ರೈಲು ದರ ಏರಿಕೆ ಅನಿವಾರ್ಯ, ಕಸ್ತೂರಿರಂಗನ ವರದಿಯ ಬಗ್ಗೆ ಕೇಂದ್ರದ ಗಮನ ಸೆಳೆಯಲಾಗುವುದು: ಬಿ.ಎಸ್.ವೈ

ಕೊಲ್ಲೂರು: ಕೇಂದ್ರ ಸರ್ಕಾರ ಹೇಳಿರುವಂತೆ ಹಿಂದಿ ಭಾಷೆಯ ಹೇರಿಕೆ ಕಡ್ಡಾಯ ಮಾಡಲಾಗುವುದಿಲ್ಲ. ಪ್ರಾದೇಶಿಕ ಭಾಷೆಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಶಿವಮೊಗ್ಗ-ಬೈಂದೂರು ಸಂಸದ ಬಿ.ಎಸ್‌. ಯಡಿಯೂರಪ್ಪ ಹೇಳಿದರು.
      ವಂಡ್ಸೆಯ ಬಿಜೆಪಿ ಬೈಂದೂರು ಕ್ಷೇತ್ರಾಧ್ಯಕ್ಷ ಬಿ.ಎಂ. ಸುಕುಮಾರ ಶೆಟ್ಟಿ ಅವರ ನಿವಾಸದಲ್ಲಿ  ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಲ್ಲಿಕಾರ್ಜುನ ಖರ್ಗೆ ರೈಲ್ವೇ ಸಚಿವರಾಗಿದ್ದಾಗ ಬಜೆಟ್‌ನಲ್ಲಿ ರೈಲ್ವೇ ದರ ಹೆಚ್ಚಿಸುವುದರ ಬಗ್ಗೆ ಹೇಳಿದ್ದರು. ಬೊಕ್ಕಸ ಸರಿದೂಗಿಸಲು ದರ ಏರಿಕೆ ಅನಿವಾರ್ಯ. ದೇಶದಲ್ಲೇ ನಿರೀಕ್ಷೆ ಮಾಡದ ರೀತಿಯಲ್ಲಿ ಹಣಕಾಸು ಸ್ಥಿತಿ ಹದಗೆಟ್ಟಿರುವುದಕ್ಕೆ ಯುಪಿಎ ಸರಕಾರ ಕಾರಣವಾಗಿದ್ದು, ಬಿಜೆಪಿ ಸರಕಾರಕ್ಕೆ ಮುಂದಿನ 6 ತಿಂಗಳು ಸರ್ಕಸ್‌ ಮಾಡಬೇಕಾದ ಅನಿವಾರ್ಯತೆ ಇದೆ ಎಂದರಲ್ಲದೇ ರೈಲ್ವೇ ಸಚಿವ ಸದಾನಂದ ಗೌಡ ಮಂಗಳೂರು ರೈಲ್ವೇ ವಲಯ ಮಾಡಲು ಪ್ರಯತ್ನಿಸುತ್ತಿದ್ದು, ಆ ಬಗ್ಗೆ ಅವರಲ್ಲಿ ಚರ್ಚಿಸಿರುವುದಾಗಿ ಹೇಳಿದರು.
        ಕಸ್ತೂರಿ ರಂಗನ್‌ ವರದಿಯ ಕುರಿತು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಅದನ್ನು ಪುನರ್‌ ಪರಿಶೀಲನೆ ನಡೆಸಿ ವಾಸ್ತವವನ್ನು ಕೇಂದ್ರ ಸರಕಾರದ ಮುಂದೆ ಮಂಡಿಸಲಾಗುವುದು. ಕರಾವಳಿ ಹಾಗೂ ಪಶ್ಚಿಮಘಟ್ಟದ ನಿವಾಸಿಗಳಿಗೆ ಯಾವುದೇ ತೊಂದರೆಯಾಗದಂತೆ ನಿಗಾವಹಿಸಿ ಸರಕಾರಕ್ಕೆ ಮನದಟ್ಟು ಮಾಡಿಕೊಡಲಾಗುವುದು. ಬೈಂದೂರನ್ನು ಮಾದರಿ ಕ್ಷೇತ್ರವಾಗಿ ಮಾಡಲು ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುವೆ ಎಂದರು.
     ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ.ಎಂ. ಸುಕುಮಾರ ಶೆಟ್ಟಿ, ಮಾಜಿ ಸಂಸದ ಬಿ.ವೈ. ರಾಘವೇಂದ್ರ, ಬೈಂದೂರು ಕ್ಷೇತ್ರ ಬಿಜೆಪಿ ಮುಖಂಡರಾದ ಸದಾನಂದ ಶೇರುಗಾರ್‌, ನ್ಯಾಯವಾದಿ ಕೆ.ಬಿ. ಶೆಟ್ಟಿ, ಜಿ.ಪಂ. ಸದಸ್ಯೆ ಇಂದಿರಾ ಶೆಟ್ಟಿ, ಬಾಂಡ್ಯಾ ಸುಭಾಶ್ಚಂದ್ರ ಶೆಟ್ಟಿ, ದೀಪಕ್‌ ಕುಮಾರ್‌ ಶೆಟ್ಟಿ, ಡಾ| ಅತುಲ್‌ ಕುಮಾರ್‌ ಶೆಟ್ಟಿ, ನಾರಾಯಣ್‌ ನಾಯಕ್‌ ನೇರಳಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.

* ನಾನು ಮುಖ್ಯಮಂತ್ರಿಯಾಗಿದ್ದಾಗ ಮರವಂತೆ, ಕೊಡೇರಿ, ಶಿರೂರು ಬಂದರು ಪ್ರದೇಶ ಅಭಿವೃದ್ಧಿಗೆ ಹಣ ನೀಡಲಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಯಡ್ತರೆ, ಸೇನಾಪುರ, ಬಡಾಕೆರೆ, ಹಡವು ಮುಂತಾದ ಪ್ರದೇಶಗಳಿಗೆ ಸುಮಾರು 50 ಕೋ. ರೂ. ಬಿಡುಗಡೆ ಮಾಡಲಾಗಿದೆ - ಬಿ.ಎಸ್.ವೈ
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com