ಹಾಲು ಕೊಡುವ ಎಳೆ ಕರು !

ಕುಂದಾಪುರ: ಹಸುವಿನ ಕರು ಹುಟ್ಟಿದ 5 ದಿನದಲ್ಲೇ ಹಾಲು ನೀಡುತ್ತಿದ್ದು, ಇದು ಅಚ್ಚರಿಯಾದರೂ ನಿಜ. ತಾಲೂಕಿನ ಹಟ್ಟಿಕುದ್ರು ಗ್ರಾಮದ ಹೆರಿನಮನೆ ಮುತ್ತು ಪೂಜಾರ‌್ತಿ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಮುತ್ತು ಪೂಜಾರ್ತಿ ಸಾಕಿದ ಹಸು 'ಗೌರಿ' ಇತ್ತೀಚೆಗೆ ಕರು ಹಾಕಿದ್ದು, ಎಳೆಯ ಕರು ಸೌಮ್ಯ ಹಾಲು ನೀಡುವ ಮೂಲಕ ಊರಿನ ಜನರ ಕುತೂಹಲಕ್ಕೆ ಕಾರಣವಾಗಿದೆ. 

ಹುಟ್ಟುವಾಗ ಆರೋಗ್ಯಯುತವಾಗಿದ್ದ ಕರುವಿಗೆ ದೊಡ್ಡ ಕೆಚ್ಚಲು ಮೂಡಿತ್ತು. ಆದರೆ ಮನೆಯವರು ಈ ಬಗ್ಗೆ ತಲೆಕೆಡಿಸಿಕೊಂಡಿ ರಲಿಲ್ಲ. 5 ದಿನದ ಬಳಿಕ ನೋಡೋಣ ಎಂದು ಕೆಚ್ಚಲು ಹಿಂಡಿದಾಗ ಹಾಲು ಸುರಿದಿದೆ. ಅಚ್ಚರಿಗೊಳಗಾದ ಮನೆ ಯಜಮಾನಿ ಸತ್ಯ ಪರೀಕ್ಷೆಗೆ ಮುಂದಾದಾಗ ಒಂದೆ ಸವನೆ ಹಾಲು ಸುರಿಸುತ್ತಿತ್ತು. ಕರು ಹುಟ್ಟಿ ಇಂದಿಗೆ ( ಜೂ.1ಕ್ಕೆ) 14 ದಿನ ಕಳೆದಿದ್ದು, ಹಾಲು ನೀಡುವುದು ಮುಂದುವರಿದಿದೆ. 

5 ವರ್ಷದ ಗೌರಿಗೆ ಇದು 3ನೇ ಕರು. ಇನ್ನೆರಡು ಕರುಗಳು ಅನುಕ್ರಮವಾಗಿ 3 ಮತ್ತು 2 ಹರೆಯದವು. ಅದರಲ್ಲಿ ಶ್ಯಾಮಲಾ ಹೆಸರಿನ 3 ವರ್ಷದ ಹಸು ಗರ್ಭಿಣಿಯಾಗಿದ್ದು, ಈಗಾಗಲೇ ಹಾಲು ಸುರಿಸುತ್ತಿದೆ. ಆದರೆ ಮೊನ್ನೆ ತಾನೆ ಹುಟ್ಟಿದ ಕಾರು ತಾಯಿಗಿಂತ ಹೆಚ್ಚಿಗೆ ಹಾಲು ಸುರಿಸುತ್ತಿರುವುದು ಅಪರೂಪದ ವಿದ್ಯಮಾನವಾಗಿದ್ದು, ಊರ ಜನರ ಕುತೂಹಲಕ್ಕೆ ಕಾರಣವಾಗಿದೆ. 

ಪಶು ವೈದ್ಯರಿಂದ ತಪಾಸಣೆ: ಹಾಲು ನೀಡುತ್ತಿರುವ ಕರುವನ್ನು ಪಶುವೈದ್ಯರ ತಪಾಸಣೆಗೊಳಪಡಿಸಲಾಗಿದೆ. ಪರೀಕ್ಷೆ ನಡೆಸಿರುವ ಸ್ಥಳೀಯ ಪಶು ವೈದ್ಯರು ಇದು ಬಹಳ ಅಪರೂಪ ಎಂದು ಪರಿಗಣಿಸಿದ್ದಲ್ಲದೆ ಕರುವಿನ ಹಾಲನ್ನು ಹಿಂಡಿ ಹೆಚ್ಚಿನ ಮಾಹಿತಿ ಪಡೆಯಲು ಮಣಿಪಾಲ ಹಿರಿಯ ಪಶುವೈದ್ಯರಿಗೆ ಸ್ಯಾಂಪಲ್ ರವಾನಿಸಿದ್ದಾರೆ. ವರದಿ ಕೈಸೇರಿದಾಗ ಹೆಚ್ಚಿನ ಮಾಹಿತಿ ದೊರೆಯಲಿದೆ ಎಂದಿದ್ದಾರೆ. 

*ನನ್ನ 21 ವರ್ಷದ ವೈದ್ಯಕೀಯ ಸೇವೆಯಲ್ಲಿ ಇಂತಹ ವಿದ್ಯಮಾನ ಕಂಡಿಲ್ಲ. ವರ್ಷಗಳ ಹಿಂದೆ ಉಪ್ಪಿನಕುದ್ರುವಿನ ಶೇಷಿ ಮೊಗವೀರ‌್ತಿ ಎಂಬವರ 13 ತಿಂಗಳ ಪ್ರಾಯದ ಗರ್ಭ ಧರಿಸದ ಕರು ಹಾಲು ನೀಡಿತ್ತು. ಎರಡೂವರೆ ವರ್ಷ ಅದು ನಿರಂತರ ಹಾಲು ನೀಡಿತ್ತು. ಕೆಲವೊಮ್ಮೆ ಹಾರ್ಮೋನ್‌ಗಳ ವೈಪರೀತ್ಯದಿಂದಾಗಿ ಇಂತಹ ಘಟನೆಗಳು ಘಟಿಸುತ್ತವೆ. ಆದರೆ ಇದು ಬಹಳ ಅಪರೂಪ. ಮಿಶ್ರ ತಳಿಗೆ ಸೇರಿದ ಹಸುವಿಗೆ ಜನಿಸಿದ ಸೌಮ್ಯ ಕರುವಿನ ಅಧ್ಯಯನ ನಡೆಯಬೇಕಾಗಿದೆ - ಡಾ. ಬಾಬಣ್ಣ ಪೂಜಾರಿ ವಂಡ್ಸೆ ಪಶು ವೈದ್ಯಾಧಿಕಾರಿ

- ಜಾನ್‌ಡಿಸೋಜ, ವಿಜಯ ಕರ್ನಾಟಕ ಕೃಪೆ
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com