ಪಂಕ್ತಿಭೇದ ವಿರುದ್ಧದ ಧರಣಿ ಅಂತ್ಯ

ಉಡುಪಿ: ಶ್ರೀಕೃಷ್ಣಮಠದಲ್ಲಿ ಪಂಕ್ತಿಭೇದ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪಂಕ್ತಿಭೇದ ಮತ್ತು ಮಡೆಸ್ನಾನ ನಿಷೇಧಕ್ಕೆ ಆಗ್ರಹಿಸಿ ಸಿಪಿಐಎಂ ನೇತೃತ್ವದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಧರಣಿ ಸತ್ಯಾಗ್ರಹ ಗುರುವಾರ ಅಂತ್ಯಗೊಂಡಿದೆ. ಧರಣಿ ಅಂತ್ಯಗೊಂಡರೂ ಈ ವಿಚಾರವನ್ನು ಇಲ್ಲಿಗೆ ಕೈಬಿಡುವುದಿಲ್ಲ. ಎಡಪಕ್ಷಗಳು, ಪ್ರಗತಿಪರರ, ಸಾಹಿತಿಗಳು ಒಂದುಗೂಡಿ ಈ ಚಳವಳಿಯನ್ನು ಮುಂದುವರಿಸುವುದಾಗಿ ಸಿಪಿಐಎಂ ಹೇಳಿದೆ. 

ಸಿಪಿಐಎಂ ನಾಯಕ ಯಾದವ ಶೆಟ್ಟಿ ಮಾತನಾಡಿ, ಸಾಮಾಜಿಕ ಅನಿಷ್ಟಗಳನ್ನು ಹೋಗಲಾಡಿಸಲು ಹೋರಾಟ ಮಾಡುವ ಬದಲು, ಜನರನ್ನು ಬೇರೆ ಕಡೆಗೆ ತಿರುಗಿಸುವುದಕ್ಕಾಗಿ ಮುಸ್ಲಿಮರ, ಕ್ರಿಶ್ಚಿಯನ್ನರ ವಿರುದ್ಧ ಎತ್ತಿಕಟ್ಟಲಾಗುತ್ತದೆ ಎಂದು ಆರೋಪಿಸಿದರು. 

ಮಡೆಸ್ನಾನ ನಿಲ್ಲಿಸಬೇಕು ಎಂದು ಎಡಪಕ್ಷಗಳು ಹೋರಾಟ ಮಾಡಿದಾಗ ಪೇಜಾವರ ಶ್ರೀಗಳು ಮಡೆಸ್ನಾನ ನಿಲ್ಲಿಸಲು ನನ್ನದೂ ಒಪ್ಪಿಗೆ ಇದೆ ಆದರೆ ಸಂಪ್ರದಾಯಸ್ಥರು ಒಪ್ಪುತ್ತಿಲ್ಲ ಎಂದು ಹಾರಿಕೆಯ ಉತ್ತರ ನೀಡಿದ್ದರು. ಬೆತ್ತಲೆ ಸೇವೆ ನಿಷೇಧಿಸಲು ಕೂಡ ಸಂಪ್ರದಾಯಸ್ಥರು ಒಪ್ಪಿರಲಿಲ್ಲ. ದೇವದಾಸಿ ಪದ್ಧತಿ ನಿಷೇಧಿಸಲು ಸಂಪ್ರದಾಯಸ್ಥರು ಒಪ್ಪಿರಲಿಲ್ಲ. ಪ್ರಗತಿಪರರ ಹೋರಾಟದ ಬಳಿಕ ಅವು ನಿಷೇಧವಾದವು. ಸ್ವಾಮೀಜಿ ಹಾರಿಕೆಯ, ಬೂಟಾಟಿಕೆಯ ಮಾತು ನಿಲ್ಲಿಸಿ ಮಡೆಸ್ನಾನ ನಿಲ್ಲಿಸಲು, ಪಂಕ್ತಿಭೇದ ನಿಲ್ಲಿಸಲು ಬೆಂಬಲಿಸಬೇಕು ಎಂದು ಆಗ್ರಹಿಸಿದರು. 

ಸಿಪಿಐಎಂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಶಂಕರ್ ಮಾತನಾಡಿ, ಧರಣಿ ಸತ್ಯಾಗ್ರಹವನ್ನು ಇವತ್ತಿಗೆ ಮುಕ್ತಾಯಗೊಳಿಸುತ್ತೇವೆ. ಆದರೆ ಪಂಕ್ತಿಭೇದ, ಮಡೆಸ್ನಾನದ ವಿರುದ್ಧದ ಹೋರಾಟ ಮುಂದುವರಿಯುತ್ತದೆ. ರಾಜ್ಯ ಸರಕಾರ ನಿಷೇಧ ಕಾನೂನು ತರುವವರೆಗೆ ಚಳವಳಿ ನಿಲ್ಲುವುದಿಲ್ಲ. ಜತೆಗೆ ರಾಜ್ಯ ಸರಕಾರ ಕೆಎಸ್‌ಆರ್‌ಟಿಸಿ ಬಸ್ ದರ ಏರಿಕೆ ಮಾಡಿರುವುದನ್ನೂ ನಾವು ಪ್ರತಿಭಟಿಸುತ್ತೇವೆ. ಕೆಎಸ್‌ಆರ್‌ಟಿಸಿ ದರ ಏರಿಸಿರುವುದರಿಂದ ಖಾಸಗಿಯವರಿಗೆ ಜನರನ್ನು ಇನ್ನಷ್ಟು ಲೂಟಿ ಮಾಡಲು ದಾರಿ ಮಾಡಿಕೊಟ್ಟಂತಾಗಿದೆ ಎಂದು ಹೇಳಿದರು. 

ವಿಶ್ವನಾಥ ರೈ, ಬಾಲಕೃಷ್ಣ ಶೆಟ್ಟಿ, ಸಂಜೀವ ನಾಯ್ಕ್, ಸುರೇಶ್ ಕಲಕಾರ್, ಎಚ್. ನರಸಿಂಹ, ವೆಂಕಟೇಶ ಕೋಣಿ, ವಿದ್ಯರಾಜ್ ಮತ್ತಿತರರು ಭಾಗವಹಿಸಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com