ರೈಲು ದರ ಏರಿಕೆ: ಜಿಲ್ಲಾ ಕಾಂಗ್ರೆಸ್‌ ಖಂಡನೆ

ಕುಂದಾಪುರ : ಭಾರತೀಯ ಜನತಾ ಪಕ್ಷವು ಕೇಂದ್ರದಲ್ಲಿ ಅಧಿಕಾರಕ್ಕೇರಿ ಒಂದು ತಿಂಗಳ ಅವಧಿಯಲ್ಲೇ ರೈಲು ಪ್ರಯಾಣ ದರ ಮತ್ತು ಸರಕು ಸಾಗಾಟ ದರವನ್ನು ಗಣನೀಯವಾಗಿ ಏರಿಸಿ ವಚನಭ್ರಷ್ಟವಾಗಿದೆ. ಕೇಂದ್ರದ ಈ ಕ್ರಮವನ್ನು ಉಡುಪಿ ಜಿಲ್ಲಾ ಕಾಂಗ್ರೆಸ್‌ ಖಂಡಿಸುತ್ತದೆ ಎಂದು ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಹೇಳಿದ್ದಾರೆ.
    ಹಿಂದಿನ ಯುಪಿಎ ಸರಕಾರ ರೈಲು, ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಗೆ ಮುಂದಾದಾಗ ನಿರಂತರ ವಿರೋಧಿಸುತ್ತಾ¤ ಬಂದಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ನಿತ್ಯೋಪಯೋಗಿ ಸಾಮಗ್ರಿಗಳ ಬೆಲೆ ಏರಿಕೆಯನ್ನು ಒಂದು ಚುನಾವಣಾ ವಿಷಯವನ್ನಾಗಿಸಿಕೊಂಡು ಮತದಾರರ ಬಳಿ ಹೋಗಿದೆ. ತಾನು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಸಂಚಾರ ದರ ಮತ್ತು ಸಾಮಗ್ರಿಗಳ ಬೆಲೆಗಳನ್ನು ತಗ್ಗಿಸುವ ಭರವಸೆ ನೀಡಿ ಮತ ಪಡೆದಿದೆ. ಆದರೆ ಇದೀಗ ಮತದಾರರನ್ನು ವಂಚಿಸಿದೆ ಎಂದು ತಿಳಿಸಿದ್ದಾರೆ.
     ರೈಲ್ವೇ ಬಜೆಟ್‌ ಮಂಡನೆಗೆ ಕೆಲವೇ ದಿನಗಳಿರುವಾಗ ಸರಕಾರ ಕೈಗೊಂಡ ಈ ನಿರ್ಧಾರ ಜನವಿರೋಧಿ ಮಾತ್ರವಲ್ಲ, ಸಂಸದೀಯ ವ್ಯವಸ್ಥೆಯಲ್ಲಿ ಅದಕ್ಕೆ ನಂಬಿಕೆ ಇಲ್ಲದಿರುವುದನ್ನು ಜಾಹೀರುಪಡಿಸಿದೆ. ಬಡ ಮತ್ತು ಮಧ್ಯಮ ವರ್ಗದ ಪಾಲಿಗೆ ರೈಲು ಯಾನ ದರ ಏರಿಕೆ ದೊಡ್ಡ ಹೊರೆಯಾಗಿ ಪರಿಣಮಿಸಲಿದೆ. ಸರಕು ಸಾಗಾಟ ದರ ಏರಿಕೆಯಿಂದ ನಿತ್ಯೋಪಯೋಗಿ ವಸ್ತುಗಳ ಬೆಲೆ ಗಗನಮುಖೀಯಾಗಲಿದೆ. ಇದರೊಂದಿಗೇ ಎಲ್‌ಪಿಜಿ ಸಿಲಿಂಡರ್‌ನ ದರವನ್ನು ಪ್ರತಿ ತಿಂಗಳು 10 ರೂಪಾಯಿಯಂತೆ ಹೆಚ್ಚಿಸುತ್ತ ಹೋಗುವ ಪ್ರಸ್ತಾವನೆ ಸಚಿವಾಲಯದ ಮುಂದಿದೆ ಎನ್ನಲಾಗಿದೆ. ಬಿಜೆಪಿಗೆ ಅಭೂತಪೂರ್ವ ಬೆಂಬಲ ನೀಡಿ ಅಧಿಧಿಕಾರಕ್ಕೆ ತಂದ ಮತದಾರರಿಗೆ ಮೋದಿ ಸರಕಾರವು ಮರ್ಮಾಘಾತವನ್ನೇ ನೀಡಿದೆ ಎಂದು ಗೋಪಾಲ ಪೂಜಾರಿ ಹೇಳಿದ್ದಾರೆ.
     ಕೇಂದ್ರ ಸರಕಾರದ ಇಂತಹ ಜನವಿರೋಧಿ ಕ್ರಮಗಳ ವಿರುದ್ಧ ಕಾಂಗ್ರೆಸ್‌ ಜಿಲ್ಲೆಯಲ್ಲಿ ಪ್ರಬಲ ಹೋರಾಟ ಸಂಘಟಿಸಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com