ಕೊಲೆ ಯತ್ನ ಆರೋಪಿಗಳ ಬಂಧನಕ್ಕೆ ಆಗ್ರಹ

ಉಡುಪಿ: ಸವಿತಾ ಸಮಾಜದ ವೃತ್ತಿ ನಿರತ ಅಶೋಕ್ ಭಂಡಾರಿ ಅವರ ಮೇಲಾದ ಹಲ್ಲೆ, ಕೊಲೆ ಯತ್ನ ಪ್ರಕರಣದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಸೋಮವಾರ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಎದುರು ಪ್ರತಿಭಟನೆ ನಡೆಯಿತು. 

ಉಡುಪಿ ಜಿಲ್ಲಾ ಸವಿತಾ ಸಮಾಜದ ನೇತೃತ್ವದಲ್ಲಿ ಎಲ್ಲ ಸೆಲೂನುಗಳನ್ನೂ ಮುಚ್ಚಿ ಅಂಬಲಪಾಡಿ ಬೈಪಾಸ್ ಬಳಿಯಿಂದ ಹೊರಟ ಪ್ರತಿಭಟನಾಕಾರರು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಎಂ.ಬಿ.ಬೋರಲಿಂಗಯ್ಯ ಅವರಿಗೆ ಮನವಿ ಸಲ್ಲಿಸಿದರು. 

ಪ್ರತಿಭಟನಾಕಾರರನ್ನು ಉದ್ದೇಶಿಸಿ ಉಡುಪಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಬನ್ನಂಜೆ ಗೋವಿಂದ ಭಂಡಾರಿ ಮಾತನಾಡಿ, ಜೂ.24ರಂದು ಮಧ್ಯಾಹ್ನ 12 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸದಿದ್ದರೆ ಕಾಲ್ನಡಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು. ನ್ಯಾಯ ಸಿಗದಿದ್ದರೆ, ಬುಧವಾರದಿಂದ ಸೆಲೂನ್‌ಗಳನ್ನು ಮುಚ್ಚಿ ಅನ್ನ ಸತ್ಯಾಗ್ರಹ ಆರಂಭಿಸಲಾಗುವುದು. ಎಲ್ಲ ಜಿಲ್ಲೆಗಳಲ್ಲೂ ಪ್ರತಿಭಟನೆ ಮಂಗಳವಾರದಿಂದ ನಡೆಯಲಿದೆ ಎಂದು ಎಚ್ಚರಿಸಿದರು. 

ಪ್ರಕರಣ ನಡೆದು ನಾಲ್ಕು ದಿನಗಳಾದರೂ ಮಣಿಪಾಲ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ. ನೀವು ಆರೋಪಿಗಳನ್ನು ಹುಡುಕಿ ಕರೆ ತನ್ನಿ, ನಾವು ಬಂಧಿಸುತ್ತೇವೆ ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಿದ್ದಾರೆ. ಜೀವ ಬೆದರಿಕೆಯನ್ನು ಎಫ್‌ಐಆರ್‌ನಲ್ಲಿ ಕೊಲೆ ಯತ್ನವಾಗಿ ಬದಲಿಸಬೇಕು ಎಂದು ಆಗ್ರಹಿಸಿದರು. 

ಪ್ರಕರಣದ ವಿವರ: ಪರ್ಕಳದ ಶಿವಂ ಬಿಲ್ಡಿಂಗ್‌ನಲ್ಲಿರುವ ಕ್ವಿಕ್ ಹೇರ್ ಡ್ರೆಸ್ಸಸ್‌ನಲ್ಲಿ ಗುರುವಾರ ರಾತ್ರಿ 9ಕ್ಕೆ ಬಂದ ವ್ಯಕ್ತಿಗಳು ಶೇವ್ ಮಾಡುವಂತೆ ಹೇಳಿದ್ದರು. ಸಮಯ ಮೀರಿದ ಹಿನ್ನೆಲೆಯಲ್ಲಿ ಆಗುವುದಿಲ್ಲ ಎಂದ ರಾಘವೇಂದ್ರ ಭಂಡಾರಿ, ಸುಬ್ರಹ್ಮಣ್ಯ ಭಂಡಾರಿ ಅವರಿಗೆ ಹಲ್ಲೆ ನಡೆಸಲಾಗಿತ್ತು. ಇದನ್ನು ಪ್ರಶ್ನಿಸಿದ್ದಕ್ಕೆ ಅಶೋಕ್ ಭಂಡಾರಿ ಅವರಿಗೆ ತಲವಾರಿನಿಂದ ಕೈಗೆ ಕಡಿದು ಕೊಲೆ ಯತ್ನ ನಡೆಸಿ ಸೆಲೂನ್ ಪುಡಿಗೈಯಲಾಗಿತ್ತು. ಅಶೋಕ್ ಭಂಡಾರಿ ಅವರ ಕಣ್ಣಲ್ಲಿ ಗಾಜಿನ ಚೂರುಗಳಿದ್ದು ಅಜ್ಜರಕಾಡು ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಕರೆದೊಯ್ಯಲು ಕುಟುಂಬಕ್ಕೆ ಆರ್ಥಿಕ ಸಂಕಷ್ಟವಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com