ಕೋಡಿ, ಆನಗಳ್ಳಿ ಸೇತುವೆ ಮಂಜೂರಿನಲ್ಲಿ ಸಂಸದರ ಪಾತ್ರವಿದೆ: ಆನಗಳ್ಳಿ ಗ್ರಾಪಂ ಅಧ್ಯಕ್ಷ ಹೇಳಿಕೆ

ಕುಂದಾಪುರ: ಮಹತ್ವಾಕಾಂಕ್ಷೆಯ ಕೋಡಿ-ಕುಂದಾಪುರ ಹಾಗೂ ಆನಗಳ್ಳಿ- ಕುಂದಾಪುರ ಸೇತುವೆ ಮಂಜೂರು ವಿಷಯದಲ್ಲಿ ಸಾಕಷ್ಟು ಗೊಂದಲ ತಲೆದೋರಿದ್ದು ಮಹತ್ವಾಕಾಂಕ್ಷೆಯ ಈ ಎರಡು ಸೇತುವೆ ಮಂಜೂರಿನಲ್ಲಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಅವರ ಪಾತ್ರ ಮಹತ್ವದ್ದು ಎಂದು ಆನಗಳ್ಳಿ ಗ್ರಾಪಂ ಅಧ್ಯಕ್ಷ ಸುರೇಶ್ ನಾಯ್ಕ್ ತಿಳಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕುಂದಾಪುರ-ಆನಗಳ್ಳಿ ಸಂಪರ್ಕ ಸೇತುವೆ ಕುರಿತಂತೆ ಕೆಲವು ದಿನಗಳಿಂದ ತಪ್ಪು ಮಾಹಿತಿ ಬಿತ್ತರವಾಗುತ್ತಿದೆ. ಕೋಡಿ ಸೇತುವೆಗೆ ಸಂಬಂಧಿಸಿದಂತೆ ಸಂಸದ ಜಯಪ್ರಕಾಶ್ ಹೆಗ್ಡೆ ಮಾಡಿದ ಪ್ರಯತ್ನ ಉದ್ದೇಶ ಪೂರ್ವಕವಾಗಿಯೇ ಅಲ್ಲಗಳೆದ ರೀತಿಯಲ್ಲಿಯೇ ಆನಗಳ್ಳಿ ಸೇತುವೆ ವಿಷಯದಲ್ಲಿಯೂ ಇದೇ ಚಾಳಿ ಮುಂದುವರಿಸಲಾಗುತ್ತಿದೆ ಎಂದು ಅವರು ತಿಳಿಸಿದರು. 

6 ಕೋಟಿ ರೂ. ವೆಚ್ಚದಲ್ಲಿ ಸೇತುವೆಯ ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿದೆ ಎಂದು ಕುಂದಾಪುರ ಶಾಸಕರ ಅನುಯಾಯಿಗಳು ಹೇಳಿಕೆ ನೀಡಿದ್ದಾರೆ. ಆದರೆ ಸದ್ರಿ ಸೇತುವೆಯ ಪ್ರಸ್ತಾವನೆ ಹಣಕಾಸು ಇಲಾಖೆಯ ಮುಂದಷ್ಟೇ ಇದ್ದು ಅನುಮೋದನೆಗೆ ಇನ್ನೂ ಬಾಕಿ ಇದೆ. ಈ ಸೇತುವೆಯ ಮೂಲ ಯೋಜನೆಯನ್ನು ಮಾರ್ಪಾಡು ಮಾಡಿ ಹಿಂದಿನ ಯೋಜನೆಗಿಂತಲೂ ಹೆಚ್ಚು ಸದೃಢ ಮತ್ತು ಅಗಲ ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಈ ಸಂಬಂಧ ಕಾಗದಪತ್ರ ತ್ವರಿತವಾಗಿ ಸಾಗುತ್ತಿರುವುದರಲ್ಲಿ ಸಂಸದರು ಮುತುವರ್ಜಿ ವಹಿಸಿದ್ದಾರೆ. 

ಕೋಡಿ-ಕುಂದಾಪುರ ಸಂಪರ್ಕ ಸೇತುವೆ ವಿಷಯದಲ್ಲಿಯೂ ಸಂಸದರ ತೆಗೆದುಕೊಂಡ ನಿಲುವು, ಸತತ ಪರಿಶ್ರಮದಿಂದಾಗಿ ಕಾಮಗಾರಿ ಆರಂಭಗೊಳ್ಳುವಲ್ಲಿ ಕಾರಣವಾಗಿದೆ. ಈ ಎಲ್ಲ ವಿಷಯವನ್ನು ಗಾಳಿಗೆ ತೂರಿ ಸಂಸದರ ಮೇಲೆ ಗೂಬೆ ಕೂರಿಸುವ ಯತ್ನ ನಡೆಯುತ್ತಿರುವುದು ದುರದೃಷ್ಟ. ಯೋಜನೆಯ ಪ್ರಯೋಜನ ಪಡೆಯುವ ನಾಗರಿಕರು ಇಂತಹ ಅಪಪ್ರಚಾರಗಳಿಗೆ ಕಿವಿಗೊಡಬಾರದು ಎಂದು ಅವರು ಮನವಿ ಮಾಡಿಕೊಂಡರು. 

ಸುದ್ದಿಗೋಷ್ಠಿಯಲ್ಲಿ ಪುರಸಭೆ ಮಾಜಿ ಸದಸ್ಯ ಕಾಳಪ್ಪ ಪೂಜಾರಿ, ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com