ಬ್ರೇಕ್‌ ವಾಟರ್‌ ಕಾಮಗಾರಿ ಶೀಘ್ರ ಆರಂಭ ಸಚಿವ ಜೈನ್‌

ಗಂಗೊಳ್ಳಿ : ಮೀನುಗಾರಿಕಾ ಬಂದರಿನ ಬಹು ನಿರೀಕ್ಷೆಯ ಕೇಂದ್ರ ಹಾಗೂ ರಾಜ್ಯ ಸರಕಾರದ 102 ಕೋಟಿ ರೂ. ವೆಚ್ಚದ ಬ್ರೇಕ್‌ ವಾಟರ್‌ ಯೋಜನೆಯನ್ನು ಶೀಘ್ರವೇ ಸಂಪುಟ ಸಭೆಯಲ್ಲಿ ಇರಿಸಿ ಮಂಜೂರಾತಿ ಪಡೆಯಲಾಗುವುದು. ಅಲ್ಲದೇ ಈ ಬಗ್ಗೆ ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಿ ಅತಿ ಶೀಘ್ರದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಮಿನುಗಾರಿಕಾ ಸಚಿವ ಅಭಯಚಂದ್ರ ಜೈನ್‌ ಹೇಳಿದರು.

ಅವರು ಮಂಗಳವಾರ ಗಂಗೊಳ್ಳಿ ಬಂದರಿನ ಬ್ರೇಕ್‌ ವಾಟರ್‌ ಕಾಮಗಾರಿ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದರು.

     ಗಂಗೊಳ್ಳಿ ಬಂದರು ಅಭಿವೃದ್ಧಿ ಹೊಂದಿದ್ದಲ್ಲಿ ಮಲ್ಪೆ ಬಂದರಿನ ಮೇಲಿನ ಒತ್ತಡವನ್ನು ಇನ್ನಷ್ಟು ಕಡಿಮೆ ಮಾಡಬಹುದು. ಆದ್ದರಿಂದ ಗಂಗೊಳ್ಳಿ ಮೀನುಗಾರಿಕಾ ಬಂದರನ್ನು ಎಲ್ಲಾ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಪ್ರಯತ್ನಿಸಲಾಗುವುದು . ಮೀನುಗಾರರಿಗೆ ಮೂಲಭೂತ ಸೌಲಭ್ಯವನ್ನು ಒದಗಿಸುವಲ್ಲಿ ಸರಕಾರ ಹೆಚ್ಚಿನ ಕಾಳಜಿಯನ್ನು ವಹಿಸುವುದಲ್ಲದೇ ಅವರ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರಕಾರ ಹೆಚ್ಚಿನ ಆಸಕ್ತಿ ವಹಿಸಲಿದೆ ಎಂದರು.

 ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಅವರು ಮಾತನಾಡಿ ಕರಾವಳಿಯಲ್ಲಿ ಮೀನುಗಾರಿಕಾ ಮನೆಯನ್ನು ನೀಡುವ ಸಂದರ್ಭದಲ್ಲಿ ಕುಂದಾಪುರ ತಾಲೂಕಿಗೆ ಹೆಚ್ಚಿನ ಮನೆಯನ್ನು ನೀಡಬೇಕು . ಅಲ್ಲದೇ ಸಂಪೂರ್ಣ ಹಾಳಾಗಿ ಹೋಗಿರುವ ಕರಾವಳಿ ರಸ್ತೆಗಳನ್ನು ಮುಂದಿನ ದಿನಗಳಲ್ಲಿ ಕಾಂಕ್ರೀಟಿಕರಣಗೊಳಿಸಬೇಕು. ಬ್ರೇಕ್‌ ವಾಟರ್‌ ಕಾಮಗಾರಿಯನ್ನು ಸಚಿವ ಸಂಪುಟದಲ್ಲಿರಿಸಿ ಕೂಡಲೇ ಅನುಮತಿಯನ್ನು ನೀಡಬೇಕು ಎಂದು ಸಚಿವರನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಗಂಗೊಳ್ಳಿ ಬಂದರಿಗೆ ಪ್ರಪ್ರಥಮವಾಗಿ ಆಗಮಿಸಿದ ಸಚಿವರನ್ನು ಗಂಗೊಳ್ಳಿ ಹಸಿಮೀನಿನ ವ್ಯಾಪಾರಸ್ಥರ ಸಂಘದ ವತಿಯಿಂದ ಸಮ್ಮಾನಿಸಲಾಯಿತು. ಅಲ್ಲದೇ ಶಾಸಕರನ್ನೂ ಗೌರವಿಸಲಾಯಿತು.

ಮೀನುಗಾರ ಮುಖಂಡ, ಮಾಜಿ ಜಿ.ಪಂ. ಅಧ್ಯಕ್ಷ ಕೇಶವ ಕುಂದರ್‌, ಗಂಗೊಳ್ಳಿ ಹಸಿಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸುರೇಂದ್ರಖಾರ್ವಿ, ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ವಿ.ಕೆ.ಶೆಟ್ಟಿ, ಎಂ.ಡಿ.ಪ್ರಸಾದ್‌, ಎಚ್‌.ಎಸ್‌.ವೀರಪ್ಪ ಗೌಡ, ಜಂಟಿ ನಿರ್ದೇಶಕ ಗಣಪತಿ ಭಟ್‌ ಮೊದಲಾದವರು ಉಪಸ್ಥಿತರಿದ್ದರು.

ನಂತರ ಅವರು ಮರವಂತೆ, ಕೊಡೇರಿ ಬಂದರುಗಳಿಗೆ ಭೇಟಿ ನೀಡಿ ಮೀನುಗಾರರ ಅಹವಾಲನ್ನು ಸ್ವಿಕರಿಸಿದರು. ಮೀನುಗಾರಿಕಾ ಸಹಾಯಕ ನಿರ್ದೇಶಕ ರವಿ ಎಂ. ಕಾರ್ಯಕ್ರಮ ನಿರೂಪಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com