ಸಮಾಧಿ ವಿವಾದ: ಕೊಲ್ಲೂರು ಬಂದ್‌ ಸಂಪೂರ್ಣ ಯಶಸ್ವಿ

ಕೊಲ್ಲೂರು: ದೇವಸ್ಥಾನದ ಪರಿಸರದಲ್ಲಿರುವ ಶ್ರೀ ನಿತ್ಯಾನಂದ ಮಠದ ಆವರಣದಲ್ಲಿ ಶ್ರೀ ವಿಮಲಾನಂದ ಸ್ವಾಮೀಜಿ ಅವರನ್ನು ದಫ‌ನ ಮಾಡಿರುವುದನ್ನು ಖಂಡಿಸಿ; ಸಮಾಧಿಯನ್ನು ದೇವಸ್ಥಾನದ ಗಡಿಯಾಚೆ ಸ್ಥಳಾಂತರಿಸುವಂತೆ ಆಗ್ರಹಿಸಿ ಬುಧವಾರ ನಡೆದ ಕೊಲ್ಲೂರು ಬಂದ್‌ ಸಂಪೂರ್ಣ ಯಶಸ್ವಿಯಾಗಿದೆ. ಕೊಲ್ಲೂರು ಪೇಟೆ ಮತ್ತು ಸುತ್ತ್ತಲಿನ ಪ್ರದೇಶಗಳಲ್ಲಿ ಸಂಪೂರ್ಣ ಬಂದ್ ಆಚರಿಸಲಾಗಿದೆ. ಮಾರಣಕಟ್ಟೆ, ಇಡೂರು-ಕುಂಜ್ಞಾಡಿ ಹಾಗೂ ಹಾಲ್ಕಲ್ ನಾಗರಿಕರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು. ಸ್ಥಳೀಯ ಶಾಲೆ ಕಾಲೇಜುಗಳಿಗೆ ರಜೆ ಸಾರಲಾಗಿತ್ತು. ಬೆಳಗ್ಗೆ 6ರಿಂದ ಸಂಜೆ 6ಗಂಟೆ ತನಕ ಬಂದ್ ಶಾಂತಿಯುತವಾಗಿ ಅಂತ್ಯಗೊಂಡಿದೆ. ಕೊಲ್ಲೂರು ಪೇಟೆ ಬಂದ್ ಆಗಿದ್ದರಿಂದ ಯಾತ್ರಿಕರು ಊಟ, ತಿಂಡಿಗಾಗಿ ಪರದಾಟ ಪಡುವಂತಾಯಿತು.

ಆಶ್ರಮದ ಮುಖ್ಯಸ್ಥರಿಗೆ ಮನವಿ : ಕೊಲ್ಲೂರು ಭಕ್ತರು ಹಾಗೂ ನಾಗರಿಕರು ಬುಧವಾರ ಬೆಳಗ್ಗೆ ಕೊಲ್ಲೂರು ನಿತ್ಯಾನಂದ ಆಶ್ರಮಕ್ಕೆ ಭೇಟಿ ನೀಡಿ ಮೂಕಾಂಬಿಕಾ ಕ್ಷೇತ್ರದ ಪಾವಿತ್ರ್ಯತೆ ಬಗ್ಗ್ಗೆ ಇರುವ ನಂಬಿಕೆಗೆ ಮನ್ನಣೆ ನೀಡಿ ಸೌಹಾರ್ದ ವಾತಾವರಣ ಕಲ್ಪಿಸುವಂತೆ ಮಠದ ಮುಖ್ಯಸ್ಥರಿಗೆ ಮನವಿ ಸಲ್ಲಿಸಿದರು. 

ಜಿಲ್ಲಾಧಿಕಾರಿಗೆ ಮನವಿ: ಸುರಿಯುತ್ತಿರುವ ಮಳೆಯ ನಡುವೆಯೂ ಸಹಸ್ರಾರು ಸಂಖ್ಯೆಯಲ್ಲಿ ಕೊಲ್ಲೂರು ಗ್ರಾಮಸ್ಥರು ಮತ್ತು ವಿವಿಧ ಸಂಘಟನೆಗಳವರು ಮುಖ್ಯರಸ್ತೆಯಲ್ಲಿ ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಕೊಲ್ಲೂರು ದೇವಸ್ಥಾನಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು. ಕೊಲ್ಲೂರು ದೇವಾಲಯದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಬಸ್‌ನಿಲ್ದಾಣದವರೆಗೆ ಮೆರವಣಿಗೆ ಸಾಗಿ ಬಳಿಕ ಕೊಲ್ಲೂರು ಗ್ರಾಮ ಪಂಚಾಯಿತಿಯ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. 

ವಿಮಲಾನಂದರು ಸ್ವಾಮೀಜಿಯಲ್ಲ: ವಿಮಲಾನಂದರು ಸಾಮಾನ್ಯ ಮನುಷ್ಯರಾಗಿದ್ದಾರೆ, ಅವರು ಸನ್ಯಾಸಿಯಲ್ಲ. ಒಂದು ವೇಳೆ ಅವರು ಸನ್ಯಾಸಿಯೇ ಆಗಿದ್ದರೇ ಅವರಿಗೆ ದೀಕ್ಷೆ ಕೊಟ್ಟವರು ಯಾರು? ಯಾವಾಗ ದೀಕ್ಷೆ ಪಡೆದರು? ಎನ್ನುವುದರ ಬಗ್ಗೆ ವಿದ್ವತ್ ಸಭೆ ಎರ್ಪಡಿಸಲಿ. ಆಶ್ರಮದ ಮುಖ್ಯಸ್ಥ ಜಯಾನಂದ ಅವರು ಸ್ವಾಮೀಜಿಯವರ ಪುತ್ರ. ವಿಮಲಾನಂದರ ಮೃತದೇಹ ಮೇಲಕ್ಕೆತ್ತಿ ಡಿಎನ್‌ಎ ಪರೀಕ್ಷೆಗೆ ಒಳಪಡಿಸಬೇಕು ಎಂದು ದೇವಳದ ಪ್ರಧಾನ ಅರ್ಚಕ ಡಾ.ನರಸಿಂಹ ಅಡಿಗ ಒತ್ತಾಯಿಸಿದರು.

     ಪ್ರಧಾನ ಅರ್ಚಕ ಶ್ರೀಧರ ಅಡಿಗ, ನ್ಯಾಯವಾದಿ ಶ್ರೀಕಾಂತ ಅಡಿಗ, ತಾಲೂಕು ಪಂಚಾಯಿತಿ ಸದಸ್ಯ ಕೊಲ್ಲೂರು ರಮೇಶ ಗಾಣಿಗ, ಕೊಲ್ಲೂರು ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮೀದೇವಿ, ಪ್ರಧಾನ ಅರ್ಚಕ ಗೋವಿಂದ ಅಡಿಗ, ತಂತ್ರಿ ರಾಮಚಂದ್ರ ಅಡಿಗ, ಮೂಕಾಂಬಿಕಾ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವಿಶ್ವೇಶ್ವರ ಹೆಗಡೆ, ನ್ಯಾಯವಾದಿ ನಾಗೇಶ ಅಡಿಗ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಚಂದ್ರ ಬಳೆಗಾರ ಕಾರ್ಯಕ್ರಮ ನಿರ್ವಹಿಸಿದರು.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com