ಎಂಡೋಪೀಡಿತರ ಸಭೆ

ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 1,167 ಎಂಡೋಸಲ್ಫಾನ್‌ ಪೀಡಿತ‌ರಿಗೆ ಮಾಸಾಶನ ಮಂಜೂರು ಮಾಡಲಾಗಿದೆ. ಮುಂದಿನ ಸೋಮವಾರದೊಳಗೆ ಜೂನ್‌ ತಿಂಗಳ ವರೆಗಿನ ಮಾಸಾಶನವನ್ನು ಅವರ ಬ್ಯಾಂಕ್‌ ಖಾತೆಗಳಿಗೆ ಪಾವತಿಸಲಾಗುವುದು ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ರಾಮಚಂದ್ರ ಬಾಯರಿ ಹೇಳಿದರು.
   ಅವರು ಈ ಕುರಿತು ಪರಿಶೀಲನೆಗಾಗಿ ರಾಜ್ಯ ಹೈಕೋರ್ಟ್‌ ನೇಮಕ ಮಾಡಿರುವ ನ್ಯಾಯಾಲಯದ ಪ್ರತಿನಿಧಿ ವೈಶಾಲಿ ಹೆಗ್ಡೆ ಅವರಿಗೆ ಆಶ್ವಾಸನೆ ನೀಡಿದರು. ಜಿಲ್ಲೆಯಲ್ಲಿ ಎಂಡೋಸಲ್ಫಾನ್‌ ಸಂತ್ರಸ್ತರಿಗೆ ನೀಡಬೇಕಾಗಿರುವ ಪರಿಹಾರ ಹಾಗೂ ಪುನರ್ವಸತಿ ಯೋಜನೆಗಳ ಅನುಷ್ಠಾನದ ಲೋಪದೋಷಗಳ ವಿಚಾರಣೆಗೆ ಹೈಕೋರ್ಟ್‌ ಪ್ರತಿನಿಧಿ ವೈಶಾಲಿ ಹೆಗ್ಡೆ ಇಂದು ಜಿಲ್ಲೆಗೆ ಭೇಟಿ ನೀಡಿದ್ದು, ಕುಂದಾಪುರದಲ್ಲಿ ಎಂಡೋಸಲ್ಫಾನ್‌ ಪೀಡಿತರ ಹಾಗೂ ಅವರ ಕುಟುಂಬಿಕರೊಂದಿಗೆ ಈ ಕುರಿತು ಸಮಾಲೋಚನಾ ಸಭೆಯನ್ನು ಕುಂದಾಪುರ ರೋಟರಿ ಹಾಲ್‌ನಲ್ಲಿ ಜರಗಿಸಲಾಗಿತ್ತು.
  ಕರಾವಳಿಯ ಮೂರು ಜಿಲ್ಲೆಗಳಲ್ಲಿರುವ ಎಂಡೋಸಲ್ಫಾನ್‌ ಸಂತ್ರಸ್ತರ ಪರವಾಗಿ ಆರಂಭದ ದಿನಗಳಿಂದಲೂ ಹೋರಾಡುತ್ತಿರುವ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ| ರವೀಂದ್ರನಾಥ ಶಾನುಭಾಗ್‌, ಕುಂದಾಪುರ ರೋಟರಿಯ ಸಹಕಾರದೊಂದಿಗೆ ಈ ಸಭೆ ಆಯೋಜಿಸಿದ್ದರು.
   ಕರ್ನಾಟಕ ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಎಂಡೋಪೀಡಿತರಿಗೆ ಶಾಶ್ವತ ಪುನರ್ವಸತಿ ಯೋಜನೆ ಹಾಗೂ ಮಾಶಾಸನ ವಿತರಣೆ ಸಮರ್ಪಕವಾಗಿಲ್ಲ ಎಂದು 200ಕ್ಕೂ ಅಧಿಕ ಸಂತ್ರಸ್ತರು ಹೈಕೋರ್ಟ್‌ಗೆ ಲಿಖೀತವಾಗಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಗಾಗಿ ನ್ಯಾಯಾಲಯ ತನ್ನ ಪ್ರತಿನಿಧಿಯಾಗಿ ವೈಶಾಲಿ ಹೆಗ್ಡೆ ಅವರನ್ನು ಕಳುಹಿಸಿದೆ.
    ಕುಂದಾಪುರ ತಾಲೂಕಿನಲ್ಲಿ 52, ಉಡುಪಿಯಲ್ಲಿ 22 ಹಾಗೂ ಕಾರ್ಕಳದಲ್ಲಿ 14 ಗ್ರಾಮಗಳಿವೆ. 23 ಶಿಬಿರಗಳಲ್ಲಿ 14ನ್ನು ಕುಂದಾಪುರ, 4ನ್ನು ಉಡುಪಿ ಹಾಗೂ 5 ಶಿಬಿರವನ್ನು ಕಾರ್ಕಳದಲ್ಲಿ ನಡೆಸಲಾಗಿದ್ದು, ಶಿಬಿರಕ್ಕೆ ಒಟ್ಟು 3,310 ಮಂದಿ ಹಾಜರಾಗಿದ್ದು, ಸೂಕ್ತ ಪರೀಕ್ಷೆಯ ಬಳಿಕ ಜಿಲ್ಲೆಯಲ್ಲಿ ಒಟ್ಟು 1,452 ಮಂದಿ ಎಂಡೋ ಪೀಡಿತರನ್ನು ಗುರುತಿಸಲಾಗಿದೆ. ಇವರಲ್ಲಿ 903 ಮಂದಿ ಕುಂದಾಪುರ ತಾಲೂಕಿನಲ್ಲಿದ್ದಾರೆ ಎಂದರು.
   ಸಭೆಯಲ್ಲಿ ವೈಶಾಲಿ ಹೆಗ್ಡೆ ಅವರಲ್ಲದೇ ಫೌಂಡೇಷನ್‌ನ ಡಾ| ರವೀಂದ್ರನಾಥ ಶಾನುಭಾಗ್‌, ರೋಟರಿ ಕ್ಲಬ್‌ ಕುಂದಾಪುರದ ಅಧ್ಯಕ್ಷ ಮನೋಜ್‌ ನಾಯಕ್‌ ಹಾಗೂ ಕಾರ್ಯದರ್ಶಿ ಕೆ.ವಿ. ನಾಯಕ್‌ ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com