂಟೆ ಮೊಳಗಲು ಆರಂಭಿಸಿಬಿಡುತ್ತದೆ... ಭಾರೀ ತೀವ್ರತೆಯ ಬಾಂಬ್‌ ಸ್ಫೋಟಿಸಿದರೂ ಕಟ್ಟಡಕ್ಕೆ ಒಂಚೂರು ಹಾನಿಯಾಗದು...

ಹಾಲಿವುಡ್‌ ಸಿನಿಮಾಗಳಲ್ಲಿ ಇಂತಹ ಮೈನವಿರೇಳಿಸುವ ದೃಶ್ಯಗಳನ್ನು ನೋಡಿ ನೀವು ಚಪ್ಪಾಳೆ ಹಾಕಿರಬಹುದು. ಸಿಳ್ಳೆ ಹೊಡೆದಿರಬಹುದು. ಆದರೆ ನೀವು ಸಿನಿಮಾಗಳಲ್ಲಿ ಕಂಡಿರುವ ಆ ಬಿಗಿಭದ್ರತಾ ವ್ಯವಸ್ಥೆ ಪ್ರಪಂಚದ ಅತ್ಯಂತ ಶ್ರೀಮಂತ ದೇವಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕೇರಳದ ಅನಂತಪದ್ಮನಾಭ ದೇಗುಲದಲ್ಲಿ ಶೀಘ್ರದಲ್ಲೇ ಜಾರಿಯಾಗುತ್ತಿದೆ.

ಒಂದು ಲಕ್ಷ ಕೋಟಿ ರೂ.ಗೂ ಅಧಿಕ ಮೌಲ್ಯದ ಚಿನ್ನಾಭರಣ, ಮುತ್ತು-ರತ್ನಗಳು ಅನಂತ ಪದ್ಮನಾಭ ಸ್ವಾಮಿ ದೇಗುಲದ ನೆಲಮಾಳಿಗೆಯಲ್ಲಿ ಪತ್ತೆಯಾದ ಬಳಿಕ ಅವನ್ನು ಜತನದಿಂದ ಕಾಪಾಡಿಕೊಳ್ಳುವುದೇ ಭದ್ರತಾ ಪಡೆಗಳಿಗೆ ತಲೆನೋವಾಗಿದೆ. ದಿಢೀರ್‌ ಶ್ರೀಮಂತರಾಗುವ ಆಸೆಯಿಂದ ಈ ದೇಗುಲವನ್ನು ಯಾರಾದರೂ ಚಾಲಾಕಿ ದರೋಡೆಕೋರರು ತಂತ್ರಜ್ಞಾನ ಬಳಸಿ ಕೊಳ್ಳೆ ಹೊಡೆಯಬಹುದು ಎಂಬ ಕಾರಣದಿಂದ ಈ ದೇಗುಲಕ್ಕೆ ಹಾಲಿವುಡ್‌ ಸಿನಿಮಾಗಳಲ್ಲಿ ಕಂಡುಬರುವ ರೀತಿಯಲ್ಲಿ ಭದ್ರತೆ ಒದಗಿಸಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು 'ದ ಹಿಂದು' ವರದಿ ಮಾಡಿದೆ.

ಹೀಗಿರುತ್ತೆ ಭದ್ರತೆ: ದೇಗುಲದ ಮೇಲೆ ವಿಮಾನ ಹಾರಾಟ ನಿರ್ಬಂಧ, ವಾಯು ಸರ್ವೇಕ್ಷಣಾ ವ್ಯವಸ್ಥೆ, ದೇಗುಲದ ಸುತ್ತಲೂ ಬಾಂಬ್‌ ಸ್ಫೋಟ ನಿರೋಧಕ ಗೋಡೆ, ಅದರ ಮೇಲೆ ವಿದ್ಯುತ್‌ ಬೇಲಿ, ದೇಗುಲದ ಬಳಿ ನೆಲದೊಳಗೆ ಸುರಂಗ ಕೊರೆಯುವುದನ್ನು ಪತ್ತೆ ಹಚ್ಚುವ 'ಸೀಸ್ಮಿಕ್‌ ಸೆನ್ಸರ್‌'. ದಿನದ ಇಪ್ಪತ್ನಾಲ್ಕೂ ತಾಸೂ ನಿಗಾ ವಹಿಸುವ ಸರ್ವೇಕ್ಷಣಾ ಕೆಮೆರಾ, ದೇಗುಲಕ್ಕೆ ಬರುವವರ ಸಾಮಾನು- ಸರಂಜಾಮು ತಪಾಸಣೆ ಯಂತ್ರ. ಕಳ್ಳತನಕ್ಕೆ ಯತ್ನಿಸಿದರೆ ಮೊಳಗುವ ಅಲಾರಾಂ. ಭೇಟಿ ನೀಡುವ ಎಲ್ಲರ ಮೇಲೂ ಕಣ್ಣಿಡುವ ವ್ಯವಸ್ಥೆ... ಇವು ಉದ್ದೇಶಿತ ಬಹುಸ್ತರದ ಭದ್ರತಾ ವ್ಯವಸ್ಥೆಗಳು.

