ಕೋಟಿ - ಚೆನ್ನಯ ಕ್ರೀಡಾಕೂಟ

ಬಿಲ್ಲವ ಅಸೋಸಿಯೇಶನ್ ಬೆಂಗಳೂರು ವತಿಯಿಂದ ಆಯೋಜಿಸಿದ ಕ್ರೀಡಾಕೂಟ

ಬೆಂಗಳೂರು: ಇಲ್ಲಿನ ಬಿಲ್ಲವ ಅಸೋಸಿಯೇಶನ್ ವತಿಯಿಂದ ಗಾಂಧಿನಗರ ಸೆಂಟ್ರಲ್ ಕಾಲೇಜು ಕ್ರೀಡಾಂಗಣದಲ್ಲಿ  ಕೋಟಿ-ಚೆನ್ನಯ ಕ್ರೀಡಾಕೂಟ ವಿಜೃಂಭಣೆಯಿಂದ ನಡೆಯಿತು.  ಕರ್ನಾಟಕ ಸರಕಾರದ ಯುವಜನ ಸೇವಾ ಹಾಗೂ ಮೀನುಗಾರಿಕಾ ಸಚಿವ  ಕೆ. ಅಭಯ್ ಚಂದ್ರ ಜೈನ್ ಧ್ವಜಾರೋಹಣಗೈದು ದೀಪ ಬೆಳಗಿಸಿ ಕ್ರೀಡಾಕೂಟವನ್ನು ಉದ್ಘಾಟಿಸಿ  ಮಾತನಾಡಿ ಸಮಾಜದ ಏಳಿಗೆಗಾಗಿ, ಸಮಾಜದಲ್ಲಿನ ಕುಂದು ಕೊರತೆ ನೀಗಿಸಲು ಇಂತಹ ಕ್ರೀಡಾಕೂಟದ ಅವಶ್ಯಕತೆ ಇದೆ. ಬ್ರಹ್ಮಶ್ರೀ ನಾರಾಯಣ ಗುರುಗಳು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಸುಧಾರಣೆಯನ್ನು ತಂದರು. ಶಿಕ್ಷಣದ ಮುಖಾಂತರ ಎಲ್ಲರಿಗೂ ಸಮಾನವಾದ ಅವಕಾಶ ಸಿಕ್ಕಿದೆ.  ಜನಾರ್ಧನ ಪೂಜಾರಿಯವರು ತಂದ ಕ್ರಾಂತಿಕಾರಿ ಬೆಳವಣಿಗೆಯಿಂದಾಗಿ ಎಲ್ಲ ಬಡವರು ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗಿದೆ. ನಾಡಿನ ಕ್ರೀಡಾಪಟುಗಳಿಗೆ ಸಹಾಯ ಮಾಡಲು ಅಭಿಮಾನವಾಗುತ್ತದೆ ಎಂದರು.
  ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಂತರಾಷ್ಟ್ರೀಯ ಕ್ರೀಡಾಪಟು ಶ್ರೀಮತಿ ಸಹನಾ ಕುಮಾರಿಯವರು ಮಾತನಾಡಿ ತಂದೆ ತಾಯಿಯರು ಮಕ್ಕಳಿಗೆ ಕ್ರೀಡೆಯಲ್ಲಿ ಭಾಗವಹಿಸಲು ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಇಂತಹ ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರ ಮೂಲಕ ಅವರಲ್ಲಿರುವ ಪ್ರತಿಭೆ ಹೊರಹೊಮ್ಮುತ್ತದೆ. ಇದಕ್ಕೆ ಎಲ್ಲರೂ ಅವಕಾಶ ಮಾಡಿಕೊಡಬೇಕು ಎಂದರು. 

