ರತ್ನ ಕೊಠಾರಿ ಪ್ರಕರಣ: ಮಾಧ್ಯಮಗಳ ಅವಹೇಳನಕ್ಕೆ ಖಂಡನೆ

ಕುಂದಾಪುರ: ಇತ್ತೀಚೆಗೆ ಕುಂದಾಪುರ ತಾಲೂಕಿನ ಶಿರೂರಿನಲ್ಲಿ ನಡೆದ ರತ್ನ ಕೊಠಾರಿ ಅಸಹಜ ಸಾವಿನ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಇನ್ನಿತರ ವೇದಿಕೆಗಳಲ್ಲಿ ಸ್ಥಳೀಯ ಮತ್ತು ರಾಜ್ಯ ಮಟ್ಟದ ಮಾಧ್ಯಮಗಳ ಕುರಿತಂತೆ ಅತ್ಯಂತ ಕೀಳುಮಟ್ಟದ ಮತ್ತು ಬೇಜವಾಬ್ದಾರಿಯುತ ಹೇಳಿಕೆಗಳು, ಮಾತುಗಳು ಕೇಳಿ ಬರುತ್ತಿರುವುದು ಸಂಘದ ಗಮನಕ್ಕೆ ಬಂದಿರುತ್ತದೆ. ರತ್ನ ಕೊಠಾರಿ ಸಾವಿನ ಪ್ರಕರಣವನ್ನು ರಾಜ್ಯದಲ್ಲಿ ನಡೆದ ಬೇರೆಬೇರೆ ಅತ್ಯಾಚಾರ ಪ್ರಕರಣಗಳಿಗೆ ಹೋಲಿಸುತ್ತಿರುವುದು, ಬೆಂಗಳೂರಿನಲ್ಲಿ ಇಂತಹ ಪ್ರಕರಣ ನಡೆದರೆ ಮಾತ್ರ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತದೆ ವಿನಃ ರತ್ನ ಕೊಠಾರಿ ಪ್ರಕರಣಕ್ಕೆ ಮಾಧ್ಯಮಗಳು ಪ್ರಚಾರವನ್ನೇ ಕೊಟ್ಟಿಲ್ಲ ಎಂದು ಹೇಳುತ್ತಿರುವುದು, ಮಾಧ್ಯಮಗಳಿಗೆ ರತ್ನ ಕೊಠಾರಿ ಸಾವಿನ ಬಗ್ಗೆ ಕಳಕಳಿಯೇ ಇಲ್ಲ ಎಂದೆಲ್ಲ ಪೂರ್ವಗ್ರಹ ಪೀಡಿತರಾಗಿ ಅಸಂಬದ್ದವಾಗಿ ಮಾತನಾಡುತ್ತಿರುವುದು ಅತ್ಯಂತ ಕೆಳಮಟ್ಟದ ವರ್ತನೆಯಾಗಿರುತ್ತದೆ. 
        ರತ್ನ ಕೊಠಾರಿ ಪ್ರಕರಣ ರಾಜ್ಯದ ಎಲ್ಲ ಟಿವಿ ಮಾಧ್ಯಮಗಳು ಸೇರಿದಂತೆ ಎಲ್ಲ ಕಡೆ ಚರ್ಚೆಯಾಗುತ್ತಿರುವುದು, ವಿಧಾನಸೌಧದಲ್ಲೂ ಆ ಕುರಿತು ಚರ್ಚೆಗಳಾಗಿ ಪರಿಹಾರ ಘೋಷಣೆಯಾಗಿದ್ದು ಎಲ್ಲದರ ಹಿಂದೆಯೂ ಸ್ಥಳೀಯ ಪತ್ರಕರ್ತರ ಅಪಾರ ಶ್ರಮವಿದೆ. ಪತ್ರಕರ್ತರು ರತ್ನ ಕೊಠಾರಿಯ ಸಾವಿನ ಪ್ರಕರಣಕ್ಕೆ ಆದ್ಯತೆ ನೀಡಿ ಸುದ್ದಿಗಳನ್ನು ಪ್ರಕಟಿಸಿದ್ದಾರೆ, ಹಲವಾರು ಪತ್ರಕರ್ತರು ಮಾಡಿದ ಸ್ವತಂತ್ರ ತನಿಖಾ ವರದಿಗಳು ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಬೆಂಗಳೂರಿನಲ್ಲಿರುವ ಟಿವಿ ಚಾನೆಲ್‍ಗಳು ಈ ಕುರಿತು ಗಂಟೆಗಟ್ಟಲೆ ಕಾರ್ಯಕ್ರಮಗಳನ್ನು ಬಿತ್ತರಿಸಿವೆ. 
        ರತ್ನ ಕೊಠಾರಿ ಪ್ರಕರಣ ಅತ್ಯಂತ ಗಂಭೀರ ಮತ್ತು ಸೂಕ್ಷ್ಮ ಪ್ರಕರಣವಾಗಿದ್ದು ಇಲಾಖೆಗಳ ತನಿಖೆ ಚಾಲ್ತಿಯಲ್ಲಿದೆ. ಇಂತಹ ಸಂದರ್ಭದಲ್ಲಿ ದಿನಾಲೂ ಕಥೆ ಕಟ್ಟಿ ಕಪೆÇೀಲ ಕಲ್ಪಿತ ಸುದ್ದಿಗಳನ್ನು, ಗಾಳಿ ಸುದ್ದಿಗಳನ್ನು ಹರಡುವುದನ್ನೇ ಕಾಯಕ ಮಾಡಿಕೊಂಡಿರುವ ಪೂರ್ವಗ್ರಹ ಪೀಡಿತ ವ್ಯಕ್ತಿಗಳು, ಸಾಮಾಜಿಕ ಜಾಲತಾಣದಲ್ಲಿರುವ ಕೆಲವು ಅಸ್ವಸ್ಥ ಮನಸ್ಸುಗಳು, ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿರುವ ಕೆಲ ಸ್ಥಾಪಿತ ಹಿತಾಸಕ್ತಿಗಳು ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿರುವ ಮಾಧ್ಯಮದ ಮಂದಿಯ ವಿರುದ್ಧ ಕೀಳಾಗಿ ಮಾತನಾಡುವುದನ್ನು ನಮ್ಮ ಸಂಘವು ಖಂಡಿಸುತ್ತದೆ ಎಂದು ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಮತ್ತು ಪ್ರಧಾನ ಕಾರ್ಯದರ್ಶಿ ನಾಗರಾಜ ರಾಯಪ್ಪನ ಮಠ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com