ಎಸ್‌ಸಿಡಿಸಿಸಿ ಬ್ಯಾಂಕ್‌: ಸಾರ್ವಕಾಲಿಕ ಗರಿಷ್ಠ 18.65 ಕೋ.ರೂ. ಲಾಭ

ಮಂಗಳೂರು : ಸಹಕಾರಿ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಆಧುನಿಕ ಬ್ಯಾಂಕಿಂಗ್‌ ಸೇವೆಯನ್ನು ನೀಡುತ್ತಿರುವ, ದೇಶದಲ್ಲೇ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ವಿಶಿಷ್ಟ ರೀತಿಯ ಕಾರ್ಯಯೋಜನೆಗಳೊಂದಿಗೆ ಪ್ರಮುಖವಾಗಿ ಗುರುತಿಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ (ಎಸ್‌ಸಿಡಿಸಿಸಿ ಬ್ಯಾಂಕ್‌) 2014 ಮಾ. 31ಕ್ಕೆ ಅಂತ್ಯಗೊಂಡ ಆರ್ಥಿಕ ವರ್ಷದಲ್ಲಿ ಸಾರ್ವಕಾಲಿಕ ಗರಿಷ್ಠ 18.65 ಕೋ.ರೂ. ಲಾಭ ಗಳಿಸಿದೆ. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಶತಮಾನೋತ್ಸವದ ಹೊಸ್ತಿಲಲ್ಲಿದೆ.

ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಿಯೂ ಬ್ಯಾಂಕ್‌ ಗರಿಷ್ಠ ಲಾಭ ಗಳಿಸಿ ಸಾಧನೆಯ ಪಥದಲ್ಲಿದೆ. ಬ್ಯಾಂಕ್‌ ವರದಿ ವರ್ಷದಲ್ಲಿ ಒಟ್ಟು ವ್ಯವಹಾರದ ಗುರಿ 3,320 ಕೋಟಿ ರೂ. ದಾಟಿ 3,411.65 ಕೋ. ರೂ. ವ್ಯವಹಾರ ಸಾಧಿಸುವ ಮೂಲಕ ಗುರಿ ಮೀರಿದ ಸಾಧನೆಗೈದಿದೆ. ಪ್ರಸಕ್ತ ವರ್ಷ 5,000 ಕೋ.ರೂ. ವ್ಯವಹಾರದ ಗುರಿ ಹೊಂದಿದೆ ಎಂದು ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

2010-11ನೇ ಸಾಲಿನ ಬಡ್ಡಿ ಸಹಾಯಧನ ಬಾಕಿ 8.95 ಕೋ. ರೂ.ಹಾಗೂ 2011-12ನೇ ಸಾಲಿನಲ್ಲಿ 38.75 ಕೋ. ರೂ. ರಾಜ್ಯ ಸರಕಾರ ಬ್ಯಾಂಕಿಗೆ ನೀಡಲು ಬಾಕಿ ಇದೆ. ಸಾಲ ಮನ್ನಾ ಮತ್ತು ಅದರ ಬಡ್ಡಿ 1.23 ಕೋ. ರೂ. ಬರಲು ಬಾಕಿ ಇರುತ್ತದೆ. ಆದರೂ ಬ್ಯಾಂಕು ಗರಿಷ್ಠ ಲಾಭವನ್ನು ಗಳಿಸಿದೆ ಎಂದರು.

