ಜಿ.ಶಂಕರ್‌ ಫ್ಯಾಮಿಲಿ ಟ್ರಸ್ಟ್‌: ವಿದ್ಯಾರ್ಥಿವೇತನ, ಯಕ್ಷ ಕಲಾವಿದರಿಗೆ ನೆರವು

ಉಡುಪಿ: ಜಿ.ಶಂಕರ್‌ ಫ್ಯಾಮಿಲಿ ಟ್ರಸ್ಟ್‌ನಿಂದ ವರ್ಷಂಪ್ರತಿಯಂತೆ 12ನೆಯ ವರ್ಷದ ವಿದ್ಯಾರ್ಥಿ ವೇತನ ಮತ್ತು ಅವಿಭಜಿತ ದ.ಕ. ಜಿಲ್ಲೆಯ ಅಶಕ್ತ ಯಕ್ಷಗಾನ ಕಲಾವಿದರಿಗೆ ಸಹಾಯಧನವನ್ನು ಜು. 20ರ ಬೆಳಗ್ಗೆ 10 ಗಂಟೆಗೆ ವಿತರಿಸಲಾಗುವುದು.

ಸಮಾರಂಭವನ್ನು ಟ್ರಸ್ಟ್‌ ಪ್ರವರ್ತಕ ಡಾ|ಜಿ.ಶಂಕರ್‌ ಉದ್ಘಾಟಿಸಲಿದ್ದು ಜಿಲ್ಲಾ ಮೊಗವೀರ ಯುವ ಸಂಘಟನೆ ಅಧ್ಯಕ್ಷ ಸದಾನಂದ ಬಳ್ಕೂರು ಅಧ್ಯಕ್ಷತೆ ವಹಿಸುವರು. ಸಂಘಟನೆ ನಿಕಟಪೂರ್ವ ಅಧ್ಯಕ್ಷ ಜಯ ಸಿ. ಕೋಟ್ಯಾನ್‌ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

2013-14ನೆಯ ಸಾಲಿನಲ್ಲಿ ಟ್ರಸ್ಟ್‌ ಸುಮಾರು 3,000 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಿದ್ದು ಈ ವರ್ಷವೂ 3,000 ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಗುವುದು.

ಅಶಕ್ತ ಯಕ್ಷಗಾನ ಕಲಾವಿದರಾದ ಬೆದ್ರಾಡಿ ಶಂಭು ಮೊಗವೀರ, ದಿನಕರ ಕುಂದರ್‌ ನಡೂರು, ವಿಷ್ಣು ಹೆಗ್ಡೆ ಹಿರೇಮಕ್ಕಿ, ಅರ್ಗೋಡು ದೇವದಾಸ ಶೆಣೈ, ಮಂಜುನಾಥ ಪ್ರಭು, ರಾಮನಾಥ ಪವಾರ್‌, ಜೆಪ್ಪು ದಯಾನಂದ ಶೆಟ್ಟಿ, ನಗ್ರಿ ಮಹಾಬಲ ರೈ, ರಾಮಕೃಷ್ಣ ಶೆಟ್ಟಿಗಾರ್‌, ಗಣೇಶ ಮೊಗವೀರ ನೆಲ್ಲಿಕಟ್ಟೆ ಅವರಿಗೆ ತಲಾ 10,000 ರೂ. ಸಹಾಯಧನ ನೀಡಿ ಗೌರವಿಸಲಾಗುವುದು.

2013-14ನೆಯ ಸಾಲಿನಲ್ಲಿ ಜಿಲ್ಲೆಯಲ್ಲಿ ಎಸೆಸೆಲ್ಸಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತ್ಯಧಿಕ ಅಂಕ ಗಳಿಸಿದ ಸಹನಾ ಕಾಮತ್‌, ಆಂಗ್ಲ ಮಾಧ್ಯಮದಲ್ಲಿ ಅತ್ಯಧಿಕ ಅಂಕ ಗಳಿಸಿದ ಭಾರ್ಗವಿ ಡಿ., ದ್ವಿತೀಯ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಅಕ್ಷತಾ ನಾಯಕ್‌ (ವಿಜ್ಞಾನ), ದಿವ್ಯ ಪ್ರಭು (ವಾಣಿಜ್ಯ), ದೀಪ್ತಿ (ಕಲಾ) ಅವರನ್ನು ಸಮ್ಮಾನಿಸಲಾಗುವುದು.

ಉಡುಪಿ ಆದರ್ಶ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ|ಜಿ.ಎಸ್‌.ಚಂದ್ರಶೇಖರ್‌, ಕುಂದಾಪುರ ಸರಕಾರಿ ಆಸ್ಪತ್ರೆಯ ಸ್ತ್ರೀರೋಗ ತಜ್ಞ ಡಾ|ಚಂದ್ರ ಮರಕಾಲ, ರೋಟರಿ ಹಂಗಾರಕಟ್ಟೆ ಸಾಸ್ತಾನದ ಅಧ್ಯಕ್ಷ ಆನಂದ ಎಂ. ಅವರನ್ನು ಗೌರವಿಸಲಾಗುವುದು.

ಟ್ರಸ್ಟ್‌ ಆರೋಗ್ಯ, ಶಿಕ್ಷಣ, ರಕ್ತ ಸಂಗ್ರಹ ಇತ್ಯಾದಿ ಕ್ಷೇತ್ರಗಳಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದೆ. ಮುಂದಿನ ದಿನಗಳಲ್ಲಿಯೂ ಟ್ರಸ್ಟ್‌ ವಿಶೇಷ ಕಾರ್ಯಕ್ರಮಗಳನ್ನು ಮೊಗವೀರ ಯುವ ಸಂಘಟನೆ ಸಹಯೋಗದಲ್ಲಿ ಹಮ್ಮಿಕೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com