ಕೊಲ್ಲೂರಿನಲ್ಲಿ ಸಂಭ್ರಮದ ಶ್ರೀದೇವಿಯ ಜನ್ಮಾಷ್ಟಮಿ

ಕುಂದಾಪುರ: ಕೊಲ್ಲೂರು ಶ್ರೀ ಮೂಕಾಂಬಿಕಾ ಅಮ್ಮನವರ ಜನ್ಮದಿನೋತ್ಸವ ಗುರುವಾರ ಸಕಲ ಭಕ್ತಿಶ್ರದ್ಧೆಗಳಿಂದ ಜರುಗಿತು. ಪರಂಪರಾಗತವಾಗಿ ಹೊಸನಗರ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತಿ ತೀರ್ಥ ಸ್ವಾಮೀಜಿ ವಿಶೇಷ ಪೂಜೆ ನೆರವೇರಿಸಿದರು. ಬೆಳಗ್ಗೆ 10.15 ಗಂಟೆಗೆ ಕ್ಷೇತ್ರಕ್ಕೆ ಚಿತ್ತೈಸಿದ ಸ್ವಾಮೀಜಿಯವರನ್ನು ದೇವಳದ ವತಿಯಿಂದ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ದೇವರ ದರ್ಶನ ಪಡೆದ ಶ್ರೀಗಳು ಶ್ರೀದೇವಿಗೆ ವಿಶೇಷ ಮಂಗಳಾರತಿ ಬೆಳಗಿ ಜನ್ಮದಿನದ ಪೂಜಾವಿಧಿ ಕೈಂಕರ್ಯ ನೆರವೇರಿಸಿ ಶತಚಂಡಿ ಯಾಗದ ಪೂರ್ಣಾಹುತಿಯಲ್ಲಿ ಪಾಲ್ಗೊಂಡರು. ಬಳಿಕ ಭಿಕ್ಷೆ ಸ್ವೀಕರಿಸಿದ ಅವರು ಅಪರಾಹ್ನ 2.30 ಗಂಟೆಗೆ ಭಕ್ತರಿಗೆ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. 

ಉತ್ಸವದ ದಿಕ್ಕು ಬದಲಾವಣೆ: 
ಕೊಲ್ಲೂರು ಶ್ರೀ ಮೂಕಾಂಬಿಕೆ ಅಮ್ಮನವರ ಜನ್ಮದಿನದಂದು ರಾತ್ರಿ ನಡೆಯುವ ಪುಷ್ಪರಥೋತ್ಸವದ ದಿಕ್ಕು ಬದಲಾವಣೆಗೊಳಿಸಲಾಗಿದೆ. ವಾಡಿಕೆಯಂತೆ ದೇವರ ಜನ್ಮದಿನದಂದು ಕೊಲ್ಲೂರು ನಿತ್ಯಾನಂದ ಆಶ್ರಮಕ್ಕೆ ತಾಗಿಕೊಂಡಿರುವ ಓಲಗಮಂಟಪದ ತನಕ ಸಾಗುತ್ತಿತ್ತು. ಈ ಬಾರಿ ನಿತ್ಯಾನಂದ ಆಶ್ರಮದ ಶ್ರೀವಿಮಲಾನಂದ ಸ್ವಾಮೀಜಿಯವರ ಸಮಾಧಿ ಕಾರ್ಯ ಓಲಗಮಂಟಪದ ಒಳಗಡೆ ಪ್ರದೇಶದಲ್ಲಿ ಬಂದಿರುವುದರಿಂದ ಸ್ಥಳಾಚಾರ, ಸಂಪ್ರದಾಯದಂತೆ ದೋಷ ಬರುವ ಸಾಧ್ಯತೆ ಹಿನ್ನೆಲೆಯಲ್ಲಿ ಪುಷ್ಪರಥೋತ್ಸವ ದಿಕ್ಕು ಬದಲಾಯಿಸಿ ಗೋಪಾಲಕೃಷ್ಣ ಮಠದ ಕಡೆಗೆ ದೇವರ ಉತ್ಸವ ಕೊಂಡೊಯ್ಯುವ ತೀರ್ಮಾನ ದೇವಸ್ಥಾನದ ವ್ಯವಸ್ಥಾಪನಾ ಮಂಡಳಿ ತೆಗೆದುಕೊಂಡಿದ್ದಲ್ಲದೆ ಅದೇ ರೀತಿ ಉತ್ಸವ ನಡೆಸಿತು. 

  ಕೊಲ್ಲೂರು ನಿತ್ಯಾನಂದ ಆಶ್ರಮದ ಶ್ರೀವಿಮಲಾನಂದ ಸ್ವಾಮೀಜಿಯವರ ಸಮಾಧಿ ಕಾರ್ಯದ ಕುರಿತಂತೆ ಉಡುಪಿ ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶದಂತೆ ವರದಿ ಸಲ್ಲಿಸಲಾಗಿದೆ ಎಂದು ದೇವಳದ ಆಡಳಿತ ಕಚೇರಿ ವ್ಯವಸ್ಥಾಪಕರು ತಿಳಿಸಿದ್ದಾರೆ. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com