ವಿಶ್ವದ ಬಲಾಡ್ಯ ಕಂಪೆನಿಗಳ ಪಟ್ಟಿಯಲ್ಲಿ ಭಾರತದ 54 ಕಂಪೆನಿಗಳು

ನ್ಯೂಯಾರ್ಕ್‌: Forbes ನಿಯತಕಾಲಿಕವು ಪ್ರಕಟಿಸಿರುವ ವಿಶ್ವದ 2000 ಬೃಹತ್‌ ಮತ್ತು ಬಲಾಡ್ಯ ಕಂಪೆನಿಗಳ ವಾರ್ಷಿಕ ಪಟ್ಟಿಯಲ್ಲಿ ಭಾರತದ 54 ಕಂಪೆನಿಗಳು ಸ್ಥಾನ ಪಡೆದಿವೆ. 

ಭಾರತದ ಬಲಾಡ್ಯ ಕಂಪೆನಿಗಳಲ್ಲಿ ಮುಕೇಶ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಇಂಡಸ್ಟ್ರೀಸ್‌ ಮುಂಚೂಣಿಯಲ್ಲಿದ್ದರೆ ಚೀನದ ಕಂಪೆನಿಗಳು ಪ್ರಥಮ ಮೂರು ಸ್ಥಾನಗಳನ್ನು ಗಿಟ್ಟಿಸಿಕೊಳ್ಳುವ ಮೂಲಕ ಪಾರಮ್ಯವನ್ನು ಮೆರೆದಿವೆ.

ತೈಲ ಮತ್ತು ನೈಸರ್ಗಿಕ ಅನಿಲ (176), ಐಸಿಐಸಿಐ ಬ್ಯಾಂಕ್‌(304),ಟಾಟಾ ಮೋಟಾರ್(332), ಇಂಡಿಯನ್‌ ಆಯಿಲ್‌(416), ಎಚ್‌ಡಿಎಫ್ಸಿ ಬ್ಯಾಂಕ್‌(422), ಕೋಲ್‌ ಇಂಡಿಯಾ(428), ಲಾರ್ಸನ್‌ ಆ್ಯಂಡ್‌ ಟಬ್ರೋ(500), ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌(543), ಭಾರತಿ ಏರ್‌ಟೆಲ್‌(625), ಆ್ಯಕ್ಸಿಸ್‌ ಬ್ಯಾಂಕ್‌(630), ಇನ್ಫೋಸಿಸ್‌(727), ಬ್ಯಾಂಕ್‌ ಆಫ್ ಬರೋಡಾ(801), ಮಹೀಂದ್ರಾ ಆ್ಯಂಡ್‌ ಮಹೀಂದ್ರಾ (803), ಐಟಿಸಿ(830), ವಿಪ್ರೋ(849), ಭಾರತ್‌ ಹೆವಿ ಇಲೆಕ್ಟ್ರಿಕಲ್ಸ್‌(873), ಗೈಲ್‌ ಇಂಡಿಯಾ(955), ಟಾಟಾ ಸ್ಟೀಲ್‌(983) ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಅಲ್ಲದೆ ಭಾರತ್‌ ಪೆಟ್ರೋಲಿಯಂ, ಎಚ್‌ಸಿಎಲ್‌ ಟೆಕ್ನಾಲಜೀಸ್‌, ಹಿಂದೂಸ್ಥಾನ್‌ ಪೆಟ್ರೋಲಿಯಂ, ಅದಾನಿ ಎಂಟರ್‌ಪ್ರೈಸಸ್‌, ಕೋಟಕ್‌ ಮಹೀಂದ್ರಾ ಬ್ಯಾಂಕ್‌, ಸನ್‌ ಫಾರ್ಮಾ ಇಂಡಸ್ಟ್ರೀಸ್‌, ಸ್ಟೀಲ್‌ ಅಥಾರಿಟಿ ಆಫ್ ಇಂಡಿಯಾ, ಬಜಾಜ್‌ ಆಟೋ, ಹೀರೋ ಮೋಟೋಕಾರ್ಪ್‌, ಜಿಂದಾಲ್‌ ಸ್ಟೀಲ್‌ ಆ್ಯಂಡ್‌ ಪವರ್‌, ಗ್ರಾಸಿಮ್‌ ಇಂಡಸ್ಟ್ರೀಸ್‌ ಮತ್ತು ಜೆಎಸ್‌ಡಬ್ಲ್ಯು ಸ್ಟೀಲ್‌ ಕಂಪೆನಿಗಳೂ ಸೇರಿವೆ.