ಇದಲ್ಲದೆ, ಅತ್ಯಧಿಕ ವೇಗದಲ್ಲಿ ಬಂದು ದೇಗುಲ ದೋಚುವುದನ್ನು ತಪ್ಪಿಸಲು ಒಂದು ಗುಂಡಿ ಒತ್ತುತ್ತಿದ್ದಂತೆ ಎದ್ದು ನಿಲ್ಲುವ ತಡೆಗೋಡೆಯನ್ನೂ ಅಳವಡಿಸಲು ಭದ್ರತಾಧಿಕಾರಿಗಳು ಮುಂದಾಗಿದ್ದಾರೆ. ಎಲೆಕ್ಟ್ರೋ- ಹೈಡ್ರಾಲಿಕ್‌ ಬೊಲಾರ್ಡ್ಸ್‌, ಸಣ್ಣ ಎತ್ತರದ ಕಂಬಗಳು ಹಾಗೂ ರಸ್ತೆ ತಡೆ ಕಂಬಿಗಳನ್ನು ದೇಗುಲದ ಬಳಿ ಅಳವಡಿಸಲಾಗುತ್ತದೆ. ಗಂಟೆಗೆ 80 ಕಿ.ಮೀ. ವೇಗದಲ್ಲಿ ಬರುವ 8 ಟನ್‌ ತೂಕದ ವಾಹನವನ್ನೂ ಇವು ತಡೆದು ನಿಲ್ಲಿಸುವ ಸಾಮರ್ಥ್ಯ ಹೊಂದಿರಲಿವೆ. ಈಗಾಗಲೇ ಜರ್ಮನಿಯಿಂದ ಈ ಉಪಕರಣ ಬಂದಿಳಿದಿದೆ. ದೇಗುಲದ ನಾಲ್ಕನೇ ಮುಖ್ಯ ಪ್ರವೇಶ ದ್ವಾರದ 50 ಮೀಟರ್‌ ದೂರದಲ್ಲಿ ಅಳವಡಿಸಲಾಗುತ್ತದೆ.

ದೇಗುಲದ ಬಳಿ ಗುಂಡು ನಿರೋಧಕ ಸೆಂಟ್ರಿ ಪೋಸ್ಟ್‌ ಕೂಡ ತೆರೆದು, ಲಘು ಮಷಿನ್‌ಗಳನ್ನು ಅಲ್ಲಿ ನಿಯೋಜಿಸಲಾಗುತ್ತದೆ. ದೇಗುಲದ ಮೇಲೆ ದಾಳಿ ನಡೆದಾಗ ಇಲ್ಲಿಂದ ಪ್ರತಿ ದಾಳಿ ನಡೆಸಲಾಗುತ್ತದೆ.

ದೇಗುಲದಲ್ಲಿ ಅಪಾರ ಸಂಪತ್ತು ಪತ್ತೆಯಾದಾಗಿನಿಂದ ಕಾರ್ಯನಿರ್ವಹಿಸುತ್ತಿರುವ ಭದ್ರತಾ ಕೇಂದ್ರದ ಬದಲಿಗೆ 'ಇಂಟಿಗ್ರೇಟೆಡ್‌ ಕಮ್ಯಾಂಡ್‌ ಅಂಡ್‌ ಕಂಟ್ರೋಲ್‌ ಸೆಂಟರ್‌' ಶೀಘ್ರದಲ್ಲೇ ಆರಂಭವಾಗಲಿದೆ. ಐದು ಸ್ತರ ಭದ್ರತಾ ವ್ಯವಸ್ಥೆಗೆ ಇದು ಕೇಂದ್ರಸ್ಥಾನವಾಗಿರುತ್ತದೆ. ತುರ್ತು ಸಂದರ್ಭದಲ್ಲಿ ಈ ಕೇಂದ್ರ ವೈರ್‌ಲೆಸ್‌, ಇ-ಮೇಲ್‌ ಸಂದೇಶಗಳನ್ನು ಕಾನೂನು ಅನುಷ್ಠಾನ ಸಂಸ್ಥೆ, ತುರ್ತು ಸೇವೆಗಳು ಹಾಗೂ ದೇಗುಲದ ಆಡಳಿತ ಮಂಡಳಿಗೆ ರವಾನೆ ಮಾಡುತ್ತದೆ. ಅಲ್ಲದೆ ಜಾರಿಗೊಳಿಸಲು ಉದ್ದೇಶಿಸಿರುವ ಎಲ್ಲ ಭದ್ರತಾ ವ್ಯವಸ್ಥೆಗಳು ಇದರಡಿಯಲ್ಲೇ ಬರುತ್ತವೆ.

ಸುಪ್ರೀಂಕೋರ್ಟಿನ ಆದೇಶದ ಮೇರೆಗೆ ಈ ಅತ್ಯಾಧುನಿಕ ಭದ್ರತಾ ವ್ಯವಸ್ಥೆ ಏರ್ಪಾಡು ಮಾಡಲಾಗುತ್ತಿದೆ ಎನ್ನಲಾಗಿದೆ.

-ಉದಯವಾಣಿ ಕೃಪೆ
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com