ವೇದಿಕೆಯಲ್ಲಿ ಉಪಾಧ್ಯಕ್ಷೆ ಶಾರದಾಕೃಷ್ಣ, ಪ್ರಧಾನ ಕಾರ್ಯದರ್ಶಿ ಭಾಸ್ಕರ ಪೂಜಾರಿ, ಜತೆ ಕಾರ್ಯದರ್ಶಿ ರಾಜೇಶ್ ಕುಮಾರ್,  ಸಂಘಟನಾ ಕಾರ್ಯದರ್ಶಿ ಬಿ. ಎಂ. ಉದಯಕುಮಾರ್ ಉಪಸ್ಥಿತರಿದ್ದರು. ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭವು  ಭಾಸ್ಕರ ಸಿ. ಅಮೀನ್‌ರವರ  ಧನ್ಯವಾದಗಳೊಂದಿಗೆ ಮುಕ್ತಾಯಗೊಂಡಿತು. ನಂತರ ನಡೆದ ಕ್ರೀಡಾಕೂಟದಲ್ಲಿ ಸಣ್ಣ ಮಕ್ಕಳಿಂದ ವಯೋವೃದ್ಧರು ಸೇರಿದಂತೆ ಸುಮಾರು 500 ಕ್ರೀಡಾಪಟುಗಳು ಭಾಗವಸಿದರು. 

ಧ್ವಜವಂದನೆಯು ಸಂಘದ ಸೇವಾದಳದ ಅಧ್ಯಕ್ಷರಾದ ಶ್ರೀ ವಿ. ಗೋಪಾಲ್‌ರವರ ಸಂಯೋಜಕತೆಯಲ್ಲಿ ನೆರವೇರಿತು.  ಸಂಘದ ಅಧ್ಯಕ್ಷರಾದ ಎಂ. ವೇದಕುಮಾರ್‌ರವರು ಸ್ವಾಗತಿಸಿದರು

  
     ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸೂಪರಿಂಟೆಂಡೆಂಟ್ ಆಫ್ ಪೋಲೀಸ್   ಕೆ. ಎನ್. ಜಿತೇಂದ್ರನಾಥ್ ವಹಿಸಿದ್ದರು. ಸರಕಾರಿ ವಕೀಲರಾದ  ಐ. ತಾರನಾಥ ಪೂಜಾರಿಯವರು ಸಮಾಜದ ಸಂಘಟನೆಗಾಗಿ ಹಮ್ಮಿಕೊಳ್ಳುತ್ತಿರುವ ಹಲವಾರು ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ಕ್ರೀಡಾಸಮಿತಿಯ ಅಧ್ಯಕ್ಷರಾದ ಕೆ. ಬಾಲಕೃಷ್ಣ ಸುವರ್ಣರವರು ಪ್ರಸ್ತಾವನಾ ಭಾಷಣ ಮಾಡಿದರು. ವಿಜೇತ ಕ್ರೀಡಾಪಟುಗಳಿಗೆ ಮತ್ತು ತಂಡಗಳಿಗೆ ಮುಖ್ಯ ಅತಿಥಿ ಹಾಗೂ ಸಮಾರಂಭದ ಅಧ್ಯಕ್ಷರು ಬಹುಮಾನ ಮತ್ತು ಟ್ರೋಪಿಗಳನ್ನು ವಿತರಿಸಿದರು. 

ಮಹಿಳೆಯರು, ಮಕ್ಕಳು ಹಾಗೂ ಪುರುಷರು ಸೇರಿದಂತೆ ಸುಮಾರು 200 ವಿಜೇತ ಕ್ರೀಡಾಪಟುಗಳು ಬಹುಮಾನ  ಸ್ವೀಕರಿಸಿದರು.  ಕೃಷ್ಣಪ್ಪ ಎಚ್.ಎ.ಎಲ್ ಇವರು ಕಾರ್ಯಕ್ರಮ ನಿರೂಪಿಸಿದರು.   ಸಂಘದ ಸಂಘಟನಾ ಕಾರ್ಯದರ್ಶಿ ಬಿ.ಎಮ್. ಉದಯಕುಮಾರ್‌ರವರು ಧನ್ಯವಾದ ಸಮರ್ಪಣೆ ಮಾಡಿದರು. ರಾಷ್ಟ್ರಗೀತೆಯೊಂದಿಗೆ ಸಮಾರಂಭವು ಮುಕ್ತಾಯವಾಯಿತು.
                                                                     
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com