ವಕ್ವಾಡಿಯಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ

ವಕ್ವಾಡಿ: ಒಂದು ಕಾಲದಲ್ಲಿ ರಕ್ತದಾನದ ಬಗ್ಗೆ ಜನರಲ್ಲಿ ಅಪನಂಬಿಕೆ ಇತ್ತು. ಆದರೆ ಈಗ ಜನರೇ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ತುರ್ತು ಪರಿಸ್ಥಿತಿಯಲ್ಲಿ ಜನರನ್ನುಳಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿರುವುದು ಅಭಿನಂದನೀಯ. ರಕ್ತದಾನ ಜೀವ ಉಳಿಸುವ ಮಹತ್ಕಾರ್ಯ. ರಕ್ತ ನೀಡುವ ರಕ್ತದಾನಿಗಳನ್ನು ಸ್ಮರಿಸಬೇಕಾದುದು ನಮ್ಮೆಲ್ಲರ ಕರ್ತವ್ಯ. ಹಾಗೆಯೇ ರಕ್ತದಾನ ಕಾರ್ಯಕ್ರಮ ಹಮ್ಮಿಕೊಂಡಿರುವ ವಕ್ವಾಡಿ ಗ್ರಾಮದ ಜನತೆ ಅಭಿನಂದನೀಯ ಎಂದು ಹೊನ್ನಾವರದ ಶ್ರೀದೇವಿ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್‌ನ ಆಡಳಿತ ನಿರ್ದೇಶಕ ಡಾ ವಕ್ವಾಡಿ ಚಂದ್ರಶೇಖರ ಶೆಟ್ಟಿ ಹೇಳಿದರು.

ಅವರು ವಕ್ವಾಡಿ ಗ್ರಾಮಸ್ಥರು ಆಯೋಜಿಸಿದ್ದ ಬೃಹತ್‌ ಸ್ವಯಂ ಪ್ರೇರಿತ ರಕ್ತದಾನ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಶುಭ ಹಾರೈಸಿದರು. 

ಬೆಂಗಳೂರಿನ ಉದ್ಯಮಿ ವಿ.ಕೆ. ಮೋಹನ್‌ ವಕ್ವಾಡಿ ರೈತರಿಗೆ ಉಚಿತ ಸಸಿ ವಿತರಿಸಿ ಶುಭ ಹಾರೈಸಿದರು. ಈ ಸಂದರ್ಭ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ವಕ್ವಾಡಿಯ ಯೋಧರಾದ ಶಿವರಾಮ ಶೆಟ್ಟಿಗಾರ, ಆನಂದ ಕುಲಾಲ್‌ ಹಾಗೂ ಈಗಾಗಲೇ 59 ಬಾರಿ ರಕ್ತದಾನ ಮಾಡಿ 60ನೇ ಬಾರಿ ರಕ್ತದಾನ ಮಾಡುತ್ತಿರುವ ದಿವಾಕರ ಖಾರ್ವಿ ಅವರನ್ನು ದುಬೈ ಉದ್ಯಮಿ ವಕ್ವಾಡಿ ಪ್ರವೀಣ್‌ ಕುಮಾರ್‌ ಶೆಟ್ಟಿ ಸಮ್ಮಾನಿಸಿದರು.

ವಕ್ವಾಡಿ ಪ್ರೌಢಶಾಲೆಯ 10ನೇ ತರಗತಿಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ ಹಾಗೂ 7ನೇ ತರಗತಿಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ದಾನಿ ವಕ್ವಾಡಿ ಪ್ರವೀಣ್‌ ಕುಮಾರ್‌ ಶೆಟ್ಟಿ ಅವರು ನೀಡಿದರು. ಕಾರ್ಯಕ್ರಮದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ವಕ್ವಾಡಿ ಪ್ರವೀಣ್‌ಕುಮಾರ್‌ ಶೆಟ್ಟಿ ದಂಪತಿಯನ್ನು ವಕ್ವಾಡಿ ಗ್ರಾಮಸ್ಥರು ಸಮ್ಮಾನಿಸಿದರು.

ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಡಾ| ವೀಣಾಕುಮಾರಿ, ಕೊರ್ಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಪ್ರತಾಪ್‌ ಕುಮಾರ್‌, ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ಕುಂದಾಪುರ ಘಟಕದ ಸಭಾಪತಿ ಎಸ್‌. ಜಯಕರ ಶೆಟ್ಟಿ  ಕೋಟೇಶ್ವರ ರೋಟರಿ ಅಧ್ಯಕ್ಷ ಟಿ. ಗಣೇಶ್‌ ಆಚಾರ್ಯ, ವಕ್ವಾಡಿ ವಿಶ್ವಬ್ರಾಹ್ಮಣ ಸಂಘದ ಅಧ್ಯಕ್ಷ ವಿ. ದಯಾನಂದ ಆಚಾರ್ಯ, ರೂಪಾಲಿ ಪ್ರವೀಣ್‌ಕುಮಾರ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಕೋಟೇಶ್ವರ ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷ ಆನಂದ ಆಚಾರ್ಯ ಸ್ವಾಗತಿಸಿದರು. ಅಧ್ಯಾಪಕ ವಕ್ವಾಡಿ ವೇಣುಗೋಪಾಲ ಹೆಗ್ಡೆ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ವಕ್ವಾಡಿ ಬಾಲಕೃಷ್ಣ ಶೆಟ್ಟಿ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com