ಸುಪ್ರೀತಾ ಸಾವು: ಮಹಿಳಾ ಆಯೋಗ ಸದಸ್ಯೆ ಪರಿಶೀಲನೆ

ಕುಂದಾಪುರ: ವಿದ್ಯಾರ್ಥಿನಿ ಸುಪ್ರೀತಾ ಪೂಜಾರಿ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಮಂಗಳವಾರ ರಾಜ್ಯ ಮಹಿಳಾ ಆಯೋಗ ಸದಸ್ಯೆ, ಹಿರಿಯ ನ್ಯಾಯವಾದಿ ಶ್ಯಾಮಲಾ ಭಂಡಾರಿ ಕುಂದಾಪುರದ ಕಾಲೇಜಿಗೆ ಭೇಟಿ ನೀಡಿ ಮಾಹಿತಿ ಪಡೆದರು. ಕಾಲೇಜಿನ ಪ್ರಾಂಶುಪಾಲರು, ಶಿಕ್ಷಕರು, ವಿದ್ಯಾರ್ಥಿಗಳಿಂದ ಮಾಹಿತಿ ಸ್ವೀಕರಿಸಿದ ಅವರು ವರದಿಯನ್ನು ಸರಕಾರಕ್ಕೆ ಸಲ್ಲಿಸುವುದಾಗಿ ತಿಳಿಸಿದರು. 
      ಸುಪ್ರೀತಾ ಪೂಜಾರಿ ಡೆತ್‌ನೋಟ್‌ನಲ್ಲಿ ಕಾಣಿಸಿರುವಂತೆ ಕಿರುಕುಳದಿಂದ ಆತ್ಮಹತ್ಯೆಗೆ ಮಾಡಿದ್ದೇ ಆದಲ್ಲಿ ಕಾನೂನಿನಡಿ ಏನು ಕ್ರಮ ಆಗಬೇಕೊ ಆ ನೆಲೆಯಲ್ಲಿ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು. ಡೆತ್‌ನೋಟ್‌ನ್ನು ಬಹಿರಂಗಪಡಿಸಿರುವ ಪೊಲೀಸರ ಕ್ರಮ ನ್ಯಾಯಸಮ್ಮತವಲ್ಲ. ಇದು ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನ ಎಂದು ಅವರು ತಿಳಿಸಿದರು. 
   ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದ ಅವರು, ಸುಪ್ರೀತಾ ಯಾವುದೊ ಒತ್ತಡದಿಂದ ಬಳಲುತ್ತಿರುವುದು ಕಾಲೇಜನ್ನು ಸಂದರ್ಶಿಸಿದ ಬಳಿಕ ವ್ಯಕ್ತವಾಗಿದೆ. ಆಕೆ ಸಹಪಾಠಿಗಳೊಂದಿಗೆ ನೋವು ಹಂಚಿಕೊಳ್ಳುವವಳಲ್ಲ ಎಂಬುದು ಗೊತ್ತಾಗಿದೆ. ಆಕೆಯ ಗುಣನಡತೆ ಬಗ್ಗೆ ಉತ್ತಮ ಮಾತುಗಳು ಕೇಳಿಬಂದಿವೆ. ಮಾನಸಿಕವಾಗಿ ಆಕೆ ನೊಂದುಕೊಂಡಿರುವ ಅಂಶಗಳ ಬಗ್ಗೆ ಸಮಗ್ರ ತನಿಖೆಯಾಗಬೇಕಾಗಿದೆ ಎಂದರು. 
    ಶಿರೂರು ವಿದ್ಯಾರ್ಥಿನಿ ರತ್ನಾ ಕೊಠಾರಿ ಸಾವಿನ ಕುರಿತಂತೆ ಈಗಾಗಲೆ ಸರಕಾರಕ್ಕೆ ಸಮಗ್ರ ವರದಿ ಸಲ್ಲಿಸಲಾಗಿದೆ. ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಮಲೆನಾಡು ಭಾಗದ ಮಹಿಳೆಯರು, ವಿದ್ಯಾರ್ಥಿನಿಯರ ಮೇಲಾಗುವ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com