ಉಡುಪಿ: ಅದಮಾರು ಮಠದ ಕಿರಿಯ ಸ್ವಾಮೀಜಿಯಾಗಿ ಪಟ್ಟಾಭಿಷೇಕಗೊಂಡಿರುವ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಭಾನುವಾರ ಉಡುಪಿ ಪುರಪ್ರವೇಶ ಮಾಡಿ, ಶ್ರೀ ಕೃಷ್ಣಮಠ, ಅಷ್ಟಮಠಗಳಿಗೆ ಭೇಟಿ ನೀಡಿದರು.
ಪಲಿಮಾರು ಮಠದ ಬಳಿ ರಥಬೀದಿಗೆ ಬಂದಿಳಿದ ಸ್ವಾಮೀಜಿಯವರನ್ನು ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಬರಮಾಡಿಕೊಂಡರು. ಅಲ್ಲಿಂದ ಆನೆ, ಬಿರುದಾವಲಿಗಳೊಂದಿಗೆ, ಕೊಂಬು ವಾಲಗದೊಂದಿಗೆ, ಸ್ಯಾಕ್ಶೊಫೋನ್, ಚೆಂಡೆ ವಾದನದೊಂದಿಗೆ ಕನಕನ ಕಿಂಡಿ ಬಳಿಗೆ ಕರೆತರಲಾಯಿತು. ಶ್ರೀ ಈಶಪ್ರಿಯರು ಕನಕನ ಕಿಂಡಿ ಮೂಲಕ ಶ್ರೀಕೃಷ್ಣನ ದರ್ಶನ ಮಾಡಿದರು. ಬಳಿಕ ಅನಂತೇಶ್ವರ, ಚಂದ್ರಮೌಳೀಶ್ವರ ದೇವರ ದರ್ಶನ ಪಡೆದರು.
ಶ್ರೀಕೃಷ್ಣಮಠಕ್ಕೆ ಆಗಮಿಸಿದಾಗ ಪರ್ಯಾಯ ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಬರಮಾಡಿಕೊಂಡರು. ಬಳಿಕ ಇಬ್ಬರು ಶ್ರೀಗಳು ಒಟ್ಟಿಗೆ ಕೃಷ್ಣನ ದರ್ಶನ ಮಾಡಿದರು. ಚಂದ್ರಶಾಲೆಯಲ್ಲಿ ಪರ್ಯಾಯ ಶ್ರೀಗಳಿಂದ ಈಶಪ್ರಿಯರಿಗೆ ಗೌರವಾರ್ಪಣೆ ನಡೆಯಿತು.
ಪರ್ಯಾಯ ಕಾಣಿಯೂರು ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಮಾತನಾಡಿ, ಶ್ರೀಕೃಷ್ಣ ಜಗತ್ತಿಗೆ ಈಶ. ಆ ಈಶನಿಗೆ ಪ್ರಿಯರಾದವರು ಇವರು. ನರಸಿಂಹ ತೀರ್ಥರ ಅದಮಾರು ಮಠದ ಪರಂಪರೆಯಲ್ಲಿ ಕಳೆದ ಶತಮಾನದಲ್ಲಿದ್ದ ವಿಬುಧಪ್ರಿಯ ತೀರ್ಥ ಶ್ರೀಪಾದರು ಶ್ರೇಷ್ಠ ಯತಿಗಳಾಗಿ ಹೆಸರು ಮಾಡಿದವರು. ವಿಬುಧೇಶ ತೀರ್ಥ ಶ್ರೀಪಾದರು ಆಧ್ಯಾತ್ಮದ ಜತೆಗೆ ವಿದ್ಯಾದಾನ ಮಾಡಿದವರು. ಆನಂತರ ವಿಶ್ವಪ್ರಿಯ ತೀರ್ಥ ಶ್ರೀಪಾದರು ಆಧ್ಯಾತ್ಮ, ಶಿಕ್ಷಣದ ಜತೆಗೆ ಪ್ರವಚನಕಾರರಾಗಿ ಪ್ರಸಿದ್ಧರಾದವರು. ಆ ಪರಂಪರೆಯಲ್ಲಿ ಈಶಪ್ರಿಯರು ಬಂದಿದ್ದಾರೆ. ಮಾತು ಬಹಳ ಕಡಿಮೆ, ಅಧ್ಯಯನ ಜಾಸ್ತಿ ಇರುವ ಇವರಿಂದ ಆಧ್ಯಾತ್ಮ ಇನ್ನಷ್ಟು ಬೆಳಗಲಿದೆ ಎಂದು ಹೇಳಿದರು. ಮುಖ್ಯಪ್ರಾಣ ದೇವರು, ಸುಬ್ರಹ್ಮಣ್ಯ ದೇವರು, ವೃಂದಾವನ ದರ್ಶಿಸಿದ ಸ್ವಾಮೀಜಿ ಬಳಿಕ ಅಲ್ಲಿಂದ ವಿವಿಧ ಮಠಗಳಿಗೆ ತೆರಳಿ, ಕೊನೆಗೆ ಅದಮಾರು ಮಠ ಪ್ರವೇಶ ಮಾಡಿದರು.
0 comments:
Post a Comment