ವಚನಗಳ ತುಳು ಅನುವಾದ ಗ್ರಂಥ 2014 ಡಿಸೆಂಬರ್‌ಗೆ ಸಿದ್ಧ

ಮಂಗಳೂರು : ಬೆಂಗಳೂರಿನ ಬಸವ ಸಮಿತಿ ಹಮ್ಮಿಕೊಂಡಿರುವ 'ವಚನ ಸಾಹಿತ್ಯ: ಬಹು ಭಾಷಾ ಅನುವಾದ ಯೋಜನೆ'ಯಡಿ ವಚನಗಳ ತುಳು ಅನುವಾದ ಕಾರ್ಯ ಕಳೆದ ಫೆಬ್ರವರಿ ತಿಂಗಳಲ್ಲಿ ಆರಂಭವಾಗಿದ್ದು, ಶೇ. 60ಕ್ಕೂ ಹೆಚ್ಚು ಪ್ರಗತಿಯಾಗಿದೆ. ಮುಂದಿನ ಅಕ್ಟೋಬರ್‌ ವೇಳೆಗೆ ಈ ಕೆಲಸ ಪೂರ್ಣಗೊಂಡು 2014 ಡಿಸೆಂಬರ್‌ ವೇಳೆಗೆ ವಚನಗಳ ತುಳು ಅನುವಾದ ಕೃತಿ ಪ್ರಕಟವಾಗುವ ನಿರೀಕ್ಷೆ ಇದೆ.

ವಚನಗಳ ತುಳು ಅನುವಾದ ಯೋಜನೆಯ ಪ್ರಧಾನ ಸಂಪಾದಕರಾದ ಡಾ| ಬಿ.ಎ. ವಿವೇಕ ರೈ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.

ವಚನಗಳ ತುಳು ಅನುವಾದಕರಾಗಿ ಕಾರ್ಯನಿರ್ವಹಿಸುತ್ತಿರುವ ಹತ್ತು ಮಂದಿ ಸಾಹಿತಿಗಳಾದ ಡಾ| ಸುನೀತಾ ಶೆಟ್ಟಿ ಮುಂಬಯಿ, ಡಾ| ವಾಮನ ನಂದಾವರ, ಡಾ| ಪಾಲ್ತಾಡಿ ರಾಮಕೃಷ್ಣ ಆಚಾರ್‌, ಡಾ| ವಸಂತ ಕುಮಾರ್‌ ಪೆರ್ಲ, ಮುದ್ದು ಮೂಡುಬೆಳ್ಳೆ, ಡಾ| ಗಣೇಶ್‌ ಅಮೀನ್‌ ಸಂಕಮಾರ್‌, ಎನ್‌.ಪಿ. ಶೆಟ್ಟಿ ಮೂಲ್ಕಿ, ಜಿ.ಪಿ. ಕುಸುಮ ಮುಂಬಯಿ, ಡಾ| ಕಾತ್ಯಾಯಿನಿ ಕುಂಜಿಬೆಟ್ಟು, ಟಿ.ಎ.ಎನ್‌. ಖಂಡಿಗೆ ಅವರಿಗಾಗಿ ಎರಡು ದಿನಗಳ ಕಮ್ಮಟ ಮೇ 10 ಮತ್ತು 11ರಂದು (ಶನಿವಾರ, ರವಿವಾರ) ನಗರದ ಬಲ್ಮಠದ ಸಹೋದಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.

ಪಾರಿಭಾಷಿಕ ಪದ, ಅಂಕಿತಗಳು, ಸಾಂಸ್ಕೃತಿಕ ಪದಗಳು ಇತ್ಯಾದಿಯಾಗಿ ಅನುವಾದಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆ ಮತ್ತು ಅನುಮಾನಗಳನ್ನು ಪರಿಹರಿಸಿಕೊಳ್ಳುವುದು, ಅನುವಾದದಲ್ಲಿ ಏಕರೂಪತೆ ತರುವುದು, ಬೇರೆ ಬೇರೆ ಅನುವಾದಕರ ಅನುವಾದಗಳನ್ನು ಹೋಲಿಸಿ, ಚರ್ಚಿಸಿ, ಸಮಾನ ಅಭಿವ್ಯಕ್ತಿ ರೂಪಗಳಿಗೆ ಏಕರೂಪತೆ ಕೊಡುವುದು, ಎಲ್ಲ ಅನುವಾದಕರು ತಾವು ಮಾಡಿದ ಅನುವಾದವನ್ನು ವಾಚಿಸುವುದು ಮತ್ತು ಅದಕ್ಕೆ ಉಳಿದ ಅನುವಾದಕರ ಪ್ರತಿಕ್ರಿಯೆ ಕೇಳುವುದು, ಅಗತ್ಯ ಬಿದ್ದರೆ ಪರಿಷ್ಕರಿಸುವುದು, ಅನುವಾದಕ್ಕೆ ಸಂಬಂಧಿಸಿ ಇತರ ಯಾವುದೇ ಸಂಗತಿಗಳನ್ನು ಚರ್ಚಿಸಿ ನಿರ್ಧಾರ ಕೈಗೊಳ್ಳುವುದು ಈ ಕಮ್ಮಟದ ಉದ್ದೇಶ ಎಂದು ಅವರು ವಿವರಿಸಿದರು.

