ಹಲಗೆ ಕಾಣದ ಅಣೆಕಟ್ಟು: ಕೃಷಿ ಭೂಮಿಗೆ ಪೆಟ್ಟು

ಜಾನ್ ಡಿಸೋಜ ಕುಂದಾಪುರ ಸ್ವಾತಂತ್ರ್ಯಪೂರ್ವದಲ್ಲಿ ಇಲ್ಲಿ ಊರ ಜನರೇ ಸ್ವಯಂ ಪ್ರೇರಿತರಾಗಿ ಸೊಪ್ಪು, ಮಣ್ಣು ಹೊತ್ತು ತಂದು ನದಿಗೆ ಒಡ್ಡು ಕಟ್ಟಿ ಯಥೇಚ್ಚ ನೀರು ಪಡೆಯುತ್ತಿದ್ದರು. 1975ರಲ್ಲಿ ಊರಿನಲ್ಲಿ ಸರಕಾರಿ ಕಿಂಡಿ ಅಣೆಕಟ್ಟು ರಚನೆಯಾದ ಬಳಿಕವೂ ನೀರಿಗೆ ಬರ ಉಂಟಾಗಲಿಲ್ಲ. ಕಳೆದ 2 ವರ್ಷಗಳಿಂದ ವೆಂಟೆಡ್ ಡ್ಯಾಂ ಸಂಪೂರ್ಣ ನಿರ್ಲಕ್ಷಕ್ಕೀಡಾಗಿದ್ದು, ಈ ಭಾಗದ ಕೃಷಿಯ ಮೇಲೆ ಮಾರಕ ಹೊಡೆತ ಬಿದ್ದಿದೆ. -ಇದು ತಾಲೂಕಿನ ಕಾಳಾವರ ಗ್ರಾಪಂ ವ್ಯಾಪ್ತಿಯ ಕೊರ್ಗಿ ಗ್ರಾಮದ ನೋಟ. 

10 ಸಾವಿರ ಹೆಕ್ಟೇರ್‌ಗೂ ಹೆಚ್ಚು ವಿಶಾಲ ಕಷಿ ಭೂಮಿ ಹೊಂದಿರುವ ಕೊರ್ಗಿ ಗ್ರಾಮದ ಜೀವನಾಡಿ ಇಲ್ಲಿನ ಕೋಣಟ್ಟು ಹೊಳೆ. ಹೊಳೆಯ ಇಕ್ಕೆಲಗಳಲ್ಲಿ ಬಯಲು ಹರಡಿಕೊಂಡಿದೆ. ಬಯಲ ದಡದಲ್ಲಿ ತೆಂಗು, ಕಂಗುಗಳ ಸಮ್ಮೋಹಕ ನೋಟ. ಇಂತಿಪ್ಪ ಕೃಷಿ ಭೂಮಿ ಈಗ ಸಂಪೂರ್ಣ ಹೈರಣಾಗಿದೆ. 2 ವರ್ಷಗಳಿಂದ ಕಾಡುತ್ತಿರುವ ಸಮಸ್ಯೆ ಉಲ್ಬಣಕ್ಕೆ ಕಾರಣವಾಗುವಂತೆ ಈ ಬಾರಿ ಮುಂಗಾರು ಕೂಡಾ ಕೈಕೊಟ್ಟಿದೆ. 

ಕೊರ್ಗಿ ಗ್ರಾಮದಲ್ಲಿ 5 ಕಿಂಡಿ ಅಣೆಕಟ್ಟುಗಳಿವೆ. ಅದರಲ್ಲಿ ಕೋಣಟ್ಟು ಕಿಂಡಿ ಅಣೆಕಟ್ಟು 35 ವರ್ಷಗಳಷ್ಟು ಹಳೆಯದು. ಇದರಲ್ಲಿನ 4 ಕಿಂಡಿಗಳು ಶಿಥಿಲಾವಸ್ಥೆಗೆ ತಲುಪಿವೆ. 2013-14ನೇ ಸಾಲಿನಿಂದ ಅಣೆಕಟ್ಟುಗಳಿಗೆ ಹಲಗೆ ಜೋಡಿಸುವಿಕೆ ಪ್ರಕ್ರಿಯೆ ನಡೆದಿಲ್ಲ. ಇದರ ಪರಿಣಾಮ ನೇರ ಕೃಷಿಯ ಮೇಲೆ ಬಿದ್ದಿದೆ. 

ನದಿಯಲ್ಲಿ ನೀರು ಇಂಗದೆ ಅಂತರ್ಜಲ ಕ್ಷೀಣಿಸಿದೆ. ಅಕ್ಕಪಕ್ಕದ ಕೆರೆ, ಬಾವಿಗಳು ಬತ್ತಿ ಹೋದವು. ಕುಡಿಯುವ ನೀರಿಗೂ ಸಂಕಷ್ಟ ಎದುರಾಯಿತು. ಅದಕ್ಕೆ ಸರಿಹೊಂದುವಂತೆ ಈ ಬಾರಿ ಮುಂಗಾರು ಕೈಕೊಟ್ಟಿತು. ಜುಲೈ ಹೊತ್ತಿಗೆ ಫಸಲು ಮೂಡಿಬರುತ್ತಿದ್ದ ಕೊರ್ಗಿ ಕೋಣಟ್ಟು ಕೃಷಿ ಭೂಮಿಯಲ್ಲಿ ಈ ಬಾರಿ ನಾಟಿ ಕಾರ್ಯವೇ ಆರಂಭಗೊಂಡಿಲ್ಲ. ಕೊರ್ಗಿ, ಕೋಣಟ್ಟು, ಹೊಸ್ಮಠ ವ್ಯಾಪ್ತಿಯ ವಿಶಾಲ ಕಷಿಭೂಮಿ ಹಡಿಲು ಬೀಳುವ ಹಂತಕ್ಕೆ ಬಂದು ತಲುಪಿದೆ. 

*ಕಿಂಡಿ ಅಣೆಕಟ್ಟು ದುರಸ್ತಿ ಮತ್ತು ಹಲಗೆ ಅಳವಡಿಕೆ ಕಾರ್ಯಕ್ಕಾಗಿ ಮಾಡಿಕೊಂಡ ಮನವಿಗೆ ಯಾರಿಂದಲೂ ಸ್ಪಂದನ ಸಿಕ್ಕಿಲ್ಲ. ವಾರಾಹಿ ನೀರು ಮನೆ ಬಾಗಿಲಿಗೆ ಬರುತ್ತದೆ ಎಂಬ ಗುಮ್ಮ ಹಬ್ಬಿಸಿ ಇಲ್ಲಿನ ರೈತಾರ್ಪಿ ವರ್ಗದ ದಿಕ್ಕು ಕೆಡಿಸುವ ಪ್ರಯತ್ನ ನಡೆಯುತ್ತಿದೆ. ಕಿಂಡಿ ಅಣೆಕಟ್ಟಿಗೆ ಹಲಗೆ ಅಳವಡಿಸುವ ಕಾರ್ಯ ವ್ಯವಸ್ಥಿತವಾಗಿ ನಡೆದಿದ್ದರೆ ಈ ಬಾರಿಯ ಮುಂಗಾರು ದುರ್ಬಲತೆ ಎದುರಿಸುವ ಶಕ್ತಿ ನಮಗಿರುತ್ತಿತ್ತು. -ಎ.ಚಂದ್ರಶೇಖರ ಶೆಟ್ಟಿ ಹಿರಿಯ ಕೃಷಿಕರು
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com