ಡೊನೇಷನ್ ವಸೂಲಿ ತಡೆಗೆ ಪ್ರಾಧಿಕಾರ ರಚನೆ ಆಗ್ರಹಿಸಿ ಎಸ್‌ಎಫ್‌ಐ ಪ್ರತಿಭಟನೆ

ಕುಂದಾಪುರ:  ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಕೆಲವು ಸರ್ಕಾರಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ನೀತಿ ನಿಯಮಗಳನ್ನು ಮೀರಿ ಡೊನೇಶನ್ ವಸೂಲಿಯಲ್ಲಿ ತೊಡಗಿವೆ. ಇದನ್ನು ತಡೆಯಲು ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರ ರಚಿಸಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್.ಎಫ್.ಐ.) ತಾಲೂಕು ಕಾರ್ಯದರ್ಶಿ ಶ್ರೀಕಾಂತ ಹೆಮ್ಮಾಡಿ ಆಗ್ರಹಿಸಿದ್ದಾರೆ.
ಕುಂದಾಪುರ ತಹಸೀಲ್ದಾರ್ ಕಚೇರಿ ಎದುರು ಎಸ್‌ಎಫ್‌ಐ ವತಿಯಿಂದ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರ ರಚಿಸಲು ಒತ್ತಾಯಿಸಿ ನಡೆದ ಧರಣಿಯಲ್ಲಿ ಅವರು ಮಾತನಾಡಿದರು.
ಪ್ರಾಧಿಕಾರ ರಚನೆ ಆಗ್ರಹ: 1983ರ ಕರ್ನಾಟಕ ಶಿಕ್ಷಣ ಕಾಯ್ದೆ ಮತ್ತು 1995ರ ಕರ್ನಾಟಕ ಶಿಕ್ಷಣ ಸಂಸ್ಥೆಗಳ ಕಾಯ್ದೆಗಳ ಪ್ರಕಾರ ಅನುದಾನಿತ ಶಿಕ್ಷಣ ಸಂಸ್ಥೆಗಳು ರು. 500 ಮತ್ತು ಅನುದಾನರಹಿತ ಶಿಕ್ಷಣ ಸಂಸ್ಥೆಗಳು ರು. 600ನ್ನು ಮಾತ್ರ ಅಭಿವೃದ್ಧಿ ಶುಲ್ಕ ಎಂದು ಸಂಗ್ರಹಿಸಲು ಅವಕಾಶವಿದೆ. ಆದರೆ ಈ ಮೊತ್ತವನ್ನು ಒತ್ತಾಯದ ಮೂಲಕ ಸಂಗ್ರಹಿಸುವಂತಿಲ್ಲ. ಆದರೆ ಕೆಲವು ಶಿಕ್ಷಣ ಸಂಸ್ಥೆಗಳು ಲಕ್ಷ ರು.ವರೆಗೂ ಡೊನೇಷನ್ ರೂಪದಲ್ಲಿ ವಸೂಲಿ ಮಾಡುತ್ತಿವೆ. ಇದನ್ನು ನಿಯಂತ್ರಿಸಬೇಕಾದರೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಡಿಡಿಪಿಐ, ಜಿ.ಪಂ. ಸಿಇಒ, ಡಿಡಿಪಿಐ, ಜಿಲ್ಲಾ ಮುಖ್ಯ ಎಂಜಿನಿಯರ್ ಸೇರಿದಂತೆ ಪೋಷಕರು, ಶಿಕ್ಷಣ ಆಸಕ್ತರು, ವಿದ್ಯಾರ್ಥಿ ಸಂಘಟನೆಯ ಪ್ರತಿಧಿಗಳು ಸದಸ್ಯರಾಗಿರುವ ಪ್ರಾಧಿಕಾರ ಕೂಡಲೇ ರಚಿಸಬೇಕೆಂದು ಅವರು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು.
ಧರಣಿ ನಂತರ ಕುಂದಾಪುರ ತಹಸೀಲ್ದಾರ್ ಮತ್ತು ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆ ನೇತೃತ್ವವನ್ನು ಡಿ.ವೈ.ಎಫ್.ಐ. ಮುಖಂಡರಾದ ಸುರೇಶ್ ಕಲ್ಲಾಗರ, ರಾಜೇಶ್ ವಡೇರಹೋಬಳಿ, ಸಿ.ಐ.ಟಿ.ಯು. ತಾಲೂಕು ಅಧ್ಯಕ್ಷ ಎಚ್. ನರಸಿಂಹ, ಎಸ್.ಎಫ್.ಐ. ತಾಲೂಕು ಅಧ್ಯಕ್ಷ ಗಣೇಶ್ ದಾಸ್, ನಾಯಕರಾದ ಅಕ್ಷಯ್, ಆಫ್ರಿನ್, ಅಕ್ಷತಾ, ಜಗನ್ನಾಥ, ರವಿ ವಿ.ಎಂ., ಪ್ರಭಾಕರ ನೇರಳಕಟ್ಟೆ, ರಾಜ ಬಿ.ಟಿ.ಆರ್., ಸಂತೋಷ್ ಹೆಮ್ಮಾಡಿ ಮುಂತಾದವರು ವಹಿಸಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com