ಕುಂದಾಪುರ: ಒಳ್ಳೆಯ ದಿನ ನೀಡುತ್ತೇವೆ ಎಂದು ಅಧಿಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಸರಕಾರ ಮುಂದಿನ ದಿನಗಳಲ್ಲಿ ಉತ್ತಮ ಆಡಳಿತ ನೀಡಿದಲ್ಲಿ ನಾವು ಸೋಲು ಮೆರೆತು ಸ್ವಾಗತಿಸುತ್ತೇವೆ. ಆದರೆ ಯಾವುದೋ ಬೇರೆ ಉದ್ದೇಶದಿಂದ ಬಡ ಜನತೆಯ ಜೇಬಿಗೆ ಕತ್ತರಿ ಹಾಕುವ ಪ್ರಯತ್ನ ಮಾಡಿದರೆ ಕಾಂಗ್ರೆಸ್ ಸಂಸತ್ ಅಧಿವೇಶನದಲ್ಲಿ ಸುಮ್ಮನೆ ಕುಳಿತುಕೊಳ್ಳದೆ ಸಮರ್ಥ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ನ ಹಿರಿಯ ಮುಖಂಡ ಆಸ್ಕರ್ ಫೆರ್ನಾಂಡಿಸ್ ಹೇಳಿದರು.
ಅವರು ಕುಂದಾಪುರದ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಕುಂದಾಪುರ ಬ್ಲಾಕ್ ಸಮಿತಿ ಆಶ್ರಯದಲ್ಲಿ ನಡೆದ ಕಾರ್ಯಕರ್ತರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ಬಿಜೆಪಿ ದೇಶದಲ್ಲಿ ಹೊಸ ಇತಿಹಾಸ ಸೃಷ್ಟಿಸುತ್ತೇವೆ ಎನ್ನುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಕಳೆದ 60 ವರ್ಷಗಳಲ್ಲಿ ಮಾಡಿದ ಸಾಧನೆಯನ್ನು 60 ತಿಂಗಳಲ್ಲಿ ಮಾಡಿ ತೋರಿಸುತ್ತೇವೆ ಎಂದು ಬಿಜೆಪಿ ಹೇಳಿದೆಯಾದರೂ ಕಾಂಗ್ರೆಸ್ ನಿರ್ಮಾಣ ಮಾಡಿದ ಚರಿತ್ರೆಯನ್ನು ಯಾರಿಂದಲೂ ಅಳಿಸಲು ಸಾಧ್ಯವಿಲ್ಲ. ಆದರೆ ಅಧಿಕಾರಕ್ಕೆ ಬಂದ ಕೆಲವೇ ದಿನದಲ್ಲಿ ಅದು ಜನರಿಗೆ ಬೆಲೆ ಏರಿಕೆ ಬಿಸಿ ನೀಡಿದೆ. ಆದರೆ ಕಾಂಗ್ರೆಸ್ ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಕ್ತಿಹೊಂದಿ ಎದ್ದು ಬರಲಿದೆ ಎಂದರು.
ಮಾಜಿ ಸಂಸದ ಕೆ. ಜಯಪ್ರಕಾಶ ಹೆಗ್ಡೆ ಮಾತನಾಡಿ, ಪಕ್ಷದಲ್ಲಿ ಸಕ್ರಿಯರಾಗಿರುವವರು ಮಾತ್ರ ಪದಾಧಿಕಾರಿಗಳ ಹುದ್ದೆ ಹೊತ್ತುಕೊಳ್ಳಬೇಕು. ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗ ಆ ಸರಕಾರದ ಕಾರ್ಯಕ್ರಮಗಳನ್ನು ಜನರಿಗೆ ತಿಳಿಹೇಳುವ ಹಾಗೂ ಮಾಹಿತಿ ನೀಡುವ ಕೆಲಸ ಆಗದೇ ಇರುವುದು ಕಾಂಗ್ರೆಸ್ ಸೋಲಿಗೆ ಕಾರಣವಾಗಿದೆ. ಮಾಧ್ಯಮ ಹಾಗೂ ಸಾಮಾಜಿಕ ತಾಣಗಳಲ್ಲಿ ಮೋದಿ ಅಬ್ಬರದ ಪ್ರಚಾರದಿಂದ ಈ ದೇಶದಲ್ಲಿ ಬಿಜೆಪಿ ಜಯ ಗಳಿಸಲು ಸಾಧ್ಯವಾಗಿದೆ. ಈ ಪ್ರಚಾರಕ್ಕೆ ಇವರು ಬಳಿಸಿದ ಸಾವಿರಾರು ಕೋಟಿ ರೂ. ಎಲ್ಲಿಂದ ಬಂತು ಎನ್ನುವುದನ್ನು ಜನರ ಮುಂದಿಡಲಿ ಎಂದರು.
ಕೆ.ಪಿ.ಸಿ.ಸಿ. ಹಿರಿಯ ಉಪಾಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಕೆ. ಪ್ರತಾಪ್ಚಂದ್ರ ಶೆಟ್ಟಿ, ಶಾಸಕ ಕೆ. ಗೋಪಾಲ ಪೂಜಾರಿ, ಬ್ಲೋಸಂ ಫೆರ್ನಾಂಡಿಸ್, ಪಕ್ಷದ ಪ್ರಮುಖರಾದ ಮಂಜುನಾಥ ಭಂಡಾರಿ, ಎಂ.ಎ. ಗಪೂರ್, ಬಿ. ಹಿರಿಯಣ್ಣ, ಅಶೋಕ ಕೊಡವೂರು, ದಿನೇಶ್ ಪುತ್ರನ್, ವಾಸುದೇವ ಯಡಿಯಾಳ, ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಸದಾನಂದ ಶೆಟ್ಟಿ ಕೆದೂರು, ಮಂಜಯ್ಯ ಶೆಟ್ಟಿ ಆಲೂರು, ವಿಕಾಸ ಹೆಗ್ಡೆ, ಜ್ಯೋತಿ ವಿ. ಪುತ್ರನ್, ಕೋಣಿ ಕೃಷ್ಣದೇವ ಕಾರಂತ, ಗಡಾಹದ್ ರಾಮಕೃಷ್ಣ ರಾವ್, ಜೇಕಬ್ ಡಿಸೋಜಾ, ಲೇನಿ ಕ್ರಾಸ್ತಾ, ದೇವಕಿ ಪಿ. ಸಣ್ಣಯ್ಯ, ಗಣೇಶ ಶೇರುಗಾರ, ಮಾಣಿಗೋಪಾಲ, ಪುರಸಭೆ ಸದಸ್ಯರು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಕೋಣಿ ನಾರಾಯಣ ಆಚಾರ್ ನಿರೂಪಿಸಿದರು.
0 comments:
Post a Comment