ಮಳೆಗಾಲದ ಬಳಿಕ ಕುಂದಾಪುರ-ಕಾರವಾರ ಚತುಷ್ಪಥ ಕಾಮಗಾರಿ


ಕುಂದಾಪುರ : ಕುಂದಾಪುರ - ಕಾರವಾರ - ಗೋವಾ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ಮುಂದಿನ ಮಳೆಗಾಲ ಮುಗಿದೊಡನೆ ಆರಂಭಗೊಳ್ಳಲಿದ್ದು, ಈಗಾಗಲೇ ಭೂಸ್ವಾಧೀನ ಗಡಿಗುರುತು ಹಾಗೂ ಮರು ಪರಿಶೀಲನಾ ಪ್ರಕ್ರಿಯೆ ಬಹುತೇಕ ಕಡೆ ಪೂರ್ಣಗೊಂಡಿದೆ.

ರೂ. 2,400 ಕೋಟಿಗೆ ಟೆಂಡರ್‌

ಪೂನಾದ ಐಡಿಯಲ್‌ ರೋಡ್‌ ಬಿಲ್ಡರ್ಸ್ ನೇತೃತ್ವದಲ್ಲಿ ಕಾಮಗಾರಿ ಆರಂಭಗೊಳ್ಳಲಿದ್ದು, ಈಗಾಗಲೇ ಮರವಂತೆ, ಹೊನ್ನಾವರ ಹಾಗೂ ಕಾರವಾರದಲ್ಲಿ ಕಚೇರಿ ಆರಂಭಿಸಲಾಗಿದೆ. 2014ರಲ್ಲಿ ಕರೆದ ಟೆಂಡರ್‌ನಲ್ಲಿ ನಮೂದಿಸಲಾಗಿದ್ದ ರೂ. 1,950 ಕೋಟಿ ವೆಚ್ಚದ ಯೋಜನೆ ಇದೀಗ ರೂ. 2,400 ಕೋಟಿಗೆ ಟೆಂಡರ್‌ ಆಗಿದೆ. ತಾಂತ್ರಿಕ ದೋಷಗಳಿಂದ ಕಾಮಗಾರಿ ಆರಂಭಕ್ಕೆ ಕೊಂಚ ಹಿನ್ನಡೆಯಾಗಿದ್ದರೂ ಬಹುತೇಕ ಅಕ್ಟೋಬರ್‌ ತಿಂಗಳಲ್ಲಿ ರಸ್ತೆ ನಿರ್ಮಾಣ ಕಾರ್ಯ ಆರಂಭಗೊಳ್ಳುವ ನಿರೀಕ್ಷೆ ಇದೆ. ಉತ್ತರ ಕನ್ನಡದಲ್ಲಿ ಹಲವೆಡೆ ಸೇತುವೆ ನಿರ್ಮಾಣ ಕಾರ್ಯಕ್ಕೆ ಅನುಭವಿ ಕಂಪೆನಿಗಳಲ್ಲೊಂದಾದ ಎಲ್‌ & ಟಿ ಕಂಪೆನಿಗೆ ಗುತ್ತಿಗೆ ನೀಡಲಾಗಿದ್ದು, ವಿನ್ಯಾಸದ ರಚನೆಯ ಬಗ್ಗೆ ಈಗಾಗಲೇ ಮಾತುಕತೆ ನಡೆದಿದೆ.

ಬಿಜೆಪಿ ಸರಕಾರ ಶ್ರಮಿಸಿದರೆ ಸುಗಮ ಪ್ರಯಾಣ

ಕುಂದಾಪುರ - ತಲಪಾಡಿ ಚತುಷ್ಪಥ ರಸ್ತೆ ನಿರ್ವಹಣೆಗೆ ರೂ. 760 ಕೋಟಿ ವೆಚ್ಚವಾಗಿದೆ. 3 ವರ್ಷದೊಳಗೆ ಪೂರ್ಣಗೊಳ್ಳಬೇಕಾದ ಕಾಮಗಾರಿ ಇದೀಗ 4ನೇ ವರ್ಷಕ್ಕೆ ಮುಂದುವರಿಯುತ್ತಿದೆ. ನವಯುಗ ಕಂಪೆನಿಯ ಆರ್ಥಿಕ ಮುಗ್ಗಟ್ಟಿನಿಂದ ಚತುಷ್ಪಥ ರಸ್ತೆ ನಿರ್ಮಾಣ ಕಾರ್ಯ ಹಿನ್ನಡೆಯಾಗಿದೆ ಎನ್ನಲಾಗಿದೆ. ಮುಂಬರುವ ಬೇಸಿಗೆಯಲ್ಲಿ ಕುಂದಾಪುರ ಗೋವಾ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ಭರದಿಂದ ಸಾಗಲು ಆಡಳಿತ ಚುಕ್ಕಾಣಿ ಹಿಡಿದಿರುವ ಬಿಜೆಪಿ ಸರಕಾರ ಹೆಚ್ಚು ಒತ್ತು ನೀಡಿ ಶ್ರಮಿಸಿದಲ್ಲಿ ತಲಪಾಡಿಯಿಂದ ಕಾರವಾರಕ್ಕೆ ಅನಾಯಾಸವಾಗಿ ಕೆಲವೇ ಗಂಟೆಗಳಲ್ಲಿ ಸುಗಮ ಪ್ರಯಾಣ ಬೆಳೆಸಲು ಸಾಧ್ಯ ಎಂದು ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ.

ಮರವಂತೆ ಪ್ರಕೃತಿ ಸೌಂದರ್ಯದಿಂದ ಇನ್ನಷ್ಟು ಬೆಳಗಿತೇ?

ಈ ಕಾಮಗಾರಿ ಪೂರ್ಣಗೊಂಡರೆ ಹೊಳೆ ಹಾಗೂ ಸಮುದ್ರದ ನಡುವೆ ಸಾಗುವ ರಾಷ್ಟ್ರೀಯ ಹೆದ್ದಾರಿಯ ಪ್ರಕೃತಿ ರಮ್ಯ ಸೌಂದರ್ಯದ ನೋಟ ಆಸ್ವಾದಕರನ್ನು ಇನ್ನಷ್ಟು ರಂಜಿಸಲಿದೆ. ಈ ಭಾರೀ ಉದ್ದದ ಸೇತುವೆ ನಿರ್ಮಾಣಕ್ಕೆ ಅದೆಷ್ಟು ಕಾಲ ಕಾಯಬೇಕು ಎನ್ನುವುದು ಮರವಂತೆ ಜನರ ಪ್ರಶ್ನೆ. ಕೋಟ್ಯಂತರ ರೂಪಾಯಿ ಈ ಸೇತುವೆ ನಿರ್ಮಾಣಕ್ಕಾಗಿ ವ್ಯಯವಾಗಲಿದ್ದು, ಇಲ್ಲಿನ ವಿಹಂಗಮ ನೋಟ ಪ್ರವಾಸಿಗರ ಮನ ಸೂರೆಗೊಳ್ಳಲಿದೆ.

ಡಾ| ಸುಧಾಕರ ನಂಬಿಯಾರ್‌ | May 29, 2014
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com