ದೇಶಾದ್ಯಂತ ಎತ್ತಿನ ಗಾಡಿ ರೇಸ್‌ಗೆ ನಿಷೇಧ!

ನವದೆಹಲಿ: ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಸುಗ್ಗಿ ಹಂಗಾಮಿನಲ್ಲಿ ರೈತರು ಮನರಂಜನೆಗಾಗಿ ನಡೆಸುವ ಜಲ್ಲಿಕಟ್ಟು (ಹೋರಿ ಬೆದರಿಸುವ ಸ್ಪರ್ಧೆ) ಹಾಗೂ ಚಕ್ಕಡಿ ಅಥವಾ ಎತ್ತಿನ ಗಾಡಿ ಓಟಗಳಿಗೆ ಸುಪ್ರೀಂಕೋರ್ಟ್‌ ಬುಧವಾರ ನಿಷೇಧ ಹೇರಿದೆ.

ಸುಪ್ರೀಂಕೋರ್ಟ್‌ನ ಈ ಆದೇಶವು ಹೋರಿ ಬೆದರಿಸುವ ಮತ್ತು ಚಕ್ಕಡಿ/ಎತ್ತಿನ ಗಾಡಿ ಓಟದ ಸ್ಪರ್ಧೆ ಏರ್ಪಡಿಸುವ ಸಂಪ್ರದಾಯವಿರುವ ಕರ್ನಾಟಕದಲ್ಲಿ ಭಾರಿ ಪರಿಣಾಮ ಬೀರುವ ಸಾಧ್ಯತೆ ಇದೆ.

ಪ್ರಾಣಿಗಳ ಹಕ್ಕಿನ ವ್ಯಾಪ್ತಿಯನ್ನು ವಿಸ್ತರಿಸಿರುವ ನ್ಯಾ|ಕೆ.ರಾಧಾಕೃಷ್ಣನ್‌ ಹಾಗೂ ನ್ಯಾ| ಪಿನಾಕಿ ಚಂದ್ರ ಘೋಷ್‌ ಅವರಿದ್ದ ಪೀಠ, ಹೋರಿ ಬೆದರಿಸುವ ಸ್ಪರ್ಧೆ ಅಥವಾ ಚಕ್ಕಡಿ/ಎತ್ತಿನಗಾಡಿ ಸ್ಪರ್ಧೆಗಳಿಗೆ ಎತ್ತುಗಳ ಬಳಕೆಗೆ ದೇಶಾದ್ಯಂತ ನಿಷೇಧ ಹೇರಿತು.

ಪ್ರಾಣಿಗಳೂ ಸೇರಿದಂತೆ ಎಲ್ಲ ಜೀವ ರಚನೆಗಳು ಗೌರವದಿಂದ ಹಾಗೂ ಶಾಂತಿಯುತವಾಗಿ ಬಾಳುವ, ತಮ್ಮ ಸುರಕ್ಷತೆಯನ್ನು ಕಾಪಾಡಿಕೊಳ್ಳುವ ಹಕ್ಕು ಹೊಂದಿವೆ. ಹೀಗಾಗಿ ಪ್ರಾಣಿಗಳು ಅನುಭವಿಸುವ ಅನಗತ್ಯ ನೋವು ಅಥವಾ ತೊಂದರೆಗಳನ್ನು ತಪ್ಪಿಸಲು ಸರ್ಕಾರಗಳು ಮತ್ತು ಭಾರತೀಯ ಪ್ರಾಣಿ ದಯಾ ಮಂಡಳಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿತು.

ಪ್ರಾಣಿಗಳಿಗೂ ಗೌರವ, ಘನತೆ ಇದೆ. ಅದರಿಂದ ಅವುಗಳನ್ನು ವಂಚಿಸಲಾಗದು. ಪ್ರಾಣಿಗಳ ಹಕ್ಕು ಹಾಗೂ ಖಾಸಗಿತನವನ್ನು ರಕ್ಷಿಸಬೇಕು. ಅಕ್ರಮ ಚಟುವಟಿಕೆಗಳಿಂದ ಅವುಗಳಿಗೆ ರಕ್ಷಣೆ ಒದಗಿಸಬೇಕು. ಎತ್ತುಗಳನ್ನು ಪ್ರದರ್ಶನ ನೀಡುವ ಪ್ರಾಣಿಗಳಂತೆ ಬಳಸಬಾರದು. ಜಲ್ಲಿಕಟ್ಟು ಅಥವಾ ಎತ್ತಿನಗಾಡಿ ಸ್ಪರ್ಧೆಗಳಿಗೆ ಅವನ್ನು ಬಳಸಕೂಡದು ಎಂದು ತಾಕೀತು ಮಾಡಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com