ಪ್ರಜಾಪ್ರಭುತ್ವದಲ್ಲಿ ಜನರ ಅಭಿಮತಕ್ಕೆ ಮನ್ನಣೆ ನೀಡಬೇಕು: ಆಸ್ಕರ್

ಬೈಂದೂರು: ಪಕ್ಷದ ಕಾರ್ಯಕರ್ತರು ಬದಲಾವಣೆಯನ್ನು ಗಮನಿಸಿ ಮುಂದುವರಿಯಬೇಕು. ಪಕ್ಷದ ಕಾರ್ಯಕ್ರಮಗಳ ಮಾಹಿತಿ ಜನರಿಗೆ ದೊರೆಯಬೇಕಾಗಿದೆ. ರಾಜಕೀಯ ವ್ಯತ್ಯಯ ಸಹಜವಾಗಿದೆ. ಹೀಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಅಭಿಮತಕ್ಕೆ ಮನ್ನಣೆ ನೀಡಬೇಕು ಎಂದು ರಾಜ್ಯಸಭಾ ಸದಸ್ಯ ಆಸ್ಕರ್‌ ಫೆರ್ನಾಂಡಿಸ್‌ ಹೇಳಿದರು.
     ಅವರು ಬೈಂದೂರು ರೋಟರಿ ಭವನದಲ್ಲಿ ಕಾಂಗ್ರೇಸ್‌ ಪಧಾಧಿಕಾರಿಗಳ ಮತ್ತು ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಸೋಲಿನ ಪರಾಮರ್ಶೆ ನಡೆಸಿ ತಿದ್ದುಪಡಿಯೊಂದಿಗೆ ಕಾರ್ಯಕರ್ತರು ಸಜ್ಜಾಗಬೇಕಾಗಿದೆ ಎಂದರು.
          ಬಿಜೆಪಿ ದೇಶದಲ್ಲಿ ಹೊಸ ಇತಿಹಾಸ ಸೃಷ್ಟಿಸುತ್ತೇವೆ ಎನ್ನುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್‌ ಕಳೆದ 60 ವರ್ಷಗಳಲ್ಲಿ ಮಾಡಿದ ಸಾಧನೆಯನ್ನು 60 ತಿಂಗಳಲ್ಲಿ ಮಾಡಿ ತೋರಿಸುತ್ತೇವೆ ಎಂದು ಬಿಜೆಪಿ ಹೇಳಿದೆಯಾದರೂ ಕಾಂಗ್ರೆಸ್‌ ನಿರ್ಮಾಣ ಮಾಡಿದ ಚರಿತ್ರೆಯನ್ನು ಯಾರಿಂದಲೂ ಅಳಿಸಲು ಸಾಧ್ಯವಿಲ್ಲ. ಆದರೆ ಅಧಿಕಾರಕ್ಕೆ ಬಂದ ಕೆಲವೇ ದಿನದಲ್ಲಿ ಅದು ಜನರಿಗೆ ಬೆಲೆ ಏರಿಕೆ ಬಿಸಿ ನೀಡಿದೆ. 
       ಮಾಜಿ ಸಂಸದ ಕೆ. ಜಯಪ್ರಕಾಶ ಹೆಗ್ಡೆ ಮಾತನಾಡಿ, ಪಕ್ಷದಲ್ಲಿ ಸಕ್ರಿಯರಾಗಿರುವವರು ಮಾತ್ರ ಪದಾಧಿಕಾರಿಗಳ ಹುದ್ದೆ ಹೊತ್ತುಕೊಳ್ಳಬೇಕು. ಕೇಂದ್ರದಲ್ಲಿ ಕಾಂಗ್ರೆಸ್‌ ಸರಕಾರ ಇದ್ದಾಗ ಆ ಸರಕಾರದ ಕಾರ್ಯಕ್ರಮಗಳನ್ನು ಜನರಿಗೆ ತಿಳಿಹೇಳುವ ಹಾಗೂ ಮಾಹಿತಿ ನೀಡುವ ಕೆಲಸ ಆಗದೇ ಇರುವುದು ಕಾಂಗ್ರೆಸ್‌ ಸೋಲಿಗೆ ಕಾರಣವಾಗಿದೆ. ಮಾಧ್ಯಮ ಹಾಗೂ ಸಾಮಾಜಿಕ ತಾಣಗಳಲ್ಲಿ ಮೋದಿ ಅಬ್ಬರದ ಪ್ರಚಾರದಿಂದ ಈ ದೇಶದಲ್ಲಿ ಬಿಜೆಪಿ ಜಯ ಗಳಿಸಲು ಸಾಧ್ಯವಾಗಿದೆ. ಈ ಪ್ರಚಾರಕ್ಕೆ ಇವರು ಬಳಿಸಿದ ಸಾವಿರಾರು ಕೋಟಿ ರೂ. ಎಲ್ಲಿಂದ ಬಂತು ಎನ್ನುವುದನ್ನು ಜನರ ಮುಂದಿಡಲಿ ಎಂದರು.  
  ವೇದಿಕೆಯಲ್ಲಿ ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ,ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ, ವಿಧಾನಪರಿಷತ್‌ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ, ಕಾಂಗ್ರೇಸ್‌ ಮುಖಂಡ ಮಂಜುನಾಥ ಭಂಡಾರಿ,  ಬ್ಲೋಸಂ ಫೆರ್ನಾಂಡಿಸ್‌, ರಮೇಶ ಗಾಣಿಗ ಕೊಲ್ಲೂರು,ಸಂಪಿಗೇಡಿ ಸಂಜೀವ ಶೆಟ್ಟಿ,ಯುವ ಕಾಂಗ್ರೇಸ್‌ ಅಧ್ಯಕ್ಷ ಸುಬ್ರಹ್ಮಣ್ಯ ಪೂಜಾರಿ, ರಘುರಾಮ ಶೆಟ್ಟಿ, ಪ್ರಕಾಶ್ಚಂದ್ರ ಶೆಟ್ಟಿ, ಎಮ್‌.ಎ.ಗಪೂರ್‌,ಹೆರಿಯಣ್ಣ,ಮದನ್‌ ಕುಮಾರ್‌, ಪ್ರಸನ್ನ ಕುಮಾರ್‌, ಮಂಜುನಾಥ ಖಾರ್ವಿ ಮುಂತಾದವರು ಉಪಸ್ಥಿತರಿದ್ದರು.

      ರಾಜು ಪೂಜಾರಿ ಸ್ವಾಗತಿಸಿದರು, ವಾಸುದೇವ ಯಡಿಯಾಳ್‌ ಕಾರ್ಯಕ್ರಮ ನಿರೂಪಿಸಿದರು, ಮದನ್‌ ಕುಮಾರ್‌ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com