ಭಟ್ಕಳ ಡೆಮೋ ರೈಲು ಮುರ್ಡೇಶ್ವರದಿಂದಲೇ ಹೊರಡಲಿ


ಉಡುಪಿ: ಭಟ್ಕಳ-ಮಂಗಳೂರು ಡೆಮೋ ರೈಲನ್ನು ಮುರ್ಡೇಶ್ವರದಿಂದಲೇ ಆರಂಭಿಸಬೇಕು ಹಾಗೂ ಎರ್ನಾಕುಲಂ-ಪನ್ವೆಲ್-ಪುಣೆ ರೈಲಿಗೆ ಉಡುಪಿಯಲ್ಲಿ ತುರ್ತು ಟಿಕೆಟ್ ನೀಡುವ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಮೇಲೆ ಒತ್ತಡ ಹೇರಬೇಕು ಎಂದು ಉಡುಪಿ ರೈಲ್ವೆ ಯಾತ್ರಿ ಸಂಘ ಶಾಸಕ ಪ್ರಮೋದ್ ಮಧ್ವರಾಜ್ ಅವರನ್ನು ಒತ್ತಾಯಿಸಿದೆ. 

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷ ಆರ್.ಎಲ್. ಡಯಾಸ್, ಸಂಘದ ಮನವಿಯನ್ನು ಕೊಂಕಣ ರೈಲ್ವೆಯ ಸಲಹಾ ಸಮಿತಿ ಸದಸ್ಯರೂ ಆಗಿರುವ ಶಾಸಕ ಪ್ರಮೋದ್ ಮಧ್ವರಾಜ್ ಅವರಿಗೆ ಸಲ್ಲಿಸಿದರು. ವಿಷಯದ ಮಹತ್ವವನ್ನು ಅರಿತ ಶಾಸಕರು ಕೊಂಕಣ ರೈಲ್ವೆ ಅಧ್ಯಕ್ಷರಿಗೆ ಪತ್ರ ಬರೆಯುವ ಮೂಲಕ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. 

ಕಳೆದ ಫೆ.23ರಂದು ಪ್ರಾರಂಭಗೊಂಡ ಭಟ್ಕಳ-ಮಂಗಳೂರು ಪ್ಯಾಸೆಂಜರ್ ಡೆಮೋ ರೈಲಿಗೆ ಭಟ್ಕಳದಲ್ಲಿ ತಂಗಲು ಹೆಚ್ಚುವರಿ ಟ್ರ್ಯಾಕ್ ಇಲ್ಲದ ಕಾರಣ ಅದು 21 ಕಿ.ಮೀ.ಪ್ರಯಾಣಿಸಿ ಮುರ್ಡೇಶ್ವರದಲ್ಲಿ ತಂಗುತ್ತಿದೆ. ಅಲ್ಲಿಂದ ಬೆಳಗ್ಗೆ 5.30ಕ್ಕೆ ಹೊರಟು ಭಟ್ಕಳವನ್ನು ತಲುಪಿ ತನ್ನ ಪ್ರಯಾಣವನ್ನು ಅದು ಆರಂಭಿಸುತ್ತಿದೆ. ಹೀಗೆ ಅದು ಸುಮಾರು 42 ಕಿ.ಮೀ. ದೂರವನ್ನು ಪ್ಯಾಸೆಂಜರ್‌ಗಳಿಲ್ಲದೆ ಖಾಲಿಯಾಗಿ ಓಡುತ್ತಿದೆ. 

ಈಗಾಗಲೇ ನಷ್ಟದಲ್ಲಿರುವ ಕೊಂಕಣ ರೈಲ್ವೆಗೆ ಇದು ಇನ್ನಷ್ಟು ಹೊರೆಯಾಗಲಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಭಟ್ಕಳ-ಮಂಗಳೂರು ಡೆಮೋ ರೈಲನ್ನು ಮುರ್ಡೆಶ್ವರದಿಂದಲೇ ಆರಂಭಿಸಿದರೆ ಪ್ರಯಾಣಿಕರಿಗೆ ಅನೂಕೂಲವಾಗಲಿದೆ ಅಲ್ಲದೆ ರೈಲ್ವೆಗೆ ಆದಾಯವೂ ಬರುತ್ತದೆ. ಈ ಬಗ್ಗೆ ಸಂಘ ಹಲವಾರು ಬಾರಿ ಕೊಂಕಣ ರೈಲ್ವೆ ಅಧಿಕಾರಿಗಳಿಗೆ ಪತ್ರ ಬರೆದಿದ್ದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಶಾಸಕ ಪ್ರಮೋದ್ ಮಧ್ವರಾಜ್ ಅವರ ಗಮನಕ್ಕೆ ತರಲಾಗಿದೆ ಎಂದು ಅವರು ವಿವರಿಸಿದ್ದಾರೆ. 

ಎರ್ನಾಕುಲಂ-ಪನ್ವೆಲ್-ಪುಣೆ ರೈಲಿಗೆ ತುರ್ತು ಟಿಕೆಟ್ ನೀಡುವ ಅಧಿಕಾರವನ್ನು ಉಡುಪಿಯ ಸಹಾಯಕ ಕಮರ್ಶಿಯಲ್ ಮ್ಯಾನೇಜರ್ ಅವರಿಗೆ ನೀಡಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಶಾಸಕ ಪ್ರಮೋದ್ ಅವರು ಸೆಂಟ್ರಲ್ ರೈಲ್ವೆಗೆ ಪತ್ರ ಬರೆದಿದ್ದಾರೆ. ಶಾಸಕರ ಈ ಕ್ರಮವನ್ನು ಯಾತ್ರಿ ಸಂಘ ಸ್ವಾಗತಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com