ಠೇವಣಿ ಸಂಗ್ರಹದಲ್ಲಿ ಸಾಧನೆ

ವರದಿ ವರ್ಷದಲ್ಲಿ ಎಲ್ಲ ಬ್ಯಾಂಕುಗಳಲ್ಲಿ ಠೇವಣಾತಿಯಲ್ಲಿ ತೀವ್ರ ಸ್ಪರ್ಧೆ ಇದ್ದರೂ ಮತ್ತು ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದ ಯಾವುದೇ ಠೇವಣಾತಿ ಇಲ್ಲದೆಯೂ ಎಸ್‌ಸಿಡಿಸಿಸಿ ಬ್ಯಾಂಕ್‌ ತನ್ನ 70 ಶಾಖೆಗಳ ಮುಖಾಂತರ 2013-14 ಸಾಲಿನಲ್ಲಿ ಒಟ್ಟು 2,001.14 ಕೋ ರೂ. ಠೇವಣಿ ಸಂಗ್ರಹಿಸಿ, ಅತೀ ಹೆಚ್ಚು ಠೇವಣಿ ಸಂಗ್ರಹಿಸಿದ ರಾಜ್ಯದ ಪ್ರಥಮ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಕೀರ್ತಿಗೂ ಪಾತ್ರವಾಗಿದೆ. ಕಳೆದ ಸಾಲಿಗಿಂತ ಶೇ. 27.79ರಷ್ಟು ಏರಿಕೆಯಾಗಿದೆ ಎಂದು ರಾಜೇಂದ್ರ ಕುಮಾರ್‌ ತಿಳಿಸಿದರು.

ಸಾಲ ನೀಡಿಕೆ - ವಸೂಲಿಯಲ್ಲಿ ದಾಖಲೆ

ಸ್ಪರ್ಧಾತ್ಮಕ ಆರ್ಥಿಕ ಹಿನ್ನೆಲೆಯಲ್ಲಿಯೂ ಬ್ಯಾಂಕ್‌ ಆರ್ಥಿಕ ವರ್ಷದಲ್ಲಿ 2,360 ಕೋ.ರೂ. ಮುಂಗಡ ನೀಡಿದೆ. ಇದು ಹಿಂದಿನ ಆರ್ಥಿಕ ವರ್ಷಕ್ಕಿಂತ ಶೇ. 13.30 ಅಧಿಕ ಸಾಧನೆಯಾಗಿದೆ. ಕೃಷಿ ಹಾಗೂ ಕೃಷಿ ಅಭಿವೃದ್ಧಿಗೆ ಅಲ್ಪಾವಧಿ ಸಾಲ 791.10 ಕೋ.ರೂ. ಮಧ್ಯಮಾವಧಿ ಸಾಲ 32.94 ಕೋ.ರೂ. ಸೇರಿ ಕೃಷಿ ಕ್ಷೇತ್ರಕ್ಕೆ ಒಟ್ಟು 824.04 ಕೋ.ರೂ. ಸಾಲ ನೀಡಲಾಗಿದೆ. ಹೊರಬಾಕಿ ಸಾಲ 1,410.51 ಕೋ.ರೂ. ಆಗಿರುತ್ತದೆ ಎಂದವರು ವಿವರಿಸಿದರು.

ಬ್ಯಾಂಕಿಗೆ ಒಟ್ಟು 902 ಸಂಘಗಳು ಸದಸ್ಯರಾಗಿದ್ದು, ಪಾಲು ಬಂಡವಾಳ 35.5 ಕೋ.ರೂ. ಆಗಿದೆ. ದುಡಿಯುವ ಬಂಡವಾಳ 2,667.85 ಕೋ.ರೂ.ಗೇರಿದ್ದು ಕಳೆದ ವರ್ಷಕ್ಕಿಂತ ಶೇ. 16.10ರಷ್ಟು ಏರಿಕೆ ಕಂಡಿದೆ. ಬ್ಯಾಂಕ್‌ 55.35 ಕೋ.ರೂ.ವಿವಿಧ ನಿಧಿಗಳನ್ನು ಹೊಂದಿದ್ದು ಕಳೆದ ವರ್ಷಕ್ಕಿಂತ ಶೇ. 23.91ರಷ್ಟು ಏರಿಕೆಯಾಗಿದೆ. ಒಟ್ಟು ಬ್ಯಾಂಕಿನ ನಿವ್ವಳ ಅನುತ್ಪಾದಕ ಅಸ್ತಿ ಶೇ. 1.78 ಆಗಿದ್ದು ಇದನ್ನು ಬರುವ ಮಾ. 31ರ ಅಂತ್ಯಕ್ಕೆ ಶೇ. 1ರೊಳಗೆ ತರುವ ಗುರಿ ಇದೆ ಎಂದರು.

