ಕುಂದಾಪುರ: ತಾಲೂಕಿನಲ್ಲಿ ಎಚ್1ಎನ್1 ಸೊಂಕು ಹಬ್ಬುತ್ತಿರುವ ಹಿನ್ನೆಲೆಯಲ್ಲಿ ತೆಗೆದುಕೊಂಡಿರುವ ಮುಂಜಾಗ್ರತಾ ಅವಲೋಕನದ ಉದ್ದೇಶದಿಂದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಶುಕ್ರವಾರ ಕುಂದಾಪುರ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರೊಂದಿಗೆ ಮಾತುಕತೆ ನಡೆಸಿದರು.
ಜಿಲ್ಲಾ ಆರೋಗ್ಯಾಕಾರಿ ಡಾ.ರಾಮಚಂದ್ರ ಬಾಯರಿ ಮಾತನಾಡಿ, ಜಿಲ್ಲೆಯಲ್ಲಿ 29 ಪ್ರಕರಣಗಳು ದಾಖಲಾಗಿವೆ. ಎಚ್1ಎನ್1 ಪರೀಕ್ಷಾ ಕೇಂದ್ರ ಮಣಿಪಾಲ ಮತ್ತು ಬೆಂಗಳೂರಿನಲ್ಲಿ ಮಾತ್ರ ಲಭ್ಯವಿದೆ. ಪರೀಕ್ಷಾ ವೆಚ್ಚವನ್ನು ಕೇಂದ್ರ ಸರಕಾರ ಭರಿಸುತ್ತದೆ. ಕುಂದಾಪುರ ತಾಲೂಕಿನಲ್ಲಿ 13 ಪ್ರಕರಣಗಳು ದಾಖಲಾಗಿವೆ. ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದೇವೆ ಎಂದರು.
ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಎಚ್1ಎನ್1 ಸೊಂಕಿನಿಂದಾಗಿ ಜಿಲ್ಲೆಯಲ್ಲಿ ಇದುವರೆಗೆೆ ಐವರು ಪ್ರಾಣ ಕಳೆದುಕೊಂಡಿರುವ ಮಾಹಿತಿ ಇದೆ. 30ಕ್ಕೂ ಹೆಚ್ಚು ಮಂದಿ ಸೊಂಕಿನಿಂದ ಬಳಲುತ್ತಿದ್ದಾರೆ. ತಾಲೂಕು ಕೇಂದ್ರದಲ್ಲಿ ಪರೀಕ್ಷಾ ಸಾಧನ ಅಳವಡಿಸುವ ಬಗ್ಗೆ ಸರಕಾರ ಚಿಂತನೆ ನಡೆಸಬೇಕು. ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಎಚ್1ಎನ್1 ಸೊಂಕಿನ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ತಾಲೂಕು ಸಾರ್ವಜನಿಕ ಆಸ್ಪತ್ರೆಯ ವೈದ್ಯಾಕಾರಿ ಡಾ.ಉದಯಶಂಕರ್ ಮಾತನಾಡಿ, ಎಚ್1ಎನ್1 ಸೊಂಕು ಕಂಡುಬಂದವರನ್ನು ಪ್ರತ್ಯೇಕ ವಾರ್ಡ್ನಲ್ಲಿ ಇರಿಸಲು ಏರ್ಪಾಟು ಮಾಡಲಾಗಿದೆ ಎಂದರು.
ಕುಂದಾಪುರದಲ್ಲಿ ಇಬ್ಬರಿಗೆ ಎಚ್1ಎನ್1 ಬಾಧೆ
ನಗರದ ಚಿಕ್ಕನ್ಸಾಲ್ ರಸ್ತೆಯ ಮೇಲ್ಹಿತ್ಲು ವಠಾರದ ಇಬ್ಬರಲ್ಲಿ ಎಚ್1ಎನ್1(ಹಂದಿಜ್ವರ) ಪತ್ತೆಯಾಗಿದ್ದು, ಪರಿಸರದಲ್ಲಿ ಆತಂಕ ವ್ಯಕ್ತವಾಗಿದೆ. ವಾರದಿಂದ ಜ್ವರದಿಂದ ಬಳಲುತ್ತಿದ್ದ ಮನೆಯ ಮೂವರು ಸದಸ್ಯರನ್ನು ಪರೀಕ್ಷೆಗೊಳಪಡಿಸಿದಾಗ ಇಬ್ಬರಲ್ಲಿ ಎಚ್1ಎನ್1 ಸೊಂಕು ಇರುವುದು ದೃಢಪಟ್ಟಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 13 ಪ್ರಕರಣ ದಾಖಲು: ತಾಲೂಕಿನಲ್ಲಿ ಈ ತನಕ 11 ಪ್ರಕರಣ ದಾಖಲಾಗಿದ್ದು, ಚಿಕ್ಕನ್ಸಾಲ್ ರಸ್ತೆಯ ಇಬ್ಬರಲ್ಲಿ ಪಾಸಿಟಿವ್ ರಿಪೋರ್ಟ್ ಬಂದ ಕಾರಣ ಪ್ರಕರಣಗಳ ಸಂಖ್ಯೆ 13ಕ್ಕೇರಿದೆ.
ಎಚ್1ಎನ್1 ಜ್ವರದ ಬಗ್ಗೆ ಸಾರ್ವಜನಿಕ ಮಾಹಿತಿ, ರಕ್ಷಣೆ ಬಗೆಗಿನ ಮಾಹಿತಿ ನೀಡುವ ಕೆಲಸ ಮಾಡಲಾಗುತ್ತಿದೆ. ಎಚ್1ಎನ್1 ಗುಣಲಕ್ಷಣ ಮತ್ತು ಜಾಗೃತಿ ವಹಿಸುವ ಕುರಿತು ಪರಿಸರದ ಜನರಿಗೆ ಮಾಹಿತಿ ನೀಡಲಾಗುತ್ತಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಚಿದಾನಂದ ಹೇಳಿದ್ದಾರೆ.
0 comments:
Post a Comment