ರೈಲ್ವೆ ಸ್ಟೇಶನ್‌ ಬಳಿ ಬಾಲಕ ಪತ್ತೆ; ಸ್ಫೂರ್ತಿ ಧಾಮಕ್ಕೆ ದಾಖಲು

ಕುಂದಾಪುರ: ಬುಧವಾರ ರಾತ್ರಿ ಉಡುಪಿ ರೈಲ್ವೆ ಸ್ಟೇಶನ್‌ನ ಪ್ಲಾಟ್‌ಫಾರಂ ನಂ-1ರಲ್ಲಿ ಅಳುತ್ತಾ ಅಲೆದಾಡುತ್ತಿದ್ದ 6 ವರ್ಷದ ಬಾಲಕನನ್ನು ವಶಕ್ಕೆ ಪಡೆದ ರೈಲ್ವೆ ಪೊಲೀಸರು ಬೇಳೂರು ಸ್ಫೂರ್ತಿ ಧಾಮಕ್ಕೆ ದಾಖಲಿಸಿದ್ದಾರೆ. 

ಅಳುತ್ತಾ ತಿರುಗಾಡುತ್ತಿದ್ದ ಬಾಲಕನನ್ನು ಪೊಲೀಸರು ಸಂತೈಸಲೆತ್ನಿಸಿದಾಗ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದ. ನಂತರ ಆತನನ್ನು ರಕ್ಷಿಸಿ ಪೂರ್ವಾಪರ ತಿಳಿಯಲು ಪ್ರಯತ್ನಿಸಿದಾಗ ಅಳುವೊಂದೇ ಆತನ ಉತ್ತರವಾಗಿತ್ತು. ಪೊಲೀಸರು ಬಳಿಕ ಉಡುಪಿ ವೃತ್ತದ ಕಾರ್ಮಿಕ ನಿರೀಕ್ಷಕರ ನಿರ್ದೇಶನದ ಮೇರೆಗೆ ಬೇಳೂರಿನ ಸ್ಫೂರ್ತಿ ಧಾಮಕ್ಕೆ ಸಂಪರ್ಕಿಸಿದರು. ಸ್ಫೂರ್ತಿ ಧಾಮದ ಮುಖ್ಯಸ್ಥ ಡಾ. ಕೇಶವ ಕೋಟೇಶ್ವರ ತಕ್ಷಣ ಕಾರ್ಯಪವೃತ್ತ್ತರಾಗಿ ರಾತ್ರಿ 11.30ರ ಸುಮಾರಿಗೆ ಸ್ಟೇಶನ್‌ನಲ್ಲಿ ಮಗುವನ್ನು ವಶಕ್ಕೆ ತೆಗೆದುಕೊಂಡು ಸ್ಫೂರ್ತಿಧಾಮದ ಪುನರ್‌ವಸತಿ ಕೇಂದ್ರದಲ್ಲಿ ಆಸರೆ ನೀಡಿದ್ದಾರೆ. 

ರೈಲ್ವೆ ಪೊಲೀಸರ ಸಮಯೋಚಿತ ಕ್ರಮದಿಂದ ಬಾಲಕ ಸುರಕ್ಷಿತವಾಗಿದ್ದಾನೆ. ಅಂದಾಜು 6 ವರ್ಷ ಪ್ರಾಯದವನಾಗಿದ್ದು ಕಪ್ಪು-ಬಣ್ಣ, ಕೋಲು ಮುಖ, 47ಇಂಚು ಎತ್ತರ 18 ಕೆಜಿ ತೂಕ ಹೊಂದಿದ್ದಾನೆ. ಹೆಸರು ಫಾರೂಕ್, ತಂದೆ ಬಾಬು, ತಾಯಿ ರೆಜಿನಾ ಎಂದು ಹೇಳುತ್ತಾನೆ. ಮಹಾರಾಷ್ಟ್ರದ ಇಂಡಿಯಿಂದ ಬಂದವನೆಂದು ಹೇಳುತ್ತಾನೆ. ವಾರೀಸುದಾರರು ಯಾರಾದರೂ ಇದ್ದಲ್ಲಿ ಸ್ಫೂರ್ತಿಧಾಮ ಸಂಪರ್ಕಿಸುವಂತೆ (9448984119) ಪ್ರಕಟಣೆ ತಿಳಿಸಿದೆ. 

ಬಾಲಕನ ಕೈಯಲ್ಲಿ ಅಮಲು ಪದಾರ್ಥ: ಬಾಲಕನಲ್ಲಿ 335 ರೂ. ನಗದು ಹಾಗೂ 2 ಫೆವಿ ಬ್ಯಾಂಡ್ ಸೆಲ್ಯೂಷನ್ ಟ್ಯೂಬ್ ದೊರಕಿದೆ. ಈ ಸೆಲ್ಯೂಷನ್ ಇನ್‌ಹೇಲ್ (ಆಘ್ರಾಣಿಸಿದರೆ) ಮಾಡಿದರೆ ಅಮಲಾಗುವುದು. ಇಂತಹ ಪದಾರ್ಥವನ್ನು ಮಕ್ಕಳ ಕೈಗೆಟುಕುವಂತೆ ಮಾರಾಟ ಮಾಡುವುದು ಮಾನವೀಯ ಲಕ್ಷಣವಲ್ಲ. ಮಕ್ಕಳನ್ನು ಇಂತಹ ದುಷ್ಕೃತ್ಯಕ್ಕೆ ಬಳಸುವ ಶಂಕೆ ಇದರಿಂದ ವ್ಯಕ್ತವಾಗಿದೆ ಎಂದು ಕೇಶವ ಕೋಟೇಶ್ವರ ತಿಳಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com