2008ರಲ್ಲಿ 'ವಚನ ಸಾಹಿತ್ಯ: ಬಹು ಭಾಷಾ ಅನುವಾದ ಯೋಜನೆ'ಯನ್ನು ರೂಪಿಸಿ ರಾಜ್ಯ ಸರಕಾರದ ನೆರವಿನಿಂದ ಕಾರ್ಯಾರಂಭಿಸಲಾಗಿತ್ತು. ಹಿರಿಯ ಸಂಶೋಧಕ ಹಾಗೂ ಕನ್ನಡ ವಚನ ಸಾಹಿತ್ಯ ಸಂಪುಟಗಳ ಪ್ರಧಾನ ಸಂಪಾದಕ ಪ್ರೊ| ಎಂ.ಎಂ. ಕಲುºರ್ಗಿ ಅವರು ಆಯ್ದ ವಚನಗಳ ಮೂಲ ಪಠ್ಯವನ್ನು ಸಂಪಾದಿಸಿ ಕೊಟ್ಟಿದ್ದರು ಎಂದು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ತಿಳಿಸಿದರು.

ಒಟ್ಟು ಸುಮಾರು 22,000 ವಚನಗಳು ಸಿಕ್ಕಿವೆ. ಅನುವಾದ ಕಾರ್ಯಕ್ಕೆ ಲೋಕಮಾನ್ಯವಾದ, ಸರಳ ಹಾಗೂ ಸಾಹಿತ್ಯಕವಾದ 2,500 ವಚನಗಳನ್ನು ಮಾತ್ರ ಆಯ್ದುಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಇಂಗ್ಲಿಷ್‌, ಹಿಂದಿ, ಮರಾಠಿ, ತೆಲುಗು, ತಮಿಳು, ಬಂಗಾಲಿ, ಪಂಜಾಬಿ, ಸಂಸ್ಕೃತ ಮತ್ತು ಉರ್ದು ಭಾಷೆಗೆ ಅನುವಾದಿಸುವ ಕಾರ್ಯ ನಡೆದು ಅವು ಗ್ರಂಥ ರೂಪದಲ್ಲಿ ಪ್ರಕಟವಾಗಿದ್ದು, 2013ರಲ್ಲಿ ಬಿಡುಗಡೆಗೊಂಡಿವೆ. ಎರಡನೇ ಹಂತದಲ್ಲಿ ತುಳು, ಸಿಂಧಿ, ಗುಜರಾತಿ, ರಾಜಸ್ಥಾನಿ, ಕಾಶ್ಮೀರಿ, ಒರಿಯಾ, ಕೊಂಕಣಿ, ಮೈಥಿಲಿ, ಸಂತಾಲಿ, ಮಲಯಾಳ ಭಾಷೆಗಳಿಗೆ ಅನುವಾದ ಮಾಡುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಈ ಎಲ್ಲ 10 ಭಾಷೆಗಳ ಗ್ರಂಥಗಳು 2014 ಡಿಸೆಂಬರ್‌ ಒಳಗೆ ಬಿಡುಗಡೆಯಾಗಲಿವೆ ಎಂದು ಪ್ರೊ| ಎಂ.ಎಂ. ಕಲುºರ್ಗಿ ವಿವರಿಸಿದರು.

3ನೇ ಹಂತದಲ್ಲಿ ಇನ್ನುಳಿದ ಭಾರತದ ಭಾಷೆಗಳಿಗೆ ವಚನಗಳ ಅನುವಾದ ಕಾರ್ಯ ನಡೆಯಲಿದೆ. ಬಳಿಕ ವಿದೇಶಿ ಭಾಷೆಗಳಿಗೆ ಅನುವಾದಿಸುವ ಕಾರ್ಯ (ಜಪಾನಿ, ಚೀನಿ, ಸ್ಪಾÂನಿಷ್‌ ಭಾಷೆಗಳಿಗೆ ಅನುವಾದಿಸುವ ಕೆಲಸ ಆರಂಭವಾಗಿದೆ) ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ತುಳು ಭಾಷೆಗೆ ವಚನ ಸಾಹಿತ್ಯ ಅನುವಾದಗೊಳ್ಳುತ್ತಿರುವುದರಿಂದ ತುಳು ಭಾಷೆಗೆ ಸಾಂವಿಧಾನಿಕ ಸ್ಥಾನಮಾನ ದೊರೆಯಲು ಪೂರಕವಾಗಲಿದೆ ಎಂದು ಭಾವಿಸಲಾಗಿದೆ ಎಂದು ಡಾ| ಬಿ.ಎ. ವಿವೇಕ ರೈ ತಿಳಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com