ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹೆಚ್ಚುತ್ತಿರುವ ಆದಾಯ

ಸುಬ್ರಹ್ಮಣ್ಯ: ಕುಕ್ಕೆಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರುತ್ತಿದ್ದು, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆದಾಯವೂ ಹೆಚ್ಚಿದೆ. ರಾಜ್ಯ ಧಾರ್ಮಿಕ ದತ್ತಿ¤ ಇಲಾಖೆಯ ಸುಪರ್ದಿಯಲ್ಲಿ ಅತಿ ಹೆಚ್ಚು ಆದಾಯವುಳ್ಳ ಶ್ರೀಮಂತ ದೇವಾಲಯವಾಗಿ ಈ ವರ್ಷವೂ ಪರಿಗಣಿತವಾಗಿದೆ. ದೇವಳದ ಕಳೆದ ವರ್ಷದ ಆದಾಯ 68 ಕೋಟಿ ರೂ. ದಾಟಿದೆ.

ದೇವಸ್ಥಾನಕ್ಕೆ ಮುಖ್ಯವಾಗಿ ಹರಕೆ ಸೇವೆ, ಕಾಣಿಕೆ ಡಬ್ಬಿ, ಬಡ್ಡಿ, ಛತ್ರಗಳ ಬಾಡಿಗೆ ಮತ್ತು ಕಟ್ಟಡಗಳ ಬಾಡಿಗೆ ಮತ್ತು ಕೃಷಿ ತೋಟದಿಂದ ಆದಾಯ ಬರುತ್ತದೆ.

ದಾಖಲೆ ಆದಾಯ

2013 - 14ನೇ ಸಾಲಿನ ಆರ್ಥಿಕ ವರ್ಷದಲ್ಲಿ (2013ರ ಏಪ್ರಿಲ್‌ ತಿಂಗಳಿನಿಂದ 2014ರ ಮಾರ್ಚ್‌ 31ರ ವರೆಗೆ) ದೇವಸ್ಥಾನದ ಒಟ್ಟು ಆದಾಯ 68,00,02,276 ರೂ.ಗಳಾಗಿದೆ ಎಂದು ದೇವಳದ ಕಾರ್ಯನಿರ್ವಹಣಾಧಿಕಾರಿ ಎಂ. ನಾಗರಾಜ್‌ ಉದಯವಾಣಿಗೆ ತಿಳಿಸಿದ್ದಾರೆ.

ಕಾಣಿಕೆ ಡಬ್ಬಿಯಿಂದ 12,84,58,922 ರೂ., ಹರಕೆ ಸೇವೆಯಿಂದ ದಾಖಲೆಯಾಗಿ ಬಂದ ಆದಾಯ 28,09,55,845 ರೂ. ವಿವಿಧ ಬ್ಯಾಂಕ್‌ಗಳಲ್ಲಿ ಇಟ್ಟಿರುವ ನಿರಖು ಠೇವಣಿಯ ಬಡ್ಡಿಯಿಂದ 16,38,79,981 ರೂ. ಹಾಗೂ ಕಟ್ಟಡ ಬಾಡಿಗೆಯಿಂದ 1,42,72,830 ಆದಾಯ ಬಂದಿದೆ. ದೇವಳದಲ್ಲಿ 400ಕ್ಕೂ ಅಧಿಕ ಖಾಯಂ ಸಿಬಂದಿ ಹಾಗೂ 200ಕ್ಕೂ ಅಧಿಕ ದಿನಗೂಲಿ ಸಿಬಂದಿಗಳಿದ್ದು, ಸಿಬಂದಿ ವೇತನಕ್ಕಾಗಿ 6,05,11,453 ರೂ., ವಾರ್ಷಿಕ ಜಾತ್ರೆಗೆ 1,35,24,521 ರೂ., ಅನ್ನಸಂತರ್ಪಣೆಗೆ 5,62,77,423 ರೂ., ಆನೆ ಹಾಗೂ ಜಾನುವಾರು ರಕ್ಷಣೆಗೆ 5,95,716 ರೂ. ಖರ್ಚಾಗಿದೆ.

ಆದಾಯ ತೆರಿಗೆ ಕಟ್ಟುವ ದೇವಸ್ಥಾನ

ಸುಬ್ರಹ್ಮಣ್ಯ ದೇವಳದ ಆದಾಯ 68 ಕೋಟಿ ರೂ.ಗಳಾಗಿದ್ದು ಸರಕಾರದ ನಿಯಮದಂತೆ ಇಲಾಖಾ ವಂತಿಗೆಯಾಗಿ ಆದಾಯದ ಶೇ. 10 ಹಣವನ್ನು ದೇವಳದವರು ಸರಕಾರಕ್ಕೆ ನೀಡಿದ್ದಾರೆ. ಧಾರ್ಮಿಕ ದತ್ತಿ ಇಲಾಖೆಯ ಬೆಂಗಳೂರು ಪ್ರಧಾನ ಕಚೇರಿಗೆ ಈ ಹಣ ಸಂದಾಯವಾಗಿದ್ದು, ಈ ವರ್ಷ ದೇವಳದಿಂದ 2,88,39,708 ರೂ. ಸಂದಾಯವಾಗಿದೆ. ಇದೇ ವೇಳೆ ಸುಬ್ರಹ್ಮಣ್ಯ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ದೇವಳದ ಆದಾಯದಿಂದಲೇ ನಡೆಸಲ್ಪಡುವ 180 ಕೋಟಿ ರೂ.ಗಳ ಮಾಸ್ಟರ್‌ ಪ್ಲಾನ್‌ಗೆ 2013 - 14ರಲ್ಲಿ ಒಟ್ಟು 8,17,91,095 ರೂ.ಗಳನ್ನು ಮೀಸಲಿರಿಸಲಾಗಿದೆ. ಅಲ್ಲದೆ ದೇವಳದಿಂದ ನಡೆಯುವ ಪದವಿ ಹಾಗೂ ಪದವಿಪೂರ್ವ ಕಾಲೇಜುಗಳ ಅಭಿವೃದ್ಧಿಗಾಗಿಯೂ ದೇವಳದ ಆದಾಯವನ್ನೇ ವಿನಿಯೋಗಿಸಲಾಗಿದೆ.

