ಬಿಜೆಪಿ ಸೇರಲು ಹಾಲಾಡಿಗೆ ಶೋಭಾ ಬಹಿರಂಗ ಆಹ್ವಾನ

ಕುಂದಾಪುರ: ಹಾಲಾಡಿ ಬೆಂಬಲಿಗರು, ಕೆಜೆಪಿ ಬೆಂಬಲಿಗರು, ಬಿಜೆಪಿ ಬೆಂಬಲಿಗರು ಎಂಬ ಮಾತು ಇನ್ನು ಮುಂದೆ ಆಡಲಾರೆ. ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಆಶೀರ್ವಾದ, ಕಿರಣ್ ಕೊಡ್ಗಿಯವರ ಸಹಕಾರ ಮತ್ತು ಒಟ್ಟು ಕಾರ್ಯಕರ್ತರ ಸಂಘಟಿತ ಹೋರಾಟದ ಫಲವಾಗಿ ಸಂಸದೆಯಾಗಿ ಆಯ್ಕೆಯಾಗಿದ್ದೇನೆ. ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಬಿಜೆಪಿಗೆ ಮರಳಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು. 

ಸಂಜೆ ಕೋಟೇಶ್ವರ ಶಾರದಾ ಕಲ್ಯಾಣ ಮಂಟಪದಲ್ಲಿ ಕೋಟೇಶ್ವರ ಬಿಜೆಪಿ ಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. 

ನರೇಂದ್ರ ಮೋದಿಯವರ ನಾಯಕತ್ವ ಒಪ್ಪಿ ಹಾಲಾಡಿಯವರು ಪಕ್ಷಕ್ಕೆ ಮರಳುವರು ಎಂಬ ವಿಶ್ವಾಸ ನನಗಿದೆ. ಇನ್ನು ಮುಂದೆ ಗುಂಪುಗಾರಿಕೆ ಬೇಡ. ಏನಿದ್ದರೂ ಅಭಿವೃದ್ಧಿ ಒಂದೇ ಮಂತ್ರ ಎಂದು ಹೇಳಿದ ಅವರು, ಕುಂದಾಪುರದಲ್ಲಿ ಅತಿ ಹೆಚ್ಚು 37 ಸಾವಿರ ಮತಗಳ ಲೀಡ್ ದೊರಕಿದೆ. ಜನರ ಅಪೇಕ್ಷೆಗೆ ತಕ್ಕಂತೆ ಕೆಲಸ ಮಾಡುವೆ ಎಂದರು. 

ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಮಾತನಾಡಿ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಪಕ್ಷಕ್ಕೆ ಅತಿ ಹೆಚ್ಚಿನ ಬೆಂಬಲ ಸಿಕ್ಕಿರುವುದು ಕುಂದಾಪುರ ಕ್ಷೇತ್ರದಲ್ಲಿ. ಈ ನೆಲೆಯಲ್ಲಿ ನಮಗೆ ಜವಾಬ್ದಾರಿ ಇದೆ. ಮುಂದಿನ 5 ವರ್ಷಗಳ ಕಾಲ ಉತ್ತಮ ಆಡಳಿತ ನೀಡುವ ಇರಾದೆ ನಮ್ಮದಾಗಿರಬೇಕು ಎಂದರು. 

ಕುಂದಾಪುರ ಕ್ಷೇತ್ರ ಬಿಜೆಪಿ ಅಧ್ಯಕ್ಷ ರಾಜೇಶ ಕಾವೇರಿ ಮಾತನಾಡಿ, ರಾಜ್ಯ ಸರಕಾರ ಬಸವ ವಸತಿ ಯೋಜನೆಯ ಫಲಾನುಭವಿಗಳಿಗೆ ಬಿಲ್ ಪಾವತಿ ಮಾಡದೆ ಅನ್ಯಾಯವೆಸಗಿದೆ. ಇದರ ವಿರುದ್ಧ ಜೂ.19ರಂದು ಉಡುಪಿಯಲ್ಲಿ ಹಮ್ಮಿಕೊಂಡಿರುವ ಬಹತ್ ಹೋರಾಟದಲ್ಲಿ ಫಲಾನುಭವಿಗಳು, ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು. 

ಉಡುಪಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಜಿಪಂ ಸದಸ್ಯರಾದ ಗಣಪತಿ ಟಿ.ಶ್ರೇಯಾನ್, ಗೀತಾಂಜಲಿ ಸುವರ್ಣ, ರಾಜ್ಯ ಬಿಜೆಪಿ ಕಾರ್ಯದರ್ಶಿ ಶ್ಯಾಮಲಾ ಕುಂದರ್ ಉಪಸ್ಥಿತರಿದ್ದರು. ಕೋಟೇಶ್ವರ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ರವೀಂದ್ರ ದೊಡ್ಮನೆ ಸ್ವಾಗತಿಸಿದರು. ರಾಘವೇಂದ್ರ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

MP Shobha karandlaje openly invited to Halady to Join BJP
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com