ಕೆಎಸ್‌ಆರ್‌ಟಿಸಿ ಪ್ರಯಾಣೋತ್ಸವ: ರಿಯಾಯಿತಿ ದರ ಪ್ರಕಟ

ಮಂಗಳೂರು: ಪ್ರಯಾಣಿಕರನ್ನು ಆಕರ್ಷಿಸಲು ಕೆಎಸ್‌ಆರ್‌ಟಿಸಿ 'ಪ್ರಯಾಣೋತ್ಸವ' ಯೋಜನೆಯನ್ನು ಪರಿಚಯಿಸುತ್ತಿದೆ. ಆಟಿ ವಿಶೇಷ ಕೊಡುಗೆಯಾಗಿ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ಸೇವೆಗಳಲ್ಲಿ ಮಂಗಳವಾರ, ಬುಧವಾರ ಹಾಗೂ ಗುರುವಾರಗಳಂದು ಪ್ರಯಾಣಿಸಲು ಮುಂಗಡ ಬುಕ್ಕಿಂಗ್‌ ಮಾಡುವ ಪ್ರಯಾಣಿಕರಿಗೆ ಮಾತ್ರ ಪ್ರಯಾಣ ದರದಲ್ಲಿ ಶೇ. 10ರಷ್ಟು ರಿಯಾಯಿತಿಯನ್ನು ನೀಡಲಾಗುತ್ತದೆ. ಇದು ಜು. 14ರಿಂದ ಸೆ. 18ರ ವರೆಗೆ ಜಾರಿಯಲ್ಲಿರುತ್ತದೆ (ಈ ರಿಯಾಯಿತಿಯು ಆ. 14, 27 ಮತ್ತು 28ರಂದು ಅನ್ವಯವಾಗುವುದಿಲ್ಲ).


ಆನ್‌ಲೈನ್‌ ಮುಖಾಂತರ ಇ-ಟಿಕೆಟ್‌/ಎಂ-ಟಿಕೆಟ್‌ ಮುಂಗಡ ಬುಕ್ಕಿಂಗ್‌ ಮಾಡುವ ಪ್ರಯಾಣಿಕರಿಗೆ 4ನೇ ಬಾರಿ ಪ್ರಯಾಣದಲ್ಲಿ ನೇರ ಶೇ. 30ರಷ್ಟು ರಿಯಾಯಿತಿ ಪಡೆಯಬಹುದಾಗಿದೆ. ಎಲ್ಲ ಟಿಕೆಟ್‌ಗಳನ್ನು ಇ-ಬುಕಿಂಗ್‌ ಅಥವಾ ಎಂ-ಬುಕಿಂಗ್‌ ಮೂಲಕವೇ ಪಡೆದಿರಬೇಕು. ಇ-ಟಿಕೆಟಿನ ನೋಂದಣಿಕೃತ ಬಳಕೆದಾರರ ಐಡಿ ಬಳಸಿ ನಾಲ್ಕು ಟಿಕೆಟ್‌ಗಳನ್ನು ಕಾದಿರಿಸುವ ಪ್ರಯಾಣಿಕರಿಗೆ ಈ ಕೊಡುಗೆ ಲಭ್ಯವಾಗುತ್ತದೆ. ಬುಕಿಂಗ್‌ ಮತ್ತು ಪ್ರಯಾಣದ ದಿನಾಂಕಗಳು ಜು. 14ರಿಂದ ಸೆ. 18ರೊಳಗಿರಬೇಕು.

ಈ ರಿಯಾಯಿತಿಯು ನಾಲ್ಕನೇ ಟಿಕೆಟ್‌ನಲ್ಲಿ ಕಾದಿರಿಸುವ ಒಂದು ಆಸನಕ್ಕೆ ಮಾತ್ರ ಅನ್ವಯವಾಗುತ್ತದೆ ಹಾಗೂ ಈ ಹಿಂದೇ ಕಾಯ್ದಿರಿಸಿರುವ ಯಾವುದೇ ಟಿಕೇಟುಗಳನ್ನು ರದ್ದು ಪಡಿಸಿರಬಾರದು. ಈ ರಿಯಾಯಿತಿಯು ಎಲ್ಲಾ ನಾಲ್ಕು ಟಿಕೇಟುಗಳು ಪ್ರಯಾಣಕ್ಕೆ ಅರ್ಹವಾಗಿದ್ದಲ್ಲಿ ಮಾತ್ರ ದೊರಕುವುದು. ಜತೆಗೆ ರಿಯಾಯಿತಿಯು ಮುಂಗಡ ಬುಕಿಂಗ್‌ ವ್ಯವಸ್ಥೆ ಇರುವ ಕರಾರಸಾ ನಿಗಮದ ಸಾರಿಗೆಗಳಿಗೆ ಮಾತ್ರ ಅನ್ವಯವಾಗುತ್ತದೆ.

ಕರಾರಸಾ ನಿಗಮದ ಇತರೆ ಯಾವುದೇ ರಿಯಾಯಿತಿ ಜತೆಗೆ ಈ ಕೊಡುಗೆಯನ್ನು ಒಟ್ಟಿಗೆ ಪಡೆಯಲು ಹಾಗೂ ಇತರರಿಗೆ ವರ್ಗಾಯಿಸಲು ಅವಕಾಶವಿರುವುದಿಲ್ಲ. ಒಂದು ಬಾರಿಗೆ ಒಂದು ರಿಯಾಯಿತಿಯನ್ನು ಮಾತ್ರ ನೀಡಲು ಅವಕಾಶವಿರುತ್ತದೆ. ನಾಲ್ಕನೇ ಟಿಕೆಟ್‌ ಬುಕಿಂಗ್‌ ಮಾಡಿದ ಅನಂತರ ಯಾವುದೇ ಟಿಕೆಟನ್ನು ರದ್ದುಗೊಳಿಸಿದಲ್ಲಿ ಈ ರಿಯಾಯಿತಿಯನ್ನು ವಾಪಸ್‌ ಪಡೆಯಲಾಗುವುದು. ಈ ರಿಯಾಯಿತಿ ಪಡೆಯಲು ಬಳಕೆದಾರರು ನಾಲ್ಕನೇ ಬಾರಿ ಬುಕ್‌ ಮಾಡುವಾಗ ಪ್ರಯಾಣಿಕ ವರ್ಗದಲ್ಲಿ 'ಲಾಯಲ್ಟಿ ಡಿಸ್ಕೌಂಟ್‌' ಎಂಬುದನ್ನು ಆಯ್ಕೆ ಮಾಡಬೇಕು ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com