ದಿ|ಗಿಳಿಯಾರು ಕುಶಲ ಹೆಗ್ಡೆ ಸ್ಮಾರಕ ವಿದ್ಯಾರ್ಥಿ ಸಹಾಯಧನ ವಿತರಣೆ

ಕುಂದಾಪುರ: ಸೋಲುವುದನ್ನು ಶಿಕ್ಷಣ ಕಲಿಸಿಕೊಡಬೇಕು. ಸೋಲದೇ ಇರುವ ಪ್ರತಿಷ್ಠೆಯ ಶಿಕ್ಷಣ ಸಮಾಜದಲ್ಲಿ ವೈರುಧ್ಯವನ್ನು ಸೃಷ್ಟಿಸುತ್ತದೆ . ಶಿಕ್ಷಣ ಒಳ್ಳೆಯ ಮನುಷ್ಯರನ್ನು ಸೃಷ್ಟಿಸಿದಾಗ ಮಾತ್ರ ಸಶಕ್ತ ಸಮಾಜ ಸಾಧ್ಯ ಎಂದು ಸಾಹಿತಿ ನರೇಂದ್ರ ರೈ ದೇರ್ಲ ಹೇಳಿದರು.

ಅವರು ಕುಂದಾಪುರ ರೋಟರಿ ಲಕ್ಷ್ಮಿ ನರಸಿಂಹ ಕಲಾಮಂದಿರದಲ್ಲಿ ಗಿಳಿಯಾರು ಕುಶಲ ಹೆಗ್ಡೆ ಸಂಕಿರ್ಣ ಚಾರಟೇಬಲ್‌ ಟ್ರಸ್ಟ್‌ ವತಿಯಿಂದ ವಿದ್ಯಾರ್ಥಿ ಸಹಾಯಧನ ವಿತರಣೆ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದರು.

ಶಿಕ್ಷಣದಲ್ಲಿ ಅತ್ಯುತ್ತಮ ಫಲಿತಾಂಶ, ಗುಣಮಟ್ಟವನ್ನು ಕಾಯ್ದುಕೊಂಡು ಬಂದಂತ ಕರಾವಳಿಯ ಜಿಲ್ಲೆಗಳು ಇಂದು ಮತೀಯ ಭಾವನೆಯಿಂದ ಗುರುತಿಸಿಕೊಳ್ಳುತ್ತಿರುವುದು ಖೇದಕರ. ಮನುಷ್ಯ ಮನುಷ್ಯನ ನಡುವೆ ಸಾಮರಸ್ಯದ ಬೇರು ಸವೆದುಹೋಗುತ್ತಿದೆ. ವಿಜ್ಞಾನ ಹಾಗೂ ಗಣಿತದ ಅಡಿಪಾಯ ಅನುಮಾನ ಹಾಗೂ ಮನುಷ್ಯ ಮನುಷ್ಯನ ನಡುವೆ ಅನುಮಾನ ಸಶಕ್ತ ಸಮಾಜಕ್ಕೆ ಪೂರಕವಲ್ಲ. ಇಂದು ವಿದ್ಯಾರ್ಥಿಗಳು ಕೇವಲ ಅಂಕದ ಎರಕಕ್ಕೆ ಸಿಲುಕಿ ಹಾಕಿದ್ದಾರೆ. ಇಂದು ನಮ್ಮ ಆಲೋಚನೆ ದೃಷ್ಟಿ ಬದಲಾಗುತ್ತಿದೆ. ನಾವು ಮನುಷ್ಯತ್ವವನ್ನು ಕಳೆದುಕೊಳ್ಳುತ್ತಿದ್ದೇವೆ. ಓದದೇ ಇರುವವರು ಸುಶಿಕ್ಷತರಾಗುತ್ತಿದ್ದಾರೆ. ಓದಿದವರು ಭ್ರಷ್ಟರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ವ್ಯಕ್ತಿಯನ್ನು ಮತ್ತೆ ಜೀವಂತಗೊಳಿಸಿ ಜೀವನ ಮೌಲ್ಯವನ್ನು ಕಾಪಾಡುವ ಇಂತಹ ಆದರ್ಶ ಕೆಲಸಗಳು ನಿರಂತರವಾಗಿ ನಡೆಬೇಕು ಎಂದರು.

ಬೈಲೂರು ಶ್ರೀರಾಮಕೃಷ್ಣಾಶ್ರಮದ ಡಾ|ವಿನೋದ್‌ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗಂಗೊಳ್ಳಿಯ ಕೈಗಾರಿಕೋದ್ಯಮಿ ಎಚ್‌.ಗಣೇಶ್‌ ಕಾಮತ್‌ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ, ಟ್ರಸ್ಟ್‌ನ ಮುಖ್ಯಸ್ಥ ಸೊಲೋಮನ್‌ ಸೋನ್ಸ್‌, ಟ್ರಸಟ್‌ನ ಪ್ರಮುಖರಾದ ಕಿಶೋರ್‌ ಹೆಗ್ಡೆ, ಸ್ವರೂಪ್‌ ಹೆಗ್ಡೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಿಇಟಿಯಲ್ಲಿ 37ನೇ ರ್‍ಯಾಂಕ್‌ ಪಡೆದ ಕ್ಷಿಪ್ರ ದೇವಾಡಿಗ , ಪಿಯುಸಿ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಪಡೆದ ಅಕ್ಷತಾ ನಾಯಕ್‌, ಎಸ್‌ಎಸ್‌ಎಲ್‌ಸಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನಿಯಾದ ಭಾರ್ಗವಿ, ಕನ್ನಡ ಮಾಧ್ಯಮದಲ್ಲಿ ಅತ್ಯಧಿಕ ಅಂಕಗಳಿಸಿದ ಪವಿತ್ರ, ಪೂರ್ಣಚಂದ್ರ ಅವರನ್ನು ಸಮ್ಮಾನಿಸಲಾಯಿತು.

ಈ ಸಮಾರಂಭದಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕಗಳಿಸಿದ ಸುಮಾರು 200 ವಿದ್ಯಾರ್ಥಿಗಳಿಗೆ ರೂ.2 ಲಕ್ಷ ಮೊತ್ತದ ಸಹಾಯಧನ ವಿತರಿಸಲಾಯಿತು. ಅಲ್ಲದೇ ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ನೆರವು ಹಸ್ತಾಂತರಿಸಲಾಯಿತು.

ಟ್ರಸ್ಟ್ ಉದಯ ಹೆಗ್ಡೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಯು.ಎಸ್‌.ಶೆಣೈ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com