ಕೊಲ್ಲೂರು: ಕೊಲ್ಲೂರಿನಲ್ಲಿ ಶತಮಾನಗಳಿಂದ ಅನುಸರಿಸಲಾದ ಪರಂಪರೆ ಉಳಿಸುವ ನಿಟ್ಟಿನಲ್ಲಿ ಇತ್ತೀಚೆಗೆ ನಿರ್ಮಿಸಲಾದ ನಿತ್ಯಾನಂದ ಆಶ್ರಮದ ವಿಮಲಾನಂದ ಸ್ವಾಮೀಜಿ ಸಮಾಧಿ ತೆರವು ಮಾಡಬೇಕು ಎಂದು ಬುಧವಾರ ಜರುಗಿದ ವಿಶೇಷ ಗ್ರಾಮಸಭೆಯಲ್ಲಿ ಒಕ್ಕೊರಲ ನಿರ್ಣಯ ಕೈಗೊಳ್ಳಲಾಗಿದೆ. ಕೊಲ್ಲೂರು ನಾಗರಿಕ ಸಮಿತಿಯ ಮನವಿ ಮೇರಿಗೆ ಸಮಾಧಿ ವಿವಾದದ ಬಗ್ಗೆ ಚಿಂತನೆ ನಡೆಸಲು ಸಮಾವೇಷಗೊಂಡಿದ್ದ ವಿಶೇಷ ಗ್ರಾಮಸಭೆಯಲ್ಲಿ , ಜೂ.2ರಿಂದ ಈ ವಿಚಾರದಲ್ಲಿ ಜನಪರ ಹೋರಾಟ ನಡೆಯುತ್ತಿದ್ದರೂ ಕಣ್ಣು ಮುಚ್ಚಿ ಕುಳಿತ ಜಿಲ್ಲಾಡಳಿತದ ಬಗ್ಗೆ ಆಕ್ಷೇಪ ವ್ಯಕ್ತವಾಯಿತು. ತಕ್ಷಣ ಮಧ್ಯ ಪ್ರವೇಶಿಸಿ ವಿವಾದಕ್ಕೆ ತೆರೆ ಏಳೆಯಬೇಕೆಂದು ಗ್ರಾಮಸ್ಥರು ಆಗ್ರಹಿಸಿ, ಮನವಿಯನ್ನೂ ಸಲ್ಲಿಸಿದರು.
ಬೆಳಗ್ಗೆ 11ರ ಸುಮಾರಿಗೆ ಕೊಲ್ಲೂರು ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಆರಂಭವಾದ ವಿಶೇಷ ಗ್ರಾಮಸಭೆಯಲ್ಲಿ ಕಿಕ್ಕಿರಿದು ಸೇರಿದ್ದ ಗ್ರಾಮಸ್ಥರು, ಮಧ್ಯಾಹ್ನ 2 ಗಂಟೆಯ ತನಕ ಏಕಮುಖವಾಗಿ ಸಮಾಧಿ ತೆರವಿನ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಸಭೆಗೆ ಬಂದಿದ್ದ ಯಾರೊಬ್ಬರೂ ಸಮಾಧಿಯ ಪರವಾಗಿ ಮಾತನಾಡಲಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಂದೋಬಸ್ತನ್ನು ನಿಯೋಜಿಸಲಾಗಿತ್ತು. ಸಮಾಧಿ ನಿರ್ಮಿಸಿರುವುದನ್ನು ಒಕ್ಕೊರಳಲ್ಲಿ ಖಂಡಿಸಿದ ಗ್ರಾಮಸ್ಥರು ಉಳ್ಳವರಿಗೊಂದು ನ್ಯಾಯ, ಇಲ್ಲದವರಿಗೊಂದು ನ್ಯಾಯಬೇಡ ಎಂದು ಆಗ್ರಹಿಸಿದರಲ್ಲದೆ, ಚರ್ಚೆಗಳಲ್ಲಿ ಕೊಲ್ಲೂರಿನ ನಾಗರಿಕರ ಅನಿಸಿಕೆ ಬದಲು ಅರ್ಚಕರ ಪ್ರತಿಷ್ಠೆಯೇ ವೈಭವೀಕರಿಸಲಾಗುವ ಬಗ್ಗೆ ಕೂಡ ಆಕ್ಷೇಪ ವ್ಯಕ್ತವಾಯಿತು.
ಶತಮಾನಗಳ ಇತಿಹಾಸ ಇರುವ ಸ್ಥಳಾಚಾರದ ಬಗ್ಗೆ ದೇವಳದ ಆಡಳಿತ ಮಂಡಳಿ ಆರಂಭದಿಂದಲೂ ಸ್ಪಷ್ಟವಾಗಿ ಹೇಳಿದ್ದರೂ, ಆಡಳಿತ ಮಂಡಳಿ ಹಾಗೂ ಕಾರ್ಯ ನಿರ್ವಹಣಾಧಿಕಾರಿಯವರ ಮೇಲೆ ತಪ್ಪು ಹೊರಿಸುವ ಪ್ರಯತ್ನ ನಡೆದಿರುವುದನ್ನು ವಿರೋಧಿಸಿದ ದೇವಳ ವ್ಯವಸ್ಥಾಪನ ಮಂಡಳಿ ಅಧ್ಯಕ್ಷ ಕಷ್ಣಪ್ರಸಾದ್ ಅಡ್ಯಂತಾಯ, ವಿವಾದ ನಿರ್ಲಕ್ಷ್ಯ ಮಾಡಿದರೆ ಮುಂದೊಂದು ದಿನ ಅಪಾಯಕರ ಸನ್ನಿವೇಶ ಉಂಟಾದೀತು ಎಂದು ಎಚ್ಚರಿಸಿದರು. ಜೂ.27ರಂದು ವ್ಯವಸ್ಥಾಪನಾ ಮಂಡಳಿ ಸಭೆ ನಡೆಸಿ ದೇವಳದ ಸಂಪ್ರದಾಯ ಮೀರಿ ನಡೆದ ಪ್ರಧಾನ ತಂತ್ರಿಯ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.
0 comments:
Post a Comment