ಸಿದ್ದು, ಸೋನಿಯಾ ವಿರುದ್ಧ ಹಿರಣ್ಣಯ್ಯ ಅಶ್ಲೀಲ ಪದ ಪ್ರಯೋಗ, ಕ್ಷಮೆಯಾಚನೆ

ಮೈಸೂರು, ಒನ್ ಇಂಡಿಯಾ ಸುದ್ದಿ: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಿರಿಯ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಅವರು ಅಸಾಂವಿಧಾನಿಕ ಪದ ಪ್ರಯೋಗ ಮಾಡಿದ್ದು, ಅನಗತ್ಯ ವಿವಾದ ಹುಟ್ಟುಹಾಕಿದ್ದಾರೆ. ಆದರೆ ತಮ್ಮಿಂದಾದ ಪ್ರಮಾದ ಅರಿವಿಗೆ ಬರುತ್ತಿದ್ದಂತೆ ಅವರು ತಕ್ಷಣ ಕ್ಷಮೆಯಾಚಿಸಿದ್ದಾರೆ. 
       ತಮ್ಮ ಜೀವನದುದ್ದಕ್ಕೂ ರಾಜಕಾರಣಿಗಳ ವಿರುದ್ಧ ಸಾಮೂಹಿಕವಾಗಿ ತಮ್ಮ ವಾಕ್ಝರಿ ಹರಿಸುತ್ತಾ ಬಂದಿರುವ ನಾಡಿನ ಸಾಕ್ಷಿಪ್ರಜ್ಞೆಯಂತಿರುವ ಕಲಾವಿದ ಮಾಸ್ಟರ್ ಹಿರಣ್ಣಯ್ಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ್ದಾರೆ. ಈ ವೇಳೆ ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ಎಂಕೆ ಸೋಮಶೇಖರ್ ಅವರ ಅಭಿಮಾನಿಗಳು ಮಾಸ್ಟರ್ ಹಿರಣ್ಣಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಭಾಂಗಣದಲ್ಲಿದ್ದ ಕುರ್ಚಿಗಳನ್ನು ಪುಡಿಪುಡಿ ಮಾಡುವ ಮೂಲಕ ಸಿದ್ದರಾಮಯ್ಯ ಅಭಿಮಾನಿಗಳು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಶಾಸಕ ಎಂಕೆ ಸೋಮಶೇಖರ್ ಅವರ ಅಭಿಮಾನಿಗಳು ಹೇಳುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವಿರುದ್ಧವೂ ಮಾಸ್ಟರ್ ಹಿರಣ್ಣಯ್ಯ ಅವರು ಕೀಳಾಗಿ ಮಾತನಾಡಿದ್ದಾರೆ ಎನ್ನಲಾಗಿದೆ. ಕಾರ್ಯಕ್ರಮ ಅರ್ಧಕ್ಕೇ ಸ್ಥಗಿತ: ನಗರದ ಕೃಷ್ಣ ಮೂರ್ತಿಪುರಂದಲ್ಲಿರುವ ನಾದಬ್ರಹ್ಮ ಸಂಗೀತ ಸಭಾಂಗಣದಲ್ಲಿ ನಾಗಾಸ್ ನವಸಿರಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿತ್ತು. ಮುಖ್ಯ ಅತಿಥಿಯಾಗಿ ಮಾಸ್ಟರ್ ಹಿರಣ್ಣಯ್ಯ ಅವರು ಭಾಷಣ ಮಾಡುತ್ತಿದ್ದಾಗ ವೀರಾವೇಶದಿಂದ ಮಾತನಾಡತೊಡಗಿದರು. ಆ ವೇಳೆ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದಮೇಲೆ ಸಾಕಷ್ಟು ಬದಲಾವಣೆಯಾಗಿದ್ದಾರೆ. ನಯ ವಿನಯ ಕಳೆದುಕೊಂಡಿದ್ದಾರೆ. ಸಂವೇದನೆ ಕಳೆದುಕೊಂಡಿದ್ದಾರೆ ಎಂದು ಬೈದಾಡುತ್ತಾ ಮಾತನಾಡಿದ ಮಾಸ್ಟರ್ ಹಿರಣ್ಣಯ್ಯ ಅವರು ಒಂದು ಹಂತದಲ್ಲಿ ಕೆಟ್ಟ ಪದ ಬಳಕೆ ಮಾಡಿದ್ದಾರೆ. 

