ವಿವಿಧೆಡೆ ಸಂಭ್ರಮದ ಗಣೇಶೋತ್ಸವ

ಕುಂದಾಪುರ: ತಾಲೂಕಿನೆಲ್ಲೆಡೆ ಶ್ರೀ ಗಣೇಶ ಚತುರ್ಥಿ ಹಬ್ಬವನ್ನು ಭಕ್ತಿ, ಸಡಗರ ಸಂಭ್ರಮಗಳಿಂದ ಆಚರಿಸಲಾಯಿತು. ಮನೆ ಮನೆಗಳಲ್ಲಿ ಗೌರಿ-ಗಣೇಶ ಹಬ್ಬದ ಸಂಭ್ರಮವಿತ್ತು.
ತಗ್ಗರ್ಸೆಯಲ್ಲಿ ಪೂಜಿತ ಗಣಪತಿ
ಮಯ್ಯಾಡಿಯಲ್ಲಿ ಪೂಜಿತ ಗಣಪತಿ

ಬೈಂದೂರು ಸೇನೇಶ್ವರ ದೇವಳದಲ್ಲಿ ಪೂಜಿತ ಗಣಪತಿ 
ಬೈಂದೂರಿನ ಉಮೇಶ್ ಅವರ ಮನೆಯಲ್ಲಿ ಪೂಜಿತ ಗಣಪತಿ

ಬೈಂದೂರಿನ ಉಮೇಶ್ ಅವರ ಮನೆಯಲ್ಲಿ ಪೂಜಿತ ಗಣಪತಿ

ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಆಚರಣೆ ಸಂಭ್ರಮದಿಂದ ಜರುಗಿತು. ಸಹಸ್ರಾರು ಭಕ್ತರು ಗಣೇಶ ದರ್ಶನ ಪಡೆದರು. ಅಷ್ಟೋತ್ತರ ಸಹಸ್ರ ನಾಳಿಕೇರ ಗಣಯಾಗ, ಅಷ್ಟೋತ್ತರ ಸೇವೆ, ಮೂಡುಗಣಪತಿ, ರಂಗಪೂಜೆ ಹಾಗೂ ವಿಶೇಷವಾಗಿ ಕಡುಬಿನ ಸೇವೆ ನಡೆಯಿತು. ರಾತ್ರಿ ಶ್ರೀ ದೇವರ ಸ್ವರ್ಣ ಪಲ್ಲಕ್ಕಿ ಉತ್ಸವ ಜರುಗಿತು. ದೇವಳದ ಅನುವಂಶಿಕ ಆಡಳಿತ ಧರ್ಮದರ್ಶಿ ಕೆ.ಸೂರ್ಯನಾರಾಯಣ ಉಪಾಧ್ಯಾಯ, ದೇವಳದ ಅನುವಂಶಿಕ ಧರ್ಮದರ್ಶಿ ಕೆ.ಲಕ್ಷ್ಮೀನಾರಾಯಣ ಉಪಾಧ್ಯಾಯ, ಕೆ.ರಮಣ ಉಪಾಧ್ಯಾಯ, ಅನುವಂಶಿಕ ಪರ್ಯಾಯ ಅರ್ಚಕರಾದ ಗಣೇಶ ಉಪಾಧ್ಯಾಯ ಮತ್ತು ಸಹೋದರರ ನೇತತ್ವದಲ್ಲಿ ಧಾರ್ಮಿಕ ವಿಧಿ ನೆರವೇರಿತು. 
ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೂರಕೆ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬೈಂದೂರು ಶಾಸಕ ಗೋ ಪಾಲ ಪೂಜಾರಿ, ನಾಡೋಜ ಡಾ.ಜಿ. ಶಂಕರ್ ಮೊದಲಾದವರು ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. 
    ಹಟ್ಟಿಯಂಗಡಿ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ವಿನಾಯಕ ಚತುರ್ಥಿ ದಿನ ಅಷ್ಟೋತ್ತರ ಸಹಸ್ರ ನಾಳಿಕೇರ ಮಹಾ ಗಣಯಾಗ (1008 ತೆಂಗಿನ ಕಾಯಿ) ನಡೆಯಿತು. 
ಈ ಸಂದರ್ಭ ಶ್ರೀ ಸತ್ಯನಾರಾಯಣ ವ್ರತ, ಲಕ್ಷ ದೂರ್ವಾರ್ಚನೆ ಮತ್ತು ಸಿಂದೂರಾರ್ಚನೆ, ಮಹಾಗಣಪತಿ ಹೋಮ ಸಂಕಲ್ಪ, ರಂಗ ಪೂಜಾದಿ ಸೇವೆಗಳು, ಸತ್ಯಗಣಪತಿ ವ್ರತ ಹಾಗೂ ಕಥಾ ನಿರೂಪಣೆ ನಡೆಯಿತು. ಧಾರ್ಮಿಕ ಸಭೆ ಹಾಗೂ ಸನ್ಮಾನ ಸಮಾರಂಭದಲ್ಲಿ ನಾನಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಅರ್ಹ ಫಲಾನುಭವಿಗಳಿಗೆ ಸಹಾಯಧನ ವಿತರಣೆ ನಡೆಯಿತು. 
ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆಯವರು ಕುಟುಂಬ ಸದಸ್ಯರ ಜತೆ ಬಂದು ವಿಶೇಷ ಪೂಜೆ ಸಲ್ಲಿಸಿದರು. ಧರ್ಮದರ್ಶಿ ಹೆಚ್.ರಾಮಚಂದ್ರ ಭಟ್ ಸಚಿವರಿಗೆ ಪ್ರಸಾದ ನೀಡಿದರು. ಪುಷ್ಪಾಲಂಕಾರ, ಸ್ವರ್ಣಾ ಭರಣಗಳಿಂದ ಪೂರ್ಣಾಲಂಕಾರ ಗೊಂಡ ಹಟ್ಟಿಯಂಗಡಿ ಸಿದ್ಧಿ ವಿನಾಯಕನನ್ನು ಸಾವಿರಾರು ಭಕ್ತರು ದರ್ಶನ ಮಾಡಿದರು. 
     ಕುಂದಾಪುರ ತಾಲೂಕಿನ ಪುರಾಣ ಪ್ರಸಿದ್ಧ ಗುಹಾಂತರ ದೇವಾಲಯ ಗುಡ್ಡಟ್ಟು ಶ್ರೀ ವಿನಾಯಕ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ವಿಶೇಷ ರೀತಿಯಲ್ಲಿ ಸಂಪನ್ನಗೊಂಡಿತು. ಶ್ರೀ ದೇವರ ಪ್ರೀತ್ಯಾರ್ಥ ಆಯುರ್‌ಕೊಡ ಸೇವೆ, ಅಷ್ಟೋತ್ತರ ಶತನಾಳಿಕೇರ ಗಣಯಾಗ ಹಾಗೂ ವಿಶೇಷ ಪೂಜಾದಿಗಳು ಜರುಗಿದವು. ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಜಿ.ಅನಂತಪದ್ಮನಾಭ ಅಡಿಗ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದವು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com