ಈ ಪಟ್ಟಿಯ ಪ್ರಥಮ ಮೂರು ಸ್ಥಾನಗಳಲ್ಲಿ ಚೀನದ ಕಂಪೆನಿಗಳು ಕಾಣಿಸಿಕೊಂಡಿದ್ದು ಪ್ರಥಮ ಹತ್ತರಲ್ಲಿ 5 ಸ್ಥಾನಗಳು ಚೀನ ಕಂಪೆನಿಗಳ ಪಾಲಾಗಿವೆ. 

ಅಮೆರಿಕವು ಪಟ್ಟಿಯಲ್ಲಿ ತನ್ನ ಅಧಿಪತ್ಯವನ್ನು ಮುಂದುವರಿಸಿದ್ದು ಅಮೆರಿಕದ ಒಟ್ಟು 564 ಕಂಪೆನಿಗಳು ವಿಶ್ವದ 2000 ಬಲಾಡ್ಯ ಮತ್ತು ಬೃಹತ್‌ ಕಂಪೆನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಜಪಾನ್‌ನ 225 ಕಂಪೆನಿಗಳು ಈ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ.

ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಭಾರತದ 54 ಕಂಪೆನಿಗಳಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ 50.9 ಶತಕೋಟಿ ಡಾಲರ್‌ಗಳಷ್ಟು ಮಾರುಕಟ್ಟೆ ಮೌಲ್ಯವನ್ನು ಹೊಂದುವ ಮೂಲಕ ಪಟ್ಟಿಯಲ್ಲಿ 135ನೇ ಸ್ಥಾನದಲ್ಲಿದೆ. 

ಫೇಸ್‌ಬುಕ್‌ ಪಟ್ಟಿಯಲ್ಲಿ 510ನೇ ಸ್ಥಾನದಲ್ಲಿದ್ದರೆ ಮಾರಿಷಸ್‌, ಸ್ಲೊವಾಕಿಯಾ ಮತ್ತು ಟೊಗೊ ದೇಶಗಳ ಕಂಪೆನಿಗಳು ಇದೇ ಮೊದಲ ಬಾರಿಗೆ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ. ಒಟ್ಟು 467 ಬ್ಯಾಂಕ್‌ಗಳು ಮತ್ತು ಹಣಕಾಸು ಕಂಪೆನಿಗಳು ಈ ಯಾದಿಯಲ್ಲಿ ಸ್ಥಾನ ಪಡೆದಿದ್ದರೆ 125 ತೈಲ ಮತ್ತು ಅನಿಲ ಕಂಪೆನಿಗಳು, 114 ವಿಮಾ ಕಂಪೆನಿಗಳು ಕಾಣಿಸಿಕೊಂಡಿವೆ.

ಕಂಪೆನಿಗಳ ಆದಾಯ, ಲಾಭ, ಆಸ್ತಿ ಮತ್ತು ಮಾರುಕಟ್ಟೆ ಮೌಲ್ಯಗಳನ್ನು ಆಧರಿಸಿ ವಿಶ್ವದಾದ್ಯಂತದ 62ದೇಶಗಳ ಕಂಪೆನಿಗಳನ್ನು ಪರಿಗಣಿಸಿ ವಿಶ್ವದ ಬೃಹತ್‌ ಮತ್ತು ಬಲಾಡ್ಯ ಕಂಪೆನಿಗಳ 'ಗ್ಲೋಬಲ್‌ 2000' ಪಟ್ಟಿಯನ್ನು ಫೋರ್ಬ್ಸ್  ಪ್ರಕಟಿಸಿದೆ. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com