ಕುಂದಾಪುರ: ಪ್ರಗತಿ ಪರಿಶೀಲನಾ ಸಭೆ

ಕುಂದಾಪುರ : ಇಂದು ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆ ಈ ವರ್ಷಕ್ಕೇ ಅಂತ್ಯವಾಗುವುದಿಲ್ಲ. ಮುಂದಿನ ಬಾರಿಯೂ ಕಾಡುತ್ತದೆ. ಕುಡಿಯುವ ನೀರಿನ ಅಭಾವ ಪೂರೈಸಲು ಕೇವಲ ಟ್ಯಾಂಕರ್‌ ಮೂಲಕ ನೀರು ಒದಗಿಸುವುದು ಶಾಶ್ವತ ಪರಿಹಾರವಲ್ಲ. ಕುಡಿಯುವ ನೀರಿನ ಅಭಾವವಿರುವ ಗ್ರಾ. ಪಂ. ಪಂಚಾಯತ್‌ ವ್ಯಾಪ್ತಿಯಲ್ಲಿ ಅನುಕೂಲಕರ ಶಾಶ್ವತ ಯೋಜನೆ ರೂಪಿಸಿಕೊಂಡರೆ ಮುಂದಿನ ವರ್ಷಗಳಲ್ಲಿ ನೀರಿನ ಸಮಸ್ಯೆ ನಿವಾರಿಸಬಹುದು. ಕುಂದಾಪುರ ತಾಲೂಕಿನಾದ್ಯಂತ ಕುಡಿಯುವ ನೀರಿನ ಸಾಕಷ್ಟು ಸಮಸ್ಯೆಗಳಿವೆ. ಈ ಸಮಸ್ಯೆಗಳಿಗೆ ಇಲಾಖೆಗಳು ಈಗಾಗಲೇ ತೆಗೆದುಕೊಂಡ ಕ್ರಮಗಳು ಹಾಗೂ ಈ ಬಗ್ಗೆ ಸಭೆಯ ನಿರ್ಣಯಗಳನ್ನು ಇನ್ನೊಮ್ಮೆ ಪುನರ್‌ವಿಮರ್ಶಿಸಬೇಕಾಗಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್‌ ಸೊರಕೆ ಹೇಳಿದರು.

ಅವರು ಶನಿವಾರ ಕುಂದಾಪುರ ತಾ. ಪಂ. ಸಭಾಂಗಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಪೂರೈಕೆ ಬಗ್ಗೆ ವಿವಿಧ ಗ್ರಾ. ಪಂ. ಅಭಿವೃದ್ಧಿ ಅಧಿಕಾರಿಗಳು, ಜನಪ್ರತಿನಿಧಿಗಳ ಸಮ್ಮುಖದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆ ಉದ್ದೇಶಿಸಿ ಮಾತನಾಡಿದರು.

ಮುಖ್ಯಮಂತ್ರಿಗೆ ಪ್ರಸ್ತಾವ ಸಲ್ಲಿಕೆ

ಈ ಸಭೆಯಲ್ಲಿ ನಡೆದ ಚರ್ಚೆ ಹಾಗೂ ವಿವಿಧ ಗ್ರಾ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಬಗ್ಗೆ ಶಾಶ್ವತ ಯೋಜನೆಗಳಿಗೆ ಬೇಕಾಗುವ ಅನುದಾನಗಳನ್ನು ಪಟ್ಟಿಮಾಡಿ ಮೇ 8ರಂದು ಮುಖ್ಯಮಂತ್ರಿಯವರಲ್ಲಿ ಪ್ರಸ್ತಾವನೆ ಸಲ್ಲಿಸಿ ಹೆಚ್ಚು ಅನುದಾನ ನೀಡುವಂತೆ ಒತ್ತಾಯಿಸಬೇಕಾಗಿದೆ. ಇದರಿಂದ ಈ ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಿರುವ ಅನೇಕ ಪ್ರದೇಶಗಳಲ್ಲಿ ಶಾಶ್ವತ ಯೋಜನೆಗಳನ್ನು ರೂಪಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಮುಂದಿನ ಹತ್ತು ದಿನಗಳಲ್ಲಿ ಇನ್ನೊಮ್ಮೆ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದು, ಮುಂದಿನ ಹಂತದಲ್ಲೂ ಯಾವುದಾದರೂ ಗ್ರಾ. ಪಂ. ಇನ್ನು ಕೂಡಾ ಕುಡಿಯುವ ನೀರಿನ ಅಭಾವ ಕಂಡುಕೊಂಡರೆ ಅದಕ್ಕೆ ಆಯಾ ಪಂಚಾಯತ್‌ನ ಪಿಡಿಒಗಳನ್ನು ಜವಾಬ್ದಾರಿಯನ್ನಾಗಿಸಲಾಗುವುದು. ಸಮಸ್ಯೆ ಇರುವ ಕಡೆ ಉಪವಿಭಾಗಾಧಿಕಾರಿ, ತಹಶೀಲ್ದಾರರು ಸೇರಿಕೊಂಡು ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು. ಕುಡಿಯುವ ನೀರಿಗಾಗಿ ಪ್ರತಿಭಟನೆ ನಡೆಯಬಾರದು. ತಕರಾರು ಬಂದಲ್ಲಿ ಪೊಲೀಸ್‌ ಸಹಕಾರದಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಬೇಕು ಎಂದರು.

ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಶಾಸಕರು

ಕುಂದಾಪುರ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಆಯಾ ಗ್ರಾ.ಪಂ.ನ ಪಿಡಿಒಗಳು ವರದಿ ಮಂಡಿಸಿದರು. ಅದಕ್ಕೆ ಪೂರಕವಾಗಿ ಎಂಜಿನಿಯರಿಂಗ್‌, ಮೆಸ್ಕಾಂ ಅಧಿಕಾರಿಗಳು ಓಲೈಕೆಯ ಉತ್ತರ ನೀಡುತ್ತಾ ಹೋದಂತೆ ಸಿಟ್ಟುಗೊಂಡ ಸಚಿವ ವಿನಯಕುಮಾರ್‌ ಸೊರಕೆ, ಸಮಸ್ಯೆ ಪರಿಹರಿಸಲು ಅಧಿಕಾರಿಗಳು ಚಿಂತಿಸಬೇಕೇ ವಿನಹ ಸಭೆಯಲ್ಲಿ ಜನಪ್ರತಿನಿಧಿಗಳನ್ನು ತೃಪ್ತಿಪಡಿಸಲು ಹಾರಿಕೆ ಉತ್ತರ ನೀಡಬಾರದು. ಸಭೆಯಲ್ಲಿ ಉತ್ತರಿಸಿದ ಮಾತ್ರಕ್ಕೆ ಸಮಸ್ಯೆ ಪರಿಹಾರವಾಗುವುದಿಲ್ಲ. ತುರ್ತು ವ್ಯವಸ್ಥೆಗಾಗಿ ಅಧಿಕಾರಿಗಳು ಕೆಲವು ನಿಯಮ ಸಡಲಿಸುವ ನೀತಿ ಅನುಸರಿಸಿ ಆದಷ್ಟು ಕೂಡಲೇ ಕಾರ್ಯನಿರ್ವಹಿಸಬೇಕಾಗಿದೆ ಎಂದರು.

ಪಿಡಿಒ ಬದಲಾಯಿಸಿ

ಶಾಸಕ ಗೋಪಾಲ ಪೂಜಾರಿ, ಯಡ್ತರೆ ಗ್ರಾ.ಪಂ. ಸಮಸ್ಯೆಗಳ ಬಗ್ಗೆ ಅವಲೋಕನ ಮಾಡುತ್ತಿರುವ ಸಂದರ್ಭ ಪಿಡಿಒ ಕೆಲಸ ನಿರ್ವಹಿಸುತ್ತಿಲ್ಲವಾದರೆ ಅವರನ್ನು ಬದಲಾಯಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನ ಎಲ್ಲ ಕುಡಿಯುವ ನೀರಿನ ಪೂರೈಕೆ ಬಗ್ಗೆ ನಡೆಸುತ್ತಿರುವ ಯೋಜನಾ ಪ್ರದೇಶಗಳಿಗೆ ತಾನೂ ಸಮಿತಿಯೊಂದಿಗೆ ಎರಡು ದಿನಗಳಲ್ಲಿಯೇ ಭೇಟಿ ನೀಡಲಿದ್ದೇನೆ ಎಂದರು.

ತಾಲೂಕಿನಲ್ಲಿ ಪ್ರಸ್ತುತ ಕುಡಿಯುವ ನೀರಿನ ಸಮಸ್ಯೆಯಿಂದ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿರುವ ಗ್ರಾ.ಪಂ. ಸಮಸ್ಯೆಗಳನ್ನು ಆಲಿಸಲಾಯಿತು. ಮತ್ತು ಇಲ್ಲಿ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಗೆ ಕಂಡುಕೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಸಭೆಯಲ್ಲಿ ಶಾಸಕ ಕೆ. ಗೋಪಾಲ ಪೂಜಾರಿ, ವಿಧಾನ ಪರಿಷತ್‌ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ, ತಾ. ಪಂ. ಅಧ್ಯಕ್ಷೆ ದೀಪಿಕಾ ಎಸ್‌. ಶೆಟ್ಟಿ, ಜಿ.ಪಂ. ಉಪಾಧ್ಯಕ್ಷೆ ಮಮತಾ ಆರ್‌. ಶೆಟ್ಟಿ, ಸಹಾಯಕ ಕಮಿಷನರ್‌ ಯೋಗೀಶ್ವರ್‌, ತಹಶೀಲ್ದಾರ್‌ ಗಾಯತ್ರಿ ನಾಯಕ್‌, ಜಿ. ಪಂ. ಶಿಕ್ಷಣ ಹಾಗೂ ಆರೋಗ್ಯ ಸಮಿತಿ ಅಧ್ಯಕ್ಷ ಗಣಪತಿ ಟಿ. ಶ್ರೀಯಾನ್‌, ಜಿ. ಪಂ. ಕಾರ್ಯದರ್ಶಿ ಪ್ರಾಣೇಶ್‌, ಡಿವೈಎಸ್‌ಪಿ ಸಿ.ಪಿ. ಪಾಟೇಲ್‌, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎಡೋಲ್ಪಾಸ್‌ ಫೆರ್ನಾಂಡಿಸ್‌, ವಿವಿಧ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಉಪಸ್ಥಿತರಿದ್ದರು.

-ಉದಯವಾಣಿ ಕೃಪೆ
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com