ಜೂ.11: ಕೊಲ್ಲೂರು ಬಂದ್‌

ಕೊಲ್ಲೂರು : ನಿತ್ಯಾನಂದ ಆಶ್ರಮದ ಶ್ರೀ ವಿಮಲಾನಂದ ಸ್ವಾಮೀಜಿ ಅವರ ಸಮಾಧಿ ತೆರವಿಗೆ ಆಗ್ರಹಿಸಿ ಜೂ. 11ರಂದು ಕೊಲ್ಲೂರು ಬಂದ್‌ಗೆ ಸ್ಥಳೀಯ ನಾಗರಿಕರು ಕರೆ ನೀಡಿದ್ದಾರೆ. ಭಾನುವಾರ ಕೊಲ್ಲೂರಿನಲ್ಲಿ ಸ್ವಸಹಾಯ ಸಂಘದ ಸದಸ್ಯರು, ಊರ ನಾಗರಿಕರು, ಕೊಲ್ಲೂರು ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. 

ಕೊಲ್ಲೂರು ಮೂಕಾಂಬಿಕಾ ಅಮ್ಮನವರ ಗಡಿಯೊಳಗಡೆ ಸಾವು ಸಂಭವಿಸಿದಲ್ಲಿ ಮೃತದೇಹವನ್ನು ಗಡಿಯಿಂದ ಹೊರಗಡೆ ಕೊಂಡುಹೋಗಿ ಅಂತ್ಯವಿಧಿ ನೆರವೇರಿಸುವ ಪದ್ಧತಿ ಶತಶತಮಾನಗಳಿಂದ ನಡೆದುಕೊಂಡು ಬಂದಿದೆ. ಇದು ಯಾವುದೇ ಶಾಸ್ತ್ರ, ಸಂಪ್ರದಾಯದ ಪ್ರಶ್ನೆ ಅಲ್ಲ. ಇದೊಂದು ನಂಬಿಕೆಯ ವಿಷಯ. ಸಾವಿರಾರು ನಾಗರಿಕರ ಭಾವನೆಯ ಪ್ರತೀಕ. ವಿಮಲಾನಂದ ಸ್ವಾಮೀಜಿಯವರ ದೇಹತ್ಯಾಗ ಆದ ಬಳಿಕ ಇಲ್ಲಿನ ಪರಂಪರೆ ಬಗ್ಗೆ ಅವರು ಪ್ರತಿನಿಧಿಸುವ ಮಠಕ್ಕೆ ಅರಿವಿದ್ದರೂ ಗಡಿಯೊಳಗಡೆ ಬರುವ ಮಠದ ಆವರಣದಲ್ಲಿ ಸಮಾಧಿ ಕಾರ್ಯ ನೆರವೇರಿಸಿದರು ಎಂದು ನಾಗರೀಕರು ಅಭಿಪ್ರಾಯಪಟ್ಟರು.. 

''ಭಕ್ತರ ಆಶಯಕ್ಕೆ ಅವರು ನಿಧಾನವಾಗಿ ಸ್ಪಂದಿಸುವರೆಂಬ ಭಾವನೆ ಇತ್ತು. ಆದರೆ ಸಮಾಧಿ ಮುಂದಿಟ್ಟುಕೊಂಡು ಕೊಲ್ಲೂರಿಗೆ ಹೊರತಾದವರು ಪ್ರತೀದಿನ ತರಹೇವಾರಿ ಹೇಳಿಕೆ ನೀಡುತ್ತಿರುವುದು ಮನಸ್ಸಿಗೆ ಘಾಸಿ ಉಂಟುಮಾಡಿದೆ. ದಕ್ಷಿಣ ಭಾರತದ ಅತ್ಯಂತ ಪವಿತ್ರ ಶ್ರದ್ಧಾಕೇಂದ್ರವಾಗಿರುವ ಕೊಲ್ಲೂರಿನ ಬಗ್ಗೆ ಅಪನಂಬಿಕೆ ಹುಟ್ಟಿಸುವ ರೀತಿಯಲ್ಲಿ ಘಟನಾವಳಿಗಳು ಮುಂದುವರಿಯುತ್ತಿವೆ. ಇದನ್ನು ಖಂಡಿಸಿ ಜೂ.11ರಂದು ಬೆಳಗ್ಗೆ 6ರಿಂದ ಸಂಜೆ 6ರ ತನಕ ಕೊಲ್ಲೂರು ಬಂದ್ ನಡೆಸಲಾಗುವುದು. ನಿತ್ಯಾನಂದ ಆಶ್ರಮದ ಬಗೆಗಾಗಲಿ, ಅಲ್ಲಿನ ಶ್ರೀಗಳ ಬಗೆಗಾಗಲಿ ನಮಗೆ ಯಾವುದೇ ಅಗೌರವವಿಲ್ಲ. ಅಲ್ಲಿನ ಎಲ್ಲಾ ಕಾರ್ಯಕ್ರಮಗಳಲ್ಲಿ ನಾವು ಕೂಡ ಮುಕ್ತವಾಗಿ ಭಾಗವಹಿಸಿದ್ದೇವೆ. ಸಮಾಧಿ ವಿಷಯ ಮುಂದಿಟ್ಟುಕೊಂಡು ನಡೆಯುತ್ತಿರುವ ರಾದ್ಧಾಂತ ತಕ್ಷಣ ನಿಲ್ಲಬೇಕು. ಸ್ಥಳೀಯವಾಗಿರುವ ಸಂಪ್ರದಾಯ ಉಳಿಯಬೇಕು. ನಮ್ಮ ಆಗ್ರಹಕ್ಕೆ ಆಡಳಿತ ಮನ್ನಣೆ ನೀಡಬೇಕು. ಇಲ್ಲವಾದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು'' ಎಂದು ಹೋರಾಟದ ನೇತತ್ವ ವಹಿಸಿರುವ ಚಂದ್ರ ಬಳೆಗಾರ್ ಕೊಲ್ಲೂರು ತಿಳಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com