ಬೈಂದೂರು: ಯಡ್ತರೆ ಗ್ರಾಮದ ಆಲಂದೂರು ಕೋಣನಮಕ್ಕಿ ನಿವಾಸಿ ಶಂಕರ ಕೊಠಾರಿಯವರ ಪುತ್ರಿ ರತ್ನ ಕೊಠಾರಿ (17) ಬುಧವಾರ ಬೆಳಗ್ಗೆ ಕಾಲೇಜಿಗೆ ಹೋದವಳು, ಸಂಜೆ ಮನೆಗೆ ಬಾರದೆ ನಾಪತ್ತೆಯಾಗಿದ್ದಾಳೆ. ಶಿರೂರು ಪಿಯು ಕಾಲೇಜಿನ ವಿದ್ಯಾರ್ಥಿನಿ ರತ್ನ ಕೊಠಾರಿಯ ಸುಳಿವು 3 ದಿನ ಕಳೆದರೂ ಸಿಕ್ಕಿಲ್ಲ. ಹುಡುಗಿ ಮನೆಗೆ ತೆರಳುವಾಗ ಮರದ ಕಾಲು ಸಂಕದ ಮೂಲಕ ನದಿ ದಾಟಬೇಕಾಗಿದ್ದು, ಆ ಸಂದರ್ಭದಲ್ಲಿ ಕಾಲು ಜಾರಿ ನದಿಗೆ ಬಿದ್ದಿರಬಹುದೆಂದು ಶಂಕಿಸಿ ಗುರುವಾರ ಬೆಳಗಿನಿಂದಲೇ ನದಿಯಲ್ಲಿ ಮುಳುಗಿ ಹುಡುಕಾಟ ನಡೆಸಲಾಗಿದೆ. ಅಲ್ಲದೇ ಸಾವಂತ ಗುಡ್ಡೆಯ ಅರಣ್ಯ ಪ್ರದೇಶದ ಎಲ್ಲಾ ಭಾಗದಲ್ಲೂ ಸ್ಥಳೀಯರು ಗುರುವಾರ ಸಂಜೆಯವೆಗೂ ಹುಡುಕಾಟ ನಡೆಸಿದರೂ ಹುಡುಗಿಯ ಸುಳಿವು ಮಾತ್ರ ಪತ್ತೆಯಾಗಿಲ್ಲ. ಶುಕ್ರವಾರ ಅಗ್ನಿಶಾಮಕದಳ ಆಗಮಿಸಿ ನದಿಯಲ್ಲಿ ಮತ್ತು ಸ್ಥಳೀಯರು ಅರಣ್ಯ ಪ್ರದೇಶದಲ್ಲಿ ಹುಡುಕಾಡಿದರೂ ಪ್ರಯೋಜನವಾಗಲಿಲ್ಲ.
ಬುಧವಾರ ಬೆಳಗ್ಗೆ ಎಂದಿನಂತೆ ಕಾಲೇಜಿಗೆ ಹೋಗಿದ್ದಳು. ಮಧ್ಯಾಹ್ನ 3.30 ರ ಸುಮಾರಿಗೆ ಸ್ನೇಹಿತರೊಂದಿಗೆ ಮನೆಗೆ ತೆರಳಿದ್ದು, ಸ್ನೇಹಿತರನ್ನು ಬೀಳ್ಕೊಟ್ಟ ಬಳಿಕ ಅರಣ್ಯ ಪ್ರದೇಶದಲ್ಲಿ ಒಬ್ಬಳೆ ಮನೆಗೆ ತೆರಳಿದ್ದಳು ಎನ್ನಲಾಗಿದೆ. ಆದರೆ ಸಂಜೆಯಾದರೂ ಮನೆಗೆ ಬಾರದನ್ನು ಗಮನಿಸಿದ ಆಕೆಯ ಪಾಲಕರು ಗಾಬರಿಗೊಂಡು ಹುಡುಕಾಟ ಆರಂಭಿಸಿ, ಬಳಿಕ ಬೈಂದೂರು ಠಾಣೆಗೆ ದೂರು ನೀಡಿದ್ದರು. ವಿದ್ಯಾರ್ಥಿನಿ ಅರಣ್ಯ ಪ್ರದೇಶದಲ್ಲಿ ಮನೆಗೆ ಹೋಗಬೇಕಾಗಿದ್ದು, ಅಲ್ಲಿಯೇ ಆಕೆಯನ್ನು ಅಪಹರಿಸಲಾಗಿದೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸುತ್ತಾರೆ.
ಈ ನಡುವೆ ಜಿಲ್ಲಾ ಕೊಠಾರಿ ಸಂಘದ ಪದಾಧಿಕಾರಿಗಳು ವಿದ್ಯಾರ್ಥಿನಿ ನಾಪತ್ತೆ ಪ್ರಕರಣವನ್ನು ಪೋಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ. ಡಿವೈಎಸ್ಪಿ ಸಿ.ಬಿ. ಪಾಟೀಲ್ ನೇತತ್ವದ ಪೋಲೀಸರ ಅಧಿಕಾರಿಗಳ ತಂಡ ಘಟನಾ ಸ್ಥಳದಲ್ಲಿ ಬೀಡುಬಿಟ್ಟಿದೆ.
0 comments:
Post a Comment