ರಂಜಾನ್‌ ಹಬ್ಬದ ಪೂರ್ವಭಾವಿಯಾಗಿ ಶಾಂತಿ ಸಭೆ

ಕುಂದಾಪುರ: ಮುಂಬರುವ ರಂಜಾನ್‌ ಹಬ್ಬದ ಸಂದರ್ಭ ಗಂಗೊಳ್ಳಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಜನರು ಪೊಲೀಸ್‌ ಇಲಾಖೆಯೊಂದಿಗೆ ಸಹಕರಿಸಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಶಾಂತಿ ಸೌಹಾರ್ದತೆಯಿಂದ ಜೀವನ ನಡೆಸುವಂತಾಗಬೇಕು. ಈ ದಿಸೆಯಲ್ಲಿ ಇಲಾಖೆಯಿಂದ ಕೈಗೊಳ್ಳಬೇಕಾದ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಇಲಾಖೆ ಎಲ್ಲಾ ರೀತಿಯಿಂದಲೂ ಸಹಕಾರ ನೀಡಲಿದೆ ಎಂದು ಗಂಗೊಳ್ಳಿ ಪೊಲೀಸ್‌ ಠಾಣಾ ಉಪನಿರೀಕ್ಷಕ ಗೋವರ್ಧನ ಎಂ. ಹೇಳಿದರು.

ಅವರು  ಸಂಜೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ರಂಜಾನ್‌ ಹಬ್ಬದ ಪೂರ್ವಭಾವಿಯಾಗಿ ನಡೆದ ಶಾಂತಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಪ್ರತಿವರ್ಷ ರಂಜಾನ್‌, ಈದ್‌ ಮಿಲಾದ್‌ ಮೊದಲಾದ ಹಬ್ಬಗಳ ಸಂದರ್ಭ ಗಂಗೊಳ್ಳಿಯ ಕೆಲವು ಕಡೆಗಳಲ್ಲಿ ಪೊಲೀಸ್‌ ತಪಾಸಣಾ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದ್ದು ಈ ವರ್ಷ ಯಾವುದೇ ಪೊಲೀಸ್‌ ತಪಾಸಣಾ ಕೇಂದ್ರಗಳನ್ನು ತೆರೆಯದಿರುವುದರ ಬಗ್ಗೆ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು. ಉದ್ದೇಶಪೂರ್ವಕವಾಗಿ ಪೊಲೀಸ್‌ ತಪಾಸಣೆ ಕೇಂದ್ರಗಳನ್ನು ನಿರ್ಮಿಸಿಲ್ಲ ಎಂಬ ಭಾವನೆ ಜನರಲ್ಲಿ ಉಂಟಾಗಿದ್ದು, ಈ ವಿಚಾರದ ಬಗ್ಗೆ ಇಲಾಖೆ ಗಮನ ಹರಿಸಿಬೇಕಿದೆ. ಗಂಗೊಳ್ಳಿಯಲ್ಲಿ ಕೋಮು ಸೌಹಾರ್ದತೆ ಕದಡಲು ಅಕ್ರಮ ಗೋಹತ್ಯೆ, ಗೋ ಸಾಗಾಟ ಮುಖ್ಯ ಕಾರಣವಾಗಿದ್ದು, ಇದನ್ನು ತಡೆಗಟ್ಟಲು ಇಲಾಖೆ ಶ್ರಮಿಸಬೇಕು ಎಂದು ಸಾರ್ವಜನಿಕರ ಪರವಾಗಿ ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೆ„, ರವೀಂದ್ರ ಪಟೇಲ್‌, ರಾಘವೇಂದ್ರ ಗಾಣಿಗ ಮೊದಲಾದವರು ಅಭಿಪ್ರಾಯ ವ್ಯಕ್ತಪಡಿಸಿದರು.

ಗಂಗೊಳ್ಳಿ ಗ್ರಾಪಂ ಸದಸ್ಯ ಯೂನಿಸ್‌ ಸಾಹೇಬ್‌, ಮಾಜಿ ಸದಸ್ಯ ದುರ್ಗರಾಜ್‌ ಪೂಜಾರಿ, ಪತ್ರಕರ್ತರಾದ ಬಿ.ರಾಘವೇಂದ್ರ ಪೈ, ಇಬ್ರಾಹಿಂ, ಮರವಂತೆ ಗ್ರಾಪಂ ಸದಸ್ಯ ಮನ್ಸೂರ್‌ ಇಬ್ರಾಹಿಂ, ಹಮೀದ್‌ ಸಾಹೇಬ್‌, ಮುನಾಫ್‌ ಹಾಗೂ ವಿವಿಧ ಧರ್ಮಗಳ ಪ್ರಮುಖರು, ಪೊಲೀಸ್‌ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com