ಹಿರಿಯ ಸಾಹಿತಿ ಡಾ. ಯ.ಆರ್‌. ಅನಂತಮೂರ್ತಿ ಇನ್ನಿಲ್ಲ

ಬೆಂಗಳೂರು: ಎರಡೂ ಕಿಡ್ನಿ ವೈಫ‌ಲ್ಯ ಹಾಗೂ ಶ್ವಾಸಕೋಶದ ಸಮಸ್ಯೆಯಿಂದ ಗಂಭೀರ ಸ್ಥಿತಿಯಲ್ಲಿ ಇಲ್ಲಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ  ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡದ ಹಿರಿಯ ಸಾಹಿತಿ ಡಾ. ಯ.ಆರ್‌. ಅನಂತಮೂರ್ತಿ ಅವರು ಶುಕ್ರವಾರ  ಸಾಯಂಕಾಲದ ಹೊತ್ತಿಗೆ ನಿಧನರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು.
   ನವ್ಯ ಸಾಹಿತ್ಯ ಲೋಕದ ಹಿರಿಯ ಸಾಹಿತಿಗಳ ಪೈಕಿ ಒಬ್ಬರಾಗಿದ್ದ ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಳಿಗೆಯವರು. 
     ಡಾ. ಅನಂತಮೂರ್ತಿಯವರು 1970ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚಾರ್ಯರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿ, ತಿರುವನಂತಪುರದಲ್ಲಿರುವ ಕೇರಳ ವಿಶ್ವವಿದ್ಯಾನಿಲಯದ ಉಪ-ಕುಲಪತಿಗಳಾಗಿಯೂ ಸೇವೆ ಸಲ್ಲಿಸಿದ್ದರು. 1992ರಲ್ಲಿ ನ್ಯಾಷನಲ್‌ ಬುಕ್‌ ಟ್ರಸ್ಟ್‌ ಆಫ್ ಇಂಡಿಯಾದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. 1993ರಲ್ಲಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿದ್ದರು. ದೇಶದ ಮತ್ತು ವಿದೇಶಗಳ ಹಲವು ವಿಶ್ವವಿದ್ಯಾನಿಲಯಗಳಿಗೆ ಅತಿಥಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
     1994ರಲ್ಲಿ ಅನಂತಮೂರ್ತಿಯವರ "ಸಮಗ್ರ ಸಾಹಿತ್ಯ'ಕ್ಕೆ ಕೇಂದ್ರ ಸರಕಾರದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠ ದೊರೆತಿತ್ತು. ಇದು ಕನ್ನಡಕ್ಕೆ ದೊರೆತ ಆರನೇ  ಪ್ರಶಸ್ತಿಯಾಗಿತ್ತು.
    ಅನಂತಮೂರ್ತಿಯವರು ಪತ್ನಿ ಎಸ್ತರ್‌ ಅನಂತಮೂರ್ತಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಸಕಲ ಸರಕಾರಿ ಗೌರವಗಳೊಂದಿಗೆ ನಡೆಸಲು ಉದ್ದೇಶಿಸಲಾಗಿದೆ.
    ಹಿರಿಯ ಸಾಹಿತಿಯ ನಿಧನಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ನಾಡಿನ ಹಲವು ಗಣ್ಯರು, ಸಾಹಿತಿಗಳು, ಕಲಾವಿದರು ಮತ್ತು ಸಾಹಿತ್ಯಪ್ರಿಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಗೌರವಾರ್ಥ ಮೂರು ದಿನಗಳ ಶೋಕಾಚರಣೆ ಆಚರಿಸಲು ರಾಜ್ಯ ಸರಕಾರ ಆದೇಶ ನೀಡಿದೆ. ಮತ್ತು ಶನಿವಾರ ಶಾಲಾ ಕಾಲೇಜುಗಳಿಗೆ ಹಾಗೂ ಸರಕಾರಿ ಕಛೆರಿಗಳಿಗೆ ರಜೆ ಸಾರಲಾಗಿದೆ ಎಂದು ಮುಖ್ಯಮಂತ್ರಿಯವರು ತಿಳಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com