ಶತಮಾನೋತ್ಸವ ಕಟ್ಟಡ

ಬ್ಯಾಂಕ್‌ ಶತಮಾನೋತ್ಸವದ ಸವಿನೆನಪಿಗಾಗಿ 5 ಅಂತಸ್ತಿನ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದ್ದು ಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ಇದರ ಉದ್ಘಾಟನೆ ನಡೆಯಲಿದೆ ಎಂದರು.

ಯೋಜನೆಗಳು

ಶತಮಾನೋತ್ಸವದ ವರ್ಷದಲ್ಲಿ ಬ್ಯಾಂಕಿನ ಶಾಖೆಗಳ ಸಂಖ್ಯೆಯನ್ನು 101ಕ್ಕೆ ಏರಿಸುವುದು, ಸಿಬಂದಿಗಳಿಗೆ ಹಾಗೂ ಅಧ್ಯಕ್ಷರು, ನಿರ್ದೇಶಕರು ಮತ್ತು ಸದಸ್ಯರಿಗೆ ಸಹಕಾರ ಕ್ಷೇತ್ರದ ಬಗ್ಗೆ ವಿಶೇಷ ಅನುಭವ ನೀಡಲು ತರಬೇತಿ ಕೇಂದ್ರವನ್ನು ತೆರೆಯುವುದು, ಮಂಗಳೂರು ವಿ.ವಿ.ಯಲ್ಲಿ ಸಹಕಾರ ಅಧ್ಯಯನ ಪೀಠವನ್ನು ಸ್ಥಾಪಿಸುವಂತೆ ಸರಕಾರದ ಗಮನವನ್ನು ಸೆಳೆಯುವುದು, ಗ್ರಾಹಕರು ತಾವೇ ಪಾಸ್‌ ಬುಕ್‌ ಪ್ರಿಂಟಿಂಗ್‌, ಹಣ ಪಾವತಿ, ಮುದ್ರಿತ ರಶೀದಿ ಹಾಗೂ ಖಾತೆಯ ಬ್ಯಾಲೆನ್ಸನ್ನು ತಿಳಿದುಕೊಳ್ಳಲು ಅವಕಾಶವಾಗುವಂತೆ ಕಿಯೊಕ್ಸ್‌ ಯಂತ್ರ ಅಳವಡಿಕೆ, ಇಂಟರ್‌ ಬ್ಯಾಂಕಿಂಗ್‌ ಮೊಬೈಲ್‌ ಪೇಮೆಂಟ್‌ ಸಿಸ್ಟಮ್‌ ಯೋಜನೆ, ಬ್ಯಾಂಕಿನ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ತಾಲೂಕು ಮಟ್ಟದಲ್ಲಿ ಗ್ರಾಹಕರ ಸಮಾವೇಶ ನಡೆಸುವುದು ಮುಂತಾದ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಜೂ. 20ರ ಬಳಿಕ ಪ್ರಾರಂಭವಾದ ಎಲ್ಲ ಹೊಸ ಶಾಖೆಗಳಲ್ಲಿ ವಾಹನ ಸಾಲ ಪಡೆಯುವ ಗ್ರಾಹಕರಿಗೆ 1 ತಿಂಗಳ ಬಡ್ಡಿ ಮನ್ನಾ ಕೊಡುಗೆಯನ್ನು ಅವರು ಪ್ರಕಟಿಸಿದರು. ಬ್ಯಾಂಕಿನ ಶ್ರೇಯಸ್ಸಿಗೆ ಶ್ರಮಿಸಿದ ಸರ್ವರಿಗೂ ನಾನು ಆಭಾರಿಯಾಗಿದ್ದೇನೆ ಎಂದವರು ಹೇಳಿದರು.

