ಸೂತ್ರ ಹರಿದ ಗಾಳಿಪಟವಾದ ಯುವ ಜನಾಂಗ: ಸ್ವರ್ಣವಲ್ಲಿ ಶ್ರೀ

ಬೈಂದೂರು: ಯುವ ಸಮುದಾಯ ಧಾರ್ಮಿಕ, ಸಾಮಾಜಿಕ ಪ್ರಜ್ಞೆ, ಕಾಳಜಿ ಇಲ್ಲದೆ ಸೂತ್ರ ಹರಿದ ಗಾಳಿಪಟದಂತಾಗಿದೆ. ಕ್ಷಣಿಕ ಸುಖಕ್ಕಾಗಿ ಅತ್ಯಾಚಾರ, ಕೊಲೆ, ಸುಲಿಗೆಯಂತಹ ಹೇಯ ಕೃತ್ಯಕ್ಕೆ ಇಳಿದಿದ್ದಾರೆ. ಜೀವನದ ಸಾರ್ಥಕತೆ ಕುರಿತು ಯಾರಲ್ಲೂ ಚಿಂತನೆ ಇಲ್ಲ. ಅಪೂರ್ವ ಸಂಸ್ಕೃತಿಯ ನಾಡಾಗಿದ್ದ ಭರತ ಖಂಡದತ್ತ ಇಡೀ ಜಗತ್ತೆ ಕಳವಳದ ದೃಷ್ಟಿಯಿಂದ ನೋಡುವಂತಾಗಿದೆ. ನಿರ್ದಿಷ್ಟ ಗುರಿ, ಚೌಕಟ್ಟು ಬದುಕಿಗೆ ಇಲ್ಲವಾದರೆ ಜೀವನದ ಅರ್ಥವೇ ಕೆಟ್ಟು ಹೋಗುತ್ತದೆ ಎಂದು ಸೋಂದಾ ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿ ನುಡಿದರು. ಇಲ್ಲಿನ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಜರುಗಿದ ಸೀತಾರಾಮ ಕಲ್ಯಾಣೋತ್ಸವದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. 

ತ್ರೇತಾಯುಗದಲ್ಲಿ ಆದರ್ಶಮಯ ಜೀವನ ನಡೆಸಿದ ಪುರುಷೋತ್ತಮ ಶ್ರೀರಾಮ ಹಾಗೂ ಪರಮ ಪತಿವ್ರತೆ ಸೀತಾಮಾತೆಯ ಬದುಕು ಅನುಕರಣೀಯ. ಸೀತಾರಾಮರ ಆದರ್ಶ ಜೀವನ ಇಂದಿಗೂ ಪ್ರಸ್ತುತ. ಅಂತಹ ಮೇಲ್‌ಸ್ತರದ ಬಾಳು ಪ್ರತಿಯೊಬ್ಬ ಗ್ರಹಸ್ಥನದಾಗಬೇಕು ಎಂದು ಅವರು ನುಡಿದರು. 

ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ರಾಮಕ್ಷತ್ರಿಯ ಸಂಘದ ಕೋಶಾಧ್ಯಕ್ಷ ರಾಮಕಷ್ಣ ಶೇರುಗಾರ ವಹಿಸಿದ್ದರು. ರಾಮಕ್ಷತ್ರಿಯ ಸಂಘದ ಅಧ್ಯಕ್ಷ ಬಿ. ಗೋಪಾಲ ನಾಯಕ್, ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಜಯಾನಂದ ಹೋಬಳಿದಾರ, ಬೈಂದೂರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸುಬ್ರಹ್ಮಣ್ಯ ಭಟ್, ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸದಾನಂದ ಸೇರ್ವೆಗಾರ, ಬೈಂದೂರು ಗ್ರಾಮ ಪಂಚಾಯತ್ ಅಧ್ಯಕ್ಷ ಜನಾರ್ದನ, ಆಗಮ ಶಾಸ್ತ್ರ ಪಂಡಿತ ವಿದ್ವಾನ್ ಕಟ್ಟೆ ತಿಮ್ಮಣ್ಣ ಪರಮೇಶ್ವರ ಭಟ್, ಮಾಜಿ ತಾ.ಪಂ.ಸದಸ್ಯ ಸದಾಶಿವ ಡಿ., ಮುಂಬೈ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪೂರ್ಣಾನಂದ ಶೇರುಗಾರ ಉಪಸ್ಥಿತರಿದ್ದರು. 

ಇದೇ ಸಂದರ್ಭದಲ್ಲಿ ನಿವತ್ತ ಶಿಕ್ಷಕ, ಯೋಗಗುರು ಶ್ರೀನಿವಾಸ ಉಪಾಧ್ಯಾಯ ಬವಳಾಡಿ ಅವರನ್ನು ಸನ್ಮಾನಿಸಲಾಯಿತು. ಸೇವಾಕರ್ತರಾದ ಕೆ.ನಾಗೇಶ ರಾವ್ ದಂಪತಿಗಳು, ಕೋಡಿ ನಾಗಪ್ಪಯ್ಯ ದಂಪತಿಗಳು ಹಾಗೂ ಪಿ.ಎನ್. ವಿಷ್ಣುಮೂರ್ತಿ ದಂಪತಿಗಳನ್ನು ಅಭಿನಂದಿಸಲಾಯಿತು. ರಾಮಕ್ಷತ್ರಿಯ ಸಂಘದ ಅಧ್ಯಕ್ಷ ಬಿ. ಗೋಪಾಲ ನಾಯಕ್ ಸ್ವಾಗತಿಸಿದರು. ಶಿಕ್ಷಕ ಆನಂದ ಮದ್ದೋಡಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಕಾರ್ಯದರ್ಶಿ ಗಣಪತಿ ಬಂಕೇಶ್ವರ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com