ಮರವಂತೆ - ಶಿರೂರು ಕಡಲ್ಗೊರೆತ: ತಜ್ಞರ ವರದಿ ಆಧರಿಸಿ ಕ್ರಮ: ಬಿಎಸ್‌ವೈ

ಕುಂದಾಪುರ: ಕಡಲ್ಕೊರೆತದಿಂದ ಹಾನಿಗೀಡಾಗಿರುವ ಮರವಂತೆ ಹೊರಬಂದರು ಕಾಮಗಾರಿ ಪ್ರದೇಶಕ್ಕೆ ಮಾಜಿ ಮುಖ್ಯಮಂತ್ರಿ, ಸಂಸದ ಬಿ.ಎಸ್.ಯಡಿಯೂರಪ್ಪ ಶನಿವಾರ ಬೆಳಗ್ಗೆ ಭೇಟಿ ನೀಡಿ ಮಾತನಾಡಿ ಜೂ.27ರಂದು ತಜ್ಞರ ಮೂಲಕ ಪರಿಶೀಲನೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. 80 ಮೀಟರ್ ಉದ್ದದ ತಡೆಗೋಡೆ ಕೊಚ್ಚಿಹೋಗಿದೆ. ಅದೇ ಮಾದರಿಯಲ್ಲಿ ನಿರ್ಮಾಣ ಮುಂದುವರಿಸಬೇಕೇ ಅಥವಾ ವಿನ್ಯಾಸದಲ್ಲಿ ಬದಲಾವಣೆಗೊಳಿಸಬೇಕೆ ಎಂಬ ಬಗ್ಗೆ ತಜ್ಞರ ಪರಿಶೀಲನೆಯ ಬಳಿಕ ಚಿಂತನೆ ನಡೆಸಲಾಗುವುದು ಎಂದವರು ಈ ಸಂದರ್ಭ ನುಡಿದರು. 

     ಕರಾವಳಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಕಡಲ್ಕೊರೆತ ಸಮಸ್ಯೆ ತೀವ್ರವಾಗಿದ್ದು ಕರಾವಳಿ ಭಾಗದ ಎಲ್ಲ ಸಂಸದರು ಹಾಗೂ ಜನಪ್ರತಿನಿಧಿಗಳ ಸಹಕಾರದೊಂದಿಗೆ ಶಾಶ್ವತ ಪರಿಹಾರದ ಬಗ್ಗೆ ಚಿಂತನೆ ನಡೆಸುವುದಾಗಿ ತಿಳಿಸಿದರು.

        ಮರವಂತೆಯ ಮೀನುಗಾರ ಮುಖಂಡರು ಮನವಿ ಸಲ್ಲಿಸಿ ಈಗಿರುವ ವಿನ್ಯಾಸಕ್ಕೆ ಹೊಂದಿಕೊಂಡು ತಡೆಗೋಡೆಯನ್ನು ಇನ್ನೂ 100 ಮೀಟರ್ ವಿಸ್ತರಿಸಿದ್ದಲ್ಲಿ ಬಂದರಿಗೆ ಯಾವುದೇ ಅಪಾಯ ಒದಗಲಾರದು ಎಂದರು. ಸ್ಥಳೀಯ ಮೀನುಗಾರರ ಸೇವಾ ಸಮಿತಿಯ ವತಿಯಿಂದ ಬಿ.ಎಸ್.ವೈ.ಅವರನ್ನು ಸನ್ಮಾನಿಸಲಾಯಿತು. ಸೇವಾ ಸಮಿತಿ ಅಧ್ಯಕ್ಷ ಸೋಮಯ್ಯ ಖಾರ್ವಿ ಮತ್ತು ಚಂದ್ರ ಖಾರ್ವಿ ಸನ್ಮಾನಿಸಿದರು. ಮಾಜಿ ಸಂಸದ ಬಿ.ವೈ.ರಾಘವೇಂದ್ರ, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ.ಎಂ.ಸುಕುಮಾರ ಶೆಟ್ಟಿ, ಕುಂದಾಪುರ ಕ್ಷೇತ್ರ ಬಿಜೆಪಿ ಅಧ್ಯಕ್ಷ ರಾಜೇಶ ಕಾವೇರಿ, ಅಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.

ಆ ಬಳಿಕ ಶಿರೂರಿಗೆ ಭೇಟಿ ನೀಡಿದ ಅವರು  ಅಳ್ವೆಗದ್ದೆ ಮಹಾಗಣಪತಿ ಸಭಾಭವನದಲ್ಲಿ ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಲಿ. ಮಂಗಳೂರು, ಶಿರೂರು ವಲಯ ಮೀನುಗಾರರ ವಿವಿಧೋದ್ದೇಶ ಸಹಕಾರ ಸಂಘ ಮತ್ತು ಬೈಂದೂರು ವಲಯ ಮಹಿಳಾ ಮೀನುಗಾರರ ಸಂಘದ ಆಶ್ರಯದಲ್ಲಿ ಮೀನುಗಾರ ಮಹಿಳೆಯರಿಗೆ ಶೇ. 3 ಬಡ್ಡಿ ಸಾಲ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಾನು ಮುಖ್ಯಮಂತ್ರಿಯಾಗಿದ್ದಾಗ ಗಂಗೊಳ್ಳಿ, ಕೊಡೇರಿ, ಶಿರೂರು ಮುಂತಾದೆಡೆ ಬಂದರು ನಿರ್ಮಾಣಕ್ಕೆ ಚಾಲನೆ ನೀಡಿದ್ದೇನೆ. ಸರಕಾರದ ನೆರವಿನ ಮೂಲಕ ಮಹಿಳೆಯರು ಸ್ವಾಭಿಮಾನದ ಬದುಕು ನಡೆಸಬೇಕು ಎಂದರು.

ಈ ಸಂದರ್ಭದಲ್ಲಿ ಮಾಜಿ ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ, ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸುಕುಮಾರ ಶೆಟ್ಟಿ, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಯಶಪಾಲ್‌ ಸುವರ್ಣ, ಜಿ.ಪಂ. ಸದಸ್ಯರಾದ ಬಾಬು ಶೆಟ್ಟಿ, ಗೌರಿ ದೇವಾಡಿಗ, ಸಾವಿತ್ರಿ ಎನ್‌. ಮೊಗೇರ, ಗ್ರಾ.ಪಂ. ಅಧ್ಯಕ್ಷ ರಾಮ ಮೇಸ್ತ, ಸುರೇಶ ಶೆಟ್ಟಿ, ಪುಷ್ಪರಾಜ್‌ ಶೆಟ್ಟಿ, ರಾಜೇಶ ಕಾವೇರಿ, ಸತೀಶ ಶೆಟ್ಟಿ, ಮುಂತಾದವರು ಹಾಜರಿದ್ದರು.

ದತ್ತಾತ್ರೇಯ ಮೊಗೇರ ಸ್ವಾಗತಿಸಿದರು. ಅಕ್ಷಯ ನಾರಾಯಣ ಪ್ರಸ್ತಾವನೆಗೈದರು. ತುಳಸಿದಾಸ್‌ ಮೊಗೇರ ಕಾರ್ಯಕ್ರಮ ನಿರೂಪಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com