ಉಪಾಧ್ಯಕ್ಷ ವಿನಯ ಕುಮಾರ್‌ ಸೂರಿಂಜೆ, ನಿರ್ದೇಶಕರಾದ ಬಿ. ನಿರಂಜನ್‌, ಟಿ.ಜಿ. ರಾಜರಾಮ ಭಟ್‌, ಎಂ. ವಾದಿರಾಜ ಶೆಟ್ಟಿ, ಎಸ್‌. ರಾಜು ಪೂಜಾರಿ, ಸದಾಶಿವ ಉಳ್ಳಾಲ, ಎಸ್‌.ಬಿ. ಜಯರಾಮ ರೈ, ಶಶಿ ಕುಮಾರ್‌ ರೈ, ರಾಜೇಶ್‌ ರಾವ್‌, ಸಹಕಾರ ಸಂಘಗಳ ನಿಬಂಧಕರಾದ ಜಿ.ಆರ್‌. ವಿಜಯ ಕುಮಾರ್‌, ಕಾಂತರಾಜು, ವ್ಯವಸ್ಥಾಪನ ನಿರ್ದೇಶಕ ಎಂ. ಗೋಪಾಲಕೃಷ್ಣ ಭಟ್‌ ಉಪಸ್ಥಿತರಿದ್ದರು.

ಬ್ಯಾಂಕಿನ ಸಾಧನೆ

* ಬ್ಯಾಂಕಿಗೆ 15 ಬಾರಿ ಅಪೆಕ್ಸ್‌ ಬ್ಯಾಂಕ್‌ ಪ್ರಶಸ್ತಿ, 12 ಬಾರಿ ಸತತವಾಗಿ ನಬಾರ್ಡ್‌ ಪ್ರಶಸ್ತಿ

* ಸತತ 19 ವರ್ಷಗಳಿಂದ ಕೃಷಿ ಸಾಲ ವಸೂಲಾತಿಯಲ್ಲಿ ಶೇ. 100ರ ಸಾಧನೆಯ ಮೂಲಕ ರಾಷ್ಟ್ರೀಯ ದಾಖಲೆ

*ಸ್ವ ಸಹಾಯ ಗುಂಪುಗಳ ಸಮರ್ಪಕ ಅನುಷ್ಠಾನದಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ. ಬ್ಯಾಂಕ್‌ ಒಟ್ಟು 40,336 ಗುಂಪುಗಗಳು

* ಜಿಲ್ಲೆಯಲ್ಲಿ ಒಟ್ಟು 90,749 ರೈತರಿಗೆ ಮಂಗಳಾ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ವಿತರಣೆೆ. 71,513 ಕಿಸಾನ್‌ ಕ್ರೆಡಿಟ್‌ ಕಾರ್ಡುದಾರರಿಗೆ ವೈಯಕ್ತಿಕ ಅಪಘಾತ ವಿಮಾ ಸೌಲಭ್ಯ.

* ರೈತರಿಗೆ ರುಪೇ ಕಿಸಾನ್‌ ಕ್ರೆಡಿಟ್‌ ಕಾರ್ಡ್‌

* ಮೊಬೈಲ್‌ ಬ್ಯಾಂಕಿಂಗ್‌ ಸೇವೆ

* ಬ್ಯಾಂಕಿನ ಎಲ್ಲ ಶಾಖೆಗಳ ಭದ್ರತೆ ದೃಷ್ಟಿಯಿಂದ ಸಿಸಿ ಕೆಮರಾ ಅಳವಡಿಕೆ

* ಬ್ಯಾಂಕ್‌ ಸಿಬಂದಿಗೆ ಪಿಂಚಣೆ ಯೋಜನೆ
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com