ಉದ್ದೇಶಪೂರ್ವಕ ಅಲ್ಲ; ಕ್ಷಮೆಯಾಚಿಸುವೆ:
 ಮಾಸ್ಟರ್ ಹಿರಣ್ಣಯ್ಯ 'ಉದ್ದೇಶಪೂರ್ವಕವಾಗಿ ಮಾತನಾಡಿಲ್ಲ. ನನ್ನ ಮತ್ತು ಸಿದ್ದರಾಮಯ್ಯ ನಡುವೆ ಉತ್ತಮ ಸ್ನೇಹವಿದೆ. ಬಾಯ್ತಪ್ಪಿ, ನಾನು ಮಾತನಾಡಿರಬಹುದು. ಕಳೆದ ಆರೇಳು ದಶಕಗಳಿಂದ ನಾನು ನಾಟಕ ಮಾಡುತ್ತಾ ಬಂದಿದ್ದೇನೆ. ಯಾವತ್ತೂ ಹೀಗೆ ವೈಯಕ್ತಿಕ ನಿಂದನೆಗೆ ತೊಡಗಿಲ್ಲ. ನನಗೀಗ 81 ವರ್ಷ ವಯಸ್ಸು. ಮನಸ್ಸಿನಲ್ಲಿ ಅವರ ವಿರುದ್ಧ ಯಾವುದೇ ಕೆಟ್ಟ ಭಾವನೆಯಿಲ್ಲ. ಅಚಾನಕ್ಕಾಗಿ ಆಡಿದ ಮಾತಿಗೆ ಮನಃಪೂರ್ವಕವಾಗಿ ಕ್ಷಮೆಯಾಚಿಸುತ್ತೇನೆ. ಕಾಂಗ್ರೆಸ್ ಪಕ್ಷವೇ ಆಗಲಿ ಅಥವಾ ಸಿದ್ದರಾಮಯ್ಯ ಅವರಿಗಾಗಲಿ ನಾನು ಬೇಷರತ್ತು ಕ್ಷಮೆಯಾಚಿಸುತ್ತೇನೆ. ಇದನ್ನು ಇಲ್ಲಿಗೆ ಬಿಟ್ಟುಬಿಡೋಣ' ಎಂದು ಟಿವಿ9ಗೆ ನೀಡಿದ ಪ್ರತಿಕ್ರಿಯೆಯಲ್ಲಿ ಮಾಸ್ಟರ್ ಹಿರಣ್ಣಯ್ಯ ಅವರು ತಿಳಿಸಿದ್ದಾರೆ. ಹಿರಣ್ಣಯ್ಯ-ಸಿದ್ದು ಪರಸ್ಪರ ಭೇಟಿ: ಗಮನಾರ್ಹವೆಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಇದೇ ಸಂದರ್ಭದಲ್ಲಿ ಮೈಸೂರಿನಲ್ಲಿದ್ದು, ಇಬ್ಬರೂ ಪರಸ್ಪರ ಭೇಟಿಯಾಗಿ, ಮನಸಾರೆ ಮಾತನಾಡಿದ್ದಾರೆ. 'ಘಟನೆಯ ಬಗ್ಗೆ ಹಿರಣ್ಣಯ್ಯ ಅವರೊಂದಿಗೆ ಮಾತನಾಡಿರುವೆ. ಅವರು ಕ್ಷಮೆಯಾಚಿಸಿದ್ದಾರೆ. ಹಾಗಾಗಿ ಅದು ಮುಗಿದ ಅಧ್ಯಾಯ. ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಪ್ರತಿಭಟನೆ ಮುಂದುವರಿಸಬಾರದು' ಎಂದು ಸಿದ್ದರಾಮಯ್ಯ ಹೇಳಿದರು. ಮುಖ್ಯಮಂತ್ರಿಗಳ ಭೇಟಿಯಾಗುತ್ತಿದ್ದಂತೆ ಮಾ. ಹಿರಣ್ಣಯ್ಯ ಅವರು ಬೆಂಗಳೂರಿಗೆ ಹೊರಡಲು ಅನುವಾದರು. ಆಗ ಸಿದ್ದರಾಮಯ್ಯ ಅವರು ಹಿರಣ್ಣಯ್ಯ ಅವರನ್ನು ಪೊಲೀಸ್ ಬೆಂಗಾವಲಿನಲ್ಲಿ ಬೆಂಗಳೂರಿಗೆ ಬಿಟ್ಟುಬರುವಂತೆ ಮೈಸೂರು ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದರು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com