ಸೆ.16,17ಕ್ಕೆ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಉಡುಪಿ: ಈ ಬಾರಿ ಉಡುಪಿ ಶ್ರೀಕೃಷ್ಣಮಠದಲ್ಲಿ ಕೃಷ್ಣಜನ್ಮಾಷ್ಟಮಿ ಆಚರಣೆ ಸೆ.16,17ರಂದು ಆಚರಿಸಲಾಗುತ್ತಿದೆ. ಆದರೆ ಆಗಸ್ಟ್ 17ರಂದು ಶ್ರಾವಣ ಮಾಸದಲ್ಲಿ ಕೃಷ್ಣಜನ್ಮಾಷ್ಟಮಿ ಆಚರಿಸಲಿಚ್ಛಿಸುವ ಭಕ್ತಾದಿಗಳಿಗೆ ಶ್ರೀಕೃಷ್ಣ ಮಠದಲ್ಲಿ ಅರ್ಘ್ಯ ಪ್ರದಾನ ಮಾಡಲು ಅನುವು ಮಾಡಿಕೊಡಲಾಗುವುದು ಎಂದು ಪರ್ಯಾಯ ಕಾಣಿಯೂರು ಮಠಾಧೀಶ ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು. ಅವರು ಶುಕ್ರವಾರ ಶ್ರೀಕೃಷ್ಣ ಮಠದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. 

ಸಾಮಾನ್ಯವಾಗಿ ಚಾಂದ್ರಮಾನ ಪದ್ಧತಿಯಂತೆ ಶ್ರಾವಣ ಮಾಸದಲ್ಲಿ ಕೃಷ್ಣ ಅಷ್ಟಮಿಯಂದು (ಆಗಸ್ಟ್ 17) ಶ್ರಿ ೀಕೃಷ್ಣಾಷ್ಟಮಿ ಹಬ್ಬ ಆಚರಣೆ ನಡೆಯಲಿದೆ. ಅಂದು ಶ್ರೀಕೃಷ್ಣಮಠದಲ್ಲಿ ಉಪವಾಸ ಆಚರಣೆ, ರಾತ್ರಿ ಚಂದ್ರೋದಯ ಕಾಲದಲ್ಲಿ ಅರ್ಘ್ಯ ಪ್ರದಾನ ಇರುತ್ತದೆ. ಆದರೆ ಉಡುಪಿಯಲ್ಲಿ ಸೌರಮಾನ ಆಚರಣೆ ಇರುವುದರಿಂದ ಸಿಂಹ ಮಾಸದಲ್ಲಿ (ಸೆ.16,17) ಕೃಷ್ಣಾಷ್ಟಮಿ ಉತ್ಸವ ನಡೆಯಲಿದೆ. ಚಾಂದ್ರಮಾನ ರೀತಿಯಲ್ಲಿ ಶ್ರಾವಣ ಮಾಸ 5ನೇ ತಿಂಗಳಾದರೆ, ಸೌರಮಾನ ರೀತಿಯಲ್ಲಿ ಸಿಂಹ ಮಾಸ 5ನೇ ತಿಂಗಳಾಗಿರುತ್ತದೆ. ಶ್ರಾವಣ ಮಾಸದಲ್ಲಿ ಕೃಷ್ಣಾಷ್ಟಮಿ ಎಂದೂ ಸಿಂಹ ಮಾಸದಲ್ಲಿ ಕೃಷ್ಣ ಅಷ್ಟಮಿಯನ್ನು ಶ್ರೀಕೃಷ್ಣ ಜಯಂತಿ ಎಂದು ಕರೆಯುತ್ತಾರೆ ಎಂದು ಶ್ರೀಗಳು ತಿಳಿಸಿದರು. 

ಈ ಬಾರಿ ಎರಡು ಅಷ್ಟಮಿಗಳು ಸಿಂಹ ಮಾಸದಲ್ಲಿ ಬಂದಿವೆ. ಆದರೆ ಸಿಂಹಮಾಸದ ಕೊನೆಯ ಅಷ್ಟಮಿ ಉಡುಪಿಯಲ್ಲಿ ಆಚರಣೆಗೆ ಪ್ರಾಶಸ್ತ್ಯವಾದ ಕಾರಣ ಈ ಬಾರಿ ಕೃಷ್ಣಜನ್ಮಾಷ್ಟಮಿಯನ್ನು ಸೆ.16 ಹಾಗೂ 17ರಂದು ಆಚರಿಸಲಾಗುವುದು. ಸೆ.16ರಂದು ಅಷ್ಟಮಿ ಪ್ರಯುಕ್ತ ಉಪವಾಸ ಆಚರಣೆ, ಶ್ರೀಕೃಷ್ಣನಿಗೆ ವಿಶೇಷ ಅಲಂಕಾರ ನಡೆಯಲಿದೆ. ರಾತ್ರಿ 12-36ಕ್ಕೆ ಚಂದ್ರೋದಯ ಕಾಲದಲ್ಲಿ ಶ್ರೀಕೃಷ್ಣನಿಗೆ ಅರ್ಘ್ಯ ಪ್ರದಾನ ನಡೆಯಲಿದೆ. ಸೆ.17ರಂದು ವೈಭವದ ವಿಟ್ಲಪಿಂಡಿ (ಶ್ರೀಕೃಷ್ಣ ಲೀಲೋತ್ಸವ )ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಠದ ದಿವಾನ ರಘುಪತಿ ಆಚಾರ್ಯ, ನಾಗರಾಜ ಆಚಾರ್ಯ, ರಾಧಾಕೃಷ್ಣ ಆಚಾರ್ಯ ಹಾಗೂ ಕಿನ್ನಿಮುಲ್ಕಿ ಕೃಷ್ಣಮೂರ್ತಿ ಆಚಾರ್ಯ ಉಪಸ್ಥಿತರಿದ್ದರು. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com