ಏರುತ್ತಲೇ ಇದೆ ದೇವಳದ ಆದಾಯ

2000ದ ವೇಳೆ ದೇವಳದ ಆದಾಯ 8 ಕೋಟಿ ರೂ.ಗಳಷ್ಟಿತ್ತು. ಕ್ರಿಕೆಟ್‌ ತಾರೆ ಸಚಿನ್‌ ತೆಂಡೂಲ್ಕರ್‌ 2006ರ ಮೇ ತಿಂಗಳಿನಲ್ಲಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಹರಕೆ ಸೇವೆ ಸಲ್ಲಿಸಿದ ಅನಂತರ ದೇಶ - ವಿದೇಶಗಳಲ್ಲಿ ಗುರುತಿಸಲ್ಪಟ್ಟು ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಯಿತು. ಇದರೊಂದಿಗೆ ಹರಕೆ ಸೇವೆಗಳೂ ಹೆಚ್ಚಾದವು. ಇದರ ಪರಿಣಾಮ 2006 - 07ರಲ್ಲಿ ದೇವಳದ ಆದಾಯ 19.76 ಕೋಟಿ ರೂ. ಇದ್ದು, 2007 - 08ರಲ್ಲಿ 24.44 ಕೋಟಿ ರೂ.ಗೆ ನೆಗೆಯಿತು. 2007 - 08 ರಾಜ್ಯದ ಶ್ರೀಮಂತ ದೇವಾಲಯವಾಗಿ ಪರಿಗಣಿತವಾಯಿತು. ಅನಂತರದ ವರ್ಷಗಳಲ್ಲಿ ರಾಜ್ಯದ ನಂ.1 ದೇವಸ್ಥಾನವೆಂದು ಶಾಶ್ವತವಾಗಿ ಪರಿಗಣಿಸಲಟ್ಟು, 2008 - 09ರಲ್ಲಿ 31 ಕೋಟಿ ಆದಾಯ, 2009 - 10ರಲ್ಲಿ 38.51 ಕೋಟಿ ರೂ. ಆದಾಯ ಬಂದಿತ್ತು. 2012 - 13ರಲ್ಲಿ 58 ಕೋಟಿ ದಾಖಲೆ ಆದಾಯ ಹೊಂದಿ ರಾಜ್ಯದ ಶ್ರೀಮಂತ ದೇವಾಲಯವಾಗಿ ಶಾಶ್ವತ ಸ್ಥಾನ ಹೊಂದಿತು.

2013 - 14ರಲ್ಲಿ ಒಟ್ಟು 37,961 ಸರ್ಪಸಂಸ್ಕಾರ ಹರಕೆ ಸೇವೆಗಳಾಗಿವೆ. ನಾಗಪ್ರತಿಷ್ಠೆ ಹರಕೆ ಸೇವೆ ಸರ್ಪಸಂಸ್ಕಾರ ಸೇವೆಯ ಒಂದು ಭಾಗವಾಗಿದೆ. ಮಾತ್ರವಲ್ಲದೆ ಈ ಸೇವೆಯನ್ನು ಪ್ರತ್ಯೇಕವಾಗಿ ಭಕ್ತರು ನೆರವೇರಿಸುತ್ತಾರೆ. ದಿನವೊಂದಕ್ಕೆ ಸರಾಸರಿ 400 ಆಶ್ಲೇಷಬಲಿ ಹರಕೆ ಸೇವೆಗಳು ಕ್ಷೇತ್ರದಲ್ಲಿ ನಡೆಯುತ್ತವೆ.

ಭಕ್ತರ ಮೂಲಭೂತ ಸೌಕರ್ಯಕ್ಕೆ ಆದ್ಯತೆ

ಭಕ್ತರ ಆದಾಯದಿಂದಲೇ ಪ್ರಸಿದ್ಧಿ ಹೊಂದಿದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ವತಿಯಿಂದ ಭಕ್ತರ ಮೂಲಭೂತ ಸೌಕರ್ಯಗಳನ್ನು ಪೂರೈಸಲು ತಲಾ 60 ಕೋಟಿ ರೂ.ಗಳ ಮೂರು ಸ್ತರದ ಒಟ್ಟು 180 ಕೋಟಿ ರೂ.ಗಳ ಮಾಸ್ಟರ್‌ ಪ್ಲಾನ್‌ ಕಾಮಗಾರಿ ಹಮ್ಮಿಕೊಂಡಿದ್ದು, ಈಗಾಗಲೇ ಪ್ರಥಮ ಹಂತದ ಕಾಮಗಾರಿಗಳು ಲೋಕಾರ್ಪಣೆಯಾಗಿದೆ. 2 ಮತ್ತು 3ನೇ ಹಂತದ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ್‌ ಮಡ್ತಿಲ ತಿಳಿಸಿದ್ದಾರೆ.

- ಉದಯವಾಣಿ ಕೃಪೆ

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com