ಉಪ್ಪುಂದ: ಕೃಷಿ ಯಂತ್ರಗಳ ಪ್ರಾತ್ಯಕ್ಷತೆ ಕಾರ್ಯಕ್ರಮ

ಬೈಂದೂರು: ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ, ಉಪ್ಪುಂದ ಹಾಗೂ ಸಂಘವು ಪ್ರಾಯೋಜಿಸಿರುವ ರೈತ ಶಕ್ತಿ, ರೈತ ಸೇವಾ ಒಕ್ಕೂಟ ಶ್ರೀ ಜಟ್ಟಿಗೇಶ್ವರ ರೈತ ಕೂಟ ಚರಕನಮಕ್ಕಿ ಕೂರ್ಸೆ ಕಾಲ್ತೋಡು ಇವರ ಜಂಟಿ ಆಶ್ರಯದಲ್ಲಿ ಸಂಘದ ಕಾಲ್ತೋಡು ಶಾಖಾ ವಠಾರದಲ್ಲಿ ತೆಂಗು, ಅಡಿಕೆ ಬೆಳೆಗಳ ಬಗ್ಗೆ ಹಾಗೂ ವಿವಿಧ ರೀತಿಯ ಕೃಷಿ ಯಂತ್ರಗಳ ಪ್ರಾತ್ಯಕ್ಷತೆ ಕಾರ್ಯಕ್ರಮ ಜರುಗಿತು. 
    ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಹಾಗೂ ಸಂಘದ ನಿರ್ದೇಶಕ ಬಿ. ರಘುರಾಮ ಶೆಟ್ಟಿ ಪ್ರಾತ್ಯಕ್ಷತೆ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿಯವರು ಇಂತಹ ರೈತ ಪ್ರಾತ್ಯಕ್ಷತೆ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ರೈತರ ತೋಟಗಳಲ್ಲಿ ನಡೆಸಬೇಕು. ಇಂತಹ ಕಾರ್ಯಕ್ರಮಗಳಿಗೆ ಸಂಘವು ಸಹಭಾಗಿಯಾಗಿ ಸಹಕರಿಸುವುದಲ್ಲದೇ ಇಂತಹ ಪ್ರಾತ್ಯಕ್ಷತೆ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳುವಂತೆ ರೈತರಿಗೆ ಕಿವಿಮಾತು ಹೇಳಿದರು. 
     ಸಂಪನ್ಮೂಲ ವ್ಯಕ್ತಿಗಳಾದ ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರದ ಸಹಪ್ರಾಧ್ಯಾಪಕ ಡಾ. ಧನಂಜಯ ಇವರು ತೆಂಗು, ಅಡಿಕೆ ಬೆಳೆಗಳ ಬಗ್ಗೆ ಹಾಗೂ ತೋಟಗಾರಿಕೆ ಬೆಳೆಗಳ ನಿರ್ವಹಣೆ ಬಗ್ಗೆ ಸೂಕ್ತ ಮಾಹಿತಿ ನೀಡುವುದರೊಂದಿಗೆ ಅಡಿಕೆ ಕೊಳೆ ರೋಗಕ್ಕೆ ಉಪಯೋಗಿಸುವ ಬೋರ್ಡೊದ್ರಾವಣ ತಯಾರಿಯ ವಿಧಾನವನ್ನು ಪ್ರಾಯೋಗಿಕವಾಗಿ ರೈತರ ಸಮ್ಮುಖದಲ್ಲಿ ಮಾಡಿ ತೋರಿಸಿ ಪಿ.ಎಚ್. ಪೇಪರ್ ಮೂಲಕ ದ್ರಾವಣದ ತಯಾರಿ ಸಾಂದ್ರತೆಯನ್ನು ಗುರುತಿಸುವ ಮಾಹಿತಿ ರೈತರಿಗೆ ಸಮಗ್ರವಾಗಿ ವಿವರಿಸಿದರು ಈ ಪ್ರಾತ್ಯಕ್ಷತೆಯನ್ನು ಯಶಸ್ವಿಯಾಗಿ ನಡೆಸುವಲ್ಲಿ ಸಹಕರಿಸಿದ ರೈತ ಕೂಟದ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತ ಪಡಿಸಿದರು. ಹಾಗೂ ಕುಂದಾಪುರ ತೋಟಗಾರಿಕೆ ಇಲಾಖೆ ಅಧಿಕಾರಿ ಮಂಜುನಾಥ ಇವರು ಇಲಾಖೆಯಿಂದ ಸಿಗಬಹುದಾದ ಪ್ರಯೋಜನಗಳ ಬಗ್ಗೆ ಹಾಗೂ ರೈತಾಪಿ ಬಂಧುಗಳು ಈ ಎಲ್ಲಾ ಪ್ರಯೋಜನಗಳನ್ನು ಪಡೆಯುವಂತೆ ಸಮಗ್ರವಾಗಿ ಮಾಹಿತಿ ನೀಡಿದರು. ನಂತರ ರೈತರ ಪ್ರಶ್ನೆಗಳಿಗೆ ಉತ್ತರಿಸಿ ಸೂಕ್ತ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕ ಗುರುರಾಜ ಹೆಬ್ಬಾರ್, ಸಂಘದ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಶ್ರೀಮತಿ ಮಮತಾ ವಿ. ಮಯ್ಯ, ಶ್ರೀ ಜಟ್ಟಿಗೇಶ್ವರ ರೈತ ಕೂಟದ ಅಧ್ಯಕ್ಷ ರಾಮಯ್ಯ ಶೆಟ್ಟಿ, ಕಾರ್ಯದರ್ಶಿ ಜನಾರ್ಧನ ನಾಯಕ್ ಹಾಗೂ ರೈತ ಸದಸ್ಯರು ಉಪಸ್ಥಿತರಿದ್ದರು.
    ಸಂಘದ ವ್ಯವಸ್ಥಾಪಕ ಸತೀಶ ಪೈ ಸ್ವಾಗತಿಸಿ, ವಸೂಲಾತಿ ವ್ಯವಸ್ಥಾಪಕ ಹಾವಳಿ ಬಿಲ್ಲವ ಕಾರ್ಯಕ್ರಮವನ್ನು ನಿರೂಪಿಸಿದರು. ಕಾಲ್ತೋಡು ಶಾಖಾ ಪ್ರಭಾರ ವ್ಯವಸ್ಥಾಪಕ ಎಚ್. ರಾಮ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com