ಕೋಟ: ಆನಂದ್ ಸಿ. ಕುಂದರ್ ಮಾಲಕತ್ವದಲ್ಲಿ ಮಣೂರಿನ ಪಡುಕರೆಯಲ್ಲಿ ಕಾರ್ಯಾಚರಿಸುತ್ತಿರುವ ಜನತಾ ಫಿಶ್ಮೀಲ್ ಹಾಗೂ ಆಯಿಲ್ ಪ್ರಾಡಕ್ಟ್ಗೆ ಈ ಬಾರಿಯ ವಿಶ್ವ ಪರಿಸರ ದಿನದಂದು ಪರಿಸರ ಪ್ರಶಸ್ತಿ ಲಭಿಸಿದೆ.
ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಂಗಳೂರು ಮತ್ತು ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಪ್ರತಿವರ್ಷ ಜಿಲ್ಲಾ ಮಟ್ಟದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪರಿಸರಕ್ಕೆ ಮಾರಕವಾಗದಂತೆ ಉದ್ಯಮ ನಡೆಸುವ ಕಾರ್ಖಾನೆಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.
ಈ ಬಾರಿ ಮಂಗಳೂರಿನಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಚಿವ ರಮಾನಾಥ ರೈ ಅವರಿಂದ ಸಂಸ್ಥೆಯ ಆಡಳಿತ ಪಾಲುದಾರ ರಕ್ಷಿತ್ ಕುಂದರ್ ಪ್ರಶಸ್ತಿ ಸ್ವೀಕರಿಸಿದರು.
ಉಳ್ಳಾಲದಿಂದ ಕಾರವಾರದ ವರೆಗೆ ಸುಮಾರು 21 ಮೀನು ಉತ್ಪನ್ನಗಳ ತಯಾರಿ ಕಾರ್ಖಾನೆಗಳಿದ್ದು, ಈ ಎಲ್ಲ ಕಾರ್ಖಾನೆಗಳಿಗಿಂತ ಜನತಾ ಫಿಶ್ಮೀಲ್, ಆಹಾರ ಹಾಗೂ ಎಣ್ಣೆ ಉತ್ಪಾದನೆ ವೇಳೆ ಉತ್ಪತ್ತಿಯಾಗುವ ವಾಸನೆ ಹಾಗೂ ನೀರನ್ನು ಸಂಸ್ಕರಿಸಲು ಆಧುನಿಕ ತಾಂತ್ರಿಕತೆಯ ತ್ಯಾಜ್ಯ ಶುದ್ಧೀಕರಣ ಘಟಕಗಳನ್ನು ಅಳವಡಿಸಿ ನಿರ್ವಹಣೆ ಮಾಡಿ, ವಾಯು ಮಾಲಿನ್ಯ, ಜಲ ಮಾಲಿನ್ಯಗಳನ್ನು ಕಡಿಮೆ ಮಾಡಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸಂಸ್ಥೆ 25 ವರ್ಷಗಳಿಂದ ಕಾರ್ಯಾಚರಿಸುತ್ತಿದ್ದು, ಸದ್ಯ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸೂಚನೆ ಮೇರೆಗೆ ಪರಿಸರ ಸಂಸ್ಕರಣೆಯ ಪಣ ತೊಟ್ಟು, ಈ ಬಾರಿ ಕಟ್ಟಿಗೆ ಬಾಯ್ಲರ್ನಿಂದಾಗುವ ಮಾಲಿನ್ಯವನ್ನು ಮತ್ತು ಪರಿಸರ ನಾಶವನ್ನು ತಡೆಗಟ್ಟಲು ನೂತನ ಸುಧಾರಿತ ತಂತ್ರಜ್ಞಾನದ ಕಲ್ಲಿದ್ದಲು ಬಾಯ್ಲರನ್ನು ಅಳವಡಿಸುವ ಕುರಿತು ಚಿಂತನೆ ನಡೆಸಿದ್ದು, ಪರಿಸರ ಮಾಲಿನ್ಯ ತಡೆಯಲು ದೇಶದಲ್ಲೇ ಅಪರೂಪದ ವಿದೇಶಿ ತಾಂತ್ರಿಕತೆಯನ್ನು ಇಲ್ಲಿ ಅಳವಡಿಸಲಾಗಿದೆ. ಅಲ್ಲದೇ ಸ್ಥಳೀಯರಿಗೆ ಉದ್ಯೋಗ ನೀಡುವ ಜತೆಗೆ, ವರ್ಷದಿಂದ ವರ್ಷಕ್ಕೆ ಪರಿಸರ ಮಾಲಿನ್ಯ ಕಡಿಮೆ ಮಾಡಿ ಉದ್ಯಮ ನಡೆಸುವುದೇ ನಮ್ಮ ಗುರಿ ಎಂದು ಸಂಸ್ಥೆಯ ಮಾಲಕ ಆನಂದ್ ಸಿ. ಕುಂದರ್ ಪತ್ರಿಕೆಗೆ ತಿಳಿಸಿದ್ದಾರೆ.
0 comments:
Post a Comment