ಪ್ರತಿಭಟನ ಸ್ಥಳಕ್ಕೆ ಶಾಸಕ ಪೂಜಾರಿ ಭೇಟಿ

ಕುಂದಾಪುರ: ವಂಡ್ಸೆ ಗ್ರಾ.ಪಂ. ವ್ಯಾಪ್ತಿಯ ಆತ್ರಾಡಿ ಒಳಗೇರಿ ಗುಡ್ಡೆಯಲ್ಲಿ ಪ.ವರ್ಗ ಹಾಗೂ ಪ. ಜಾತಿ ಕುಟುಂಬದವರಿಗೆ ಕಾಯ್ದಿರಿಸಿದ ಭೂಮಿಯಲ್ಲಿ 2012ರಿಂದ ಕುಳಿತುಕೊಂಡಿರುವ ಕೊರಗ ಸಮುದಾಯದ 5 ಕುಟುಂಬದವರನ್ನು ಬಲವಂತವಾಗಿ ಒಕ್ಕಲೆಬ್ಬಿಸಿರುವ ವಿರುದ್ಧ ವಂಡ್ಸೆ ವಲಯದ ಕೊರಗ ಅಭಿವೃದ್ಧಿ ಸಂಘದ ನೇತೃತ್ವದಲ್ಲಿ ಸ್ಥಳೀಯ ಗ್ರಾ.ಪಂ. ಕಚೇರಿ ಎದುರು ಕಳೆದ 7 ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಶನಿವಾರ ಭೇಟಿ ನೀಡಿದ್ದ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿ ಅವರ ಅಹವಾಲು ಸ್ವೀಕರಿಸಿದರು.

ಇದೆ ಸಂದರ್ಭ ಮಾತನಾಡಿದ ಶಾಸಕರು, ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಮುಖ್ಯಮಾಹಿನಿಗೆ ತರಬೇಕು ಎನ್ನುವುದು ಸರಕಾರದ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಆತ್ರಾಡಿಯ ಒಳಗೇರಿ ಗುಡ್ಡೆಯಲ್ಲಿ ವಾಸವಾಗಿರುವ ಪರಿಶಿಷ್ಟ ವರ್ಗದ ಜನರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ತಾನು ಬದ್ಧತೆ ಹೊಂದಿರುವುದಾಗಿ ತಿಳಿಸಿದರು.

ಶಾಸಕ ಪೂಜಾರಿ ಅವರು ಸ್ಥಳದಿಂದಲೇ ಕುಂದಾಪುರದ ಕಂದಾಯ ಉಪವಿಭಾಗಾಧಿಕಾರಿ ಯೋಗೀಶ್ವರ ಹಾಗೂ ತಹಸೀಲ್ದಾರ್‌ ಗಾಯತ್ರಿ ನಾಯಕ್‌ ಅವರನ್ನು ಸಂಪರ್ಕಿಸಿ ಸಮಸ್ಯೆಯ ಗಂಭೀರತೆ ಬಗ್ಗೆ ತಿಳಿಸಿದರಲ್ಲದೆ, ಡಿ.ಸಿ. ಮನ್ನಾ ಭೂಮಿಯಲ್ಲಿ ಕುಳಿತುಕೊಂಡಿರುವ ಪರಿಶಿಷ್ಟ ವರ್ಗದ ಜನರನ್ನು ಒಕ್ಕೆಲೆಬ್ಬಿಸುವ ಹುನ್ನಾರದ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಹಾಗೂ ಸ್ಥಳ ಪರಿಶೀಲನೆ ನಡೆಸಿ ಕಂದಾಯ ಇಲಾಖೆಯ ಡಿ.ಸಿ. ಮನ್ನಾ ಭೂಮಿಯಲ್ಲಿ ಕುಳಿತುಕೊಂಡಿರುವವರಿಗೆ ಹಕ್ಕು ಪತ್ರ ವಿತರಿಸಬೇಕು ಎಂದು ಸೂಚಿಸಿದರು.

ಈ ಸಂದರ್ಭ ವಂಡಬಳ್ಳಿ ಜಯರಾಮ ಶೆಟ್ಟಿ, ಉದಯ್‌ಕುಮಾರ ಶೆಟ್ಟಿ ಹಾಗೂ ಶ್ರೀನಿವಾಸ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com