ನಾಟಿ ಯಂತ್ರ ಹಾಗೂ ಕೃಷಿ ಉಪಕರಣಗಳ ಪ್ರಾತ್ಯಕ್ಷತೆ

ಬೈಂದೂರು: ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ನಿ., ಉಪ್ಪುಂದ ಹಾಗೂ ಸಂಘವು ಪ್ರಾಯೋಜಿಸಿರುವ ರೈತ ಶಕ್ತಿ, ರೈತ ಸೇವಾ ಕೂಟ ಉಪ್ಪುಂದ, ಅನ್ನದಾತ ರೈತ ಗುಂಪು ಹೊಸ್ಕೋಟೆ ಇವರ ಜಂಟಿ ಆಶ್ರಯದಲ್ಲಿ ಹೊಸ್ಕೋಟೆ ಬೊಬ್ಬರ್ಯನ ಕಟ್ಟೆ ವಠಾರದಲ್ಲಿ ಸಂಘದ ಸದಸ್ಯ ಕುಷ್ಟು ಪೂಜಾರಿ ಹೊಸ್ಕೋಟೆ ಇವರ ನಾಟಿ ಯಂತ್ರದಿಂದ ಸಂಘದ ಹಿರಿಯ ಸದಸ್ಯೆ ಗೌರಿ ಭಂಡಾರಕರ್ ಇವರ ನಾಟಿ ಗದ್ದೆಯಲ್ಲಿ "ನಾಟಿ ಯಂತ್ರ ಪ್ರಾತ್ಯಕ್ಷಿತೆ" ಕಾರ್ಯಕ್ರಮವು ಜರುಗಿತು. 

ಪ್ರಾತ್ಯಕ್ಷಿತೆ ಕಾರ್ಯಕ್ರಮಕ್ಕೆ ಸಂಘದ ಅಧ್ಯಕ್ಷರಾದ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಇವರು ಚಾಲನೆ ನೀಡಿ, ಈ ದಿನಗಳಲ್ಲಿ ಕಡಿಮೆ ವೆಚ್ಚದಲ್ಲಿ ಅಧಿಕ ಉತ್ಪಾದನೆಯಾಗುವ ಇಳುವರಿಗಳ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ರೈತರಿಗೆ ಸೂಕ್ತ ಮಾಹಿತಿ ನೀಡಬೇಕಾದ ಅಗತ್ಯವಿದೆ, ಈ ನಿಟ್ಟಿನಲ್ಲಿ ಸರಕಾರ ರೈತರಿಗೆ ರಕ್ಷಣೆ ನೀಡಬೇಕು. ರೈತರನ್ನು ಎಲ್ಲೆಡೆಯಲ್ಲೂ ಗೌರವಿಸಬೇಕು, ಎಲ್ಲಾ ವರ್ಗದ ರೈತರಿಗೂ ಆರ್ಥಿಕ ನೆರವು ಲಭಿಸಬೇಕು, ಕೃಷಿ ಕಾರ್ಮಿಕರ ಕೊರತೆ ಇದ್ದು ಕಾಲಕ್ಕೆ ತಕ್ಕಂತೆ ವ್ಯವಸಾಯ ಬೇಕಾದರೆ ಯಾಂತ್ರಿಕೃತ ಬೇಸಾಯ ಪದ್ದತಿ ವೃದ್ಧಿಯಾಗಬೇಕು ಎಂದು ರೈತರನ್ನು ಉದ್ದೇಶಿಸಿ ಮಾತನಾಡಿದರು. ಬೈಂದೂರು ಕೃಷಿ ಅಧಿಕಾರಿಗಳಾದ ಕು. ಗಾಯತ್ರಿದೇವಿ ಇವರು ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆ, ಗೊಬ್ಬರಗಳ ಪೂರೈಕೆ ಬಳಸುವ ಕ್ರಮಗಳನ್ನು ವಿಸ್ತಾರವಾಗಿ ವಿವರಿಸಿದರು. ಗ್ರಾಮೀಣ ಪ್ರದೇಶದ ರೈತರು ಇಲಾಖೆಯಿಂದ ದೊರೆಯುವ ಸವಲತ್ತುಗಳನ್ನು ಸದುಪಯೋಗ ಪಡೆದುಕೊಳ್ಳಬೇಕೆಂಬ ಮಾತನ್ನು ನುಡಿದರು. 

ಕುಂದಾಪುರದ ಎಗ್ರಿ ಮಾರ್ಟ್ ಈಸಿ ಲೈಫ್ ಎಂಟರ್‌ಪ್ರೈಸಸ್ ಇವರಿಂದ ನಾಟಿಯಂತ್ರ, ಮೊಟರೈಸ್ಡ್ ಕೋನೋವಿಡರ್, ಪವರ್ ಸ್ಪೇಯರ್ ಹಾಗೂ ಇತರ ಕೃಷಿ ಯಂತ್ರಗಳು ಮತ್ತು ಕೃಷಿ ಉಪಕರಣಗಳು ಪ್ರದರ್ಶನಗೊಂಡಿತು. ಈ ಸಂದರ್ಭದಲ್ಲಿ ಅನ್ನದಾತ ರೈತ ಗುಂಪಿನ ಅಧ್ಯಕ್ಷರಾದ ವೆಂಕಟೇಶರಾವ್ ಎಚ್., ಸಂಘದ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಶ್ರೀಮತಿ ಮಮತಾ ವಿ. ಮಯ್ಯ ಸಭೆಯಲ್ಲಿ ಉಪಸ್ಥಿತರಿದ್ದರು.

ವಸೂಲಾತಿ ವ್ಯವಸ್ಥಾಪಕ ಹಾವಳಿ ಬಿಲ್ಲವ ಕಾರ್ಯಕ್ರಮವನ್ನು ನಿರೂಪಿಸಿದರು. ವ್ಯವಸ್ಥಾಪಕ ಸತೀಶ ಪೈ ವಂದಿಸಿದರು. ನೌಕರ ವೃಂದವರು ಹಾಗೂ ಬಳಗ ಸೇರಿಸಿ ಬಂದಿರುವಂತಹ ರೈತ ಸದಸ